ಬೆಳಗಾವಿ: ಗ್ಯಾರಂಟಿ ಯೋಜನೆಗಳಿಗೆ 60 ಸಾವಿರ ಕೋಟಿ ಹಣ ಬೇಕಾಗುತ್ತದೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಿಂದ ನಾಲ್ಕೈದು ಸಾವಿರ ಕೋಟಿ ಬರುತ್ತದೆ. ಹಾಗಾಗಿ, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಇಂಧನ ಬೆಲೆ ಏರಿಸಿಲ್ಲ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದರು.
ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತೈಲ ಬೆಲೆ ಏರಿಕೆ ಕುರಿತ ವಿಪಕ್ಷ ನಾಯಕರ ಟೀಕೆಗೆ ಹೀಗೆ ಪ್ರತಿಕ್ರಿಯಿಸಿದರು.
ರಾಜ್ಯವನ್ನು ಕಾಂಗ್ರೆಸ್ ಸರ್ಕಾರ ಹರಾಜಿಗಿಟ್ಟಿದೆ ಎಂಬ ಅಭಯ್ ಪಾಟೀಲ ಆರೋಪದ ಕುರಿತು ಪ್ರತಿಕ್ರಿಯಿಸಿ, ಅವರು ಹೇಳಿದ್ದಕ್ಕೆಲ್ಲಾ ಉತ್ತರಿಸಲು ಆಗೋದಿಲ್ಲ. ಎಷ್ಟು ಬಾರಿ ಇವರು ಸಿಲಿಂಡರ್ ಬೆಲೆ ಏರಿಸಿದ್ದಾರೆ. ಎಣ್ಣೆ, ರಸಗೊಬ್ಬರ ಏರಿಸಿದ್ದಕ್ಕೆ ಏನೂ ಹೇಳುವುದಿಲ್ಲ. ಈಗ ಮೂರು ರೂ. ಪೆಟ್ರೋಲ್ ದರ ಏರಿಸಿದ್ದಕ್ಕೆ ಆಕಾಶ ಮೈಮೇಲೆ ಬಿದ್ದ ಹಾಗೆ ಮಾಡುತ್ತಿದ್ದಾರೆ. 400 ರೂ. ಇದ್ದ ಸಿಲಿಂಡರ್ ಬೆಲೆಯನ್ನು 1,200 ರೂ.ಗೆ ಏರಿಸಿದರು. ಹಾಗಾಗಿ, ಅವರ ಹೇಳಿಕೆಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮಲ್ಲಿ ದರ ಕಡಿಮೆಯಿದೆ. ಚುನಾವಣೆ ಬಂದಾಗ ಬೊಮ್ಮಾಯಿ ಸರ್ಕಾರದಲ್ಲಿ 5 ರೂ. ಕಡಿಮೆ ಮಾಡಿದ್ದರು ಎಂದು ಸಮರ್ಥಿಸಿಕೊಂಡರು.
ಮೇವು ಖರೀದಿ ಅಕ್ರಮ:ಮೇವು ಖರೀದಿಗೆ ಮಂಜೂರಾದ 6 ಕೋಟಿ ರೂಪಾಯಿ ಅನುದಾನಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಕ್ಕೆ, ಪಶು ಸಂಗೋಪನೆ ಇಲಾಖೆಯಲ್ಲಿ ಮೇವು ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬುದು ನಮ್ಮ ಗಮನಕ್ಕೆ ಬಂದಿಲ್ಲ. ಮೇವು ಖರೀದಿಯಲ್ಲಿ ಅಕ್ರಮ ನಡೆದಿದೆ ಎಂಬ ಬಗ್ಗೆ ಯಾರು ದೂರು ನೀಡಿಲ್ಲ. ಹಾಗೇನಾದರೂ ಅಕ್ರಮ ನಡೆದಿದ್ದರೆ ಈ ಕುರಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರಿಗೆ ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳಲು ಸೂಚಿಸುತ್ತೇನೆ ಎಂದು ತಿಳಿಸಿದರು.