ಕರ್ನಾಟಕ

karnataka

ETV Bharat / state

ಸಿಎಂ ಜನಸ್ಪಂದನ ಕಾರ್ಯಕ್ರಮಕ್ಕೆ ಬಿಎಂಟಿಸಿಯಿಂದ ಉಚಿತ ಬಸ್ ಸೇವೆ; ಕಂದಾಯ ಇಲಾಖೆ ಕೌಂಟರ್​ನಲ್ಲಿ ಜನವೋ ಜನ - CM Janaspandan

ಬೆಂಗಳೂರಿನಲ್ಲಿ ನಡೆಯುತ್ತಿರುವ ಸಿಎಂ ಜನಸ್ಪಂದನ ಕಾರ್ಯಕ್ರಮಕ್ಕೆ ಬರುವ ಮತ್ತು ಹೋಗುವ ಜನರಿಗಾಗಿ ಬಿಎಂಟಿಸಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ.

ಜನಸ್ಪಂದನ ಕಾರ್ಯಕ್ರಮ
ಜನಸ್ಪಂದನ ಕಾರ್ಯಕ್ರಮ

By ETV Bharat Karnataka Team

Published : Feb 8, 2024, 12:07 PM IST

Updated : Feb 8, 2024, 1:56 PM IST

ಸಿಎಂ ಜನಸ್ಪಂದನ ಕಾರ್ಯಕ್ರಮಕ್ಕೆ ಹರಿದು ಬಂದ ಜನ ಸಾಗರ

ಬೆಂಗಳೂರು : ಇಂದು ವಿಧಾನಸೌಧದಲ್ಲಿ ಬೆಳಗ್ಗೆಯಿಂದ ಸಂಜೆಯವರೆಗೆ ಮುಖ್ಯಮಂತ್ರಿ ಜನಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಇದರ ಪ್ರಯುಕ್ತ ಕೆಂಪೇಗೌಡ ಬಸ್ ನಿಲ್ದಾಣ/ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ವಿಧಾನಸೌಧಕ್ಕೆ ಬಿಎಂಟಿಸಿ ಬಸ್​ಗಳ ಉಚಿತ ಸೇವೆಯನ್ನು ಒದಗಿಸಲಾಗಿದೆ.

ಬಸ್ ಅಥವಾ ರೈಲ್ವೆ ನಿಲ್ದಾಣದಿಂದ ಬರುವ/ಹೋಗುವ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಸಂಸ್ಥೆಯ ವತಿಯಿಂದ ಎರಡು ಬಸ್​ಗಳ ವ್ಯವಸ್ಥೆಯನ್ನು ಮಾಡುವಂತೆ ಸರ್ಕಾರದಿಂದ ಕೋರಿಕೆ ಬಂದಿತ್ತು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ)ಯ ಅಧಿಕಾರಿಗಳು ತಿಳಿಸಿದ್ದಾರೆ. ಕೋರಿಕೆಗೆ ಅನುಗುಣವಾಗಿ ಘಟಕ-2 ರಿಂದ ಎರಡು ಬಸ್​ಗಳನ್ನು ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಈ ಸೇವೆಯು ಉಚಿತವಾಗಿದ್ದು, ಸಾರ್ವಜನಿಕರು ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಭಾರಿ ಪ್ರಮಾಣದಲ್ಲಿ ಹರಿದು ಬರುತ್ತಿರುವ ಜನಸಾಗರ : ರಾಜ್ಯದ ವಿವಿಧೆಡೆಯಿಂದ ಜನರು ತಮ್ಮ ಅಹವಾಲನ್ನು ಹಿಡಿದುಕೊಂಡು ವಿಧಾನಸೌಧದತ್ತ ಆಗಮಿಸುತ್ತಿದ್ದಾರೆ. ಇತ್ತ ಭದ್ರತಾ ಸಿಬ್ಬಂದಿ ಜನರನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿದ್ದಾರೆ‌. ಸಚಿವಾಲಯದ ಎಲ್ಲಾ ಇಲಾಖೆಗಳ ಸ್ಟಾಲ್​ಗಳನ್ನು ಅಳವಡಿಸಲಾಗಿದ್ದು, ಪ್ರತಿ ಸ್ಟಾಲ್​ಗಳಿಗೆ ಸಂಖ್ಯೆಯನ್ನು ನೀಡಲಾಗಿದೆ. ಜನತಾ ದರ್ಶನಕ್ಕಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದ್ದು, ನಾಗರಿಕರನ್ನು ಪ್ರಥಮ ಹಂತದಲ್ಲಿ ವಿಚಾರಿಸಿ, ಯಾವ ಇಲಾಖೆಯ ಸ್ಟಾಲ್​ಗೆ ನಿರ್ದೇಶಿಸಿ ಕಳಿಸಬೇಕು ಎಂದು ವಿಂಗಡಿಸಲು ಅನುಭವಿ ಅಧಿಕಾರಿ - ಸಿಬ್ಬಂದಿಗಳ ವಿಚಾರಣಾ ಕೌಂಟರ್ (enquiry counter) ತೆರೆಯಲಾಗಿದೆ.

ಕೌಂಟರ್​ಗಳಲ್ಲಿ ನಾಗರಿಕರ ಮೊಬೈಲ್ ನಂಬರ್ ಮತ್ತು ಪ್ರಾಥಮಿಕ ವಿವರಗಳನ್ನು ದಾಖಲಿಸಲು ರಿಜಿಸ್ಟರ್ ಹಾಗೂ ಅವರನ್ನು ಯಾವ ಇಲಾಖೆಗೆ ಕಳಿಸಲಾಗಿದೆ ಎಂದು ಸ್ಟಾಲ್ ನಂಬರ್ ನಮೂದಿಸಲಾಗುವುದು. ಸ್ಟಾಲ್​ಗಳಲ್ಲಿ ನಾಗರಿಕರಿಗೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಆದರೆ ಕೌಂಟರ್​ಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನಸಂದಣಿ ಉಂಟಾಗಿರುವ ಕಾರಣ ಸಿಬ್ಬಂದಿಗಳು ಜನರನ್ನು ನಿಭಾಯಿಸಲು ಕಸರತ್ತು ನಡೆಸುತ್ತಿದ್ದಾರೆ.

ಕಂದಾಯ ಇಲಾಖೆ ಕೌಂಟರ್​ನಲ್ಲಿ ಜನಸಂದಣಿ :ಕಂದಾಯ ಇಲಾಖೆ ಕೌಂಟರ್​ನಲ್ಲಿ ಅಹವಾಲು ಸಲ್ಲಿಸುವವರ ಸಂಖ್ಯೆ ಹೆಚ್ಚಾಗಿದೆ. ಈ ಹಿನ್ನೆಲೆ ತಕ್ಷಣ ತೀರ್ಮಾನ ತೆಗೆದುಕೊಂಡು ಮತ್ತೊಂದು ಕೌಂಟರ್ ತೆರೆಯಲಾಗಿದೆ. ಕಂದಾಯ ಇಲಾಖೆ ಅರ್ಜಿದಾರರು ಕೌಂಟರ್ 1 ರಲ್ಲಿ ಅರ್ಜಿ ಸಲ್ಲಿಸಿ ಕೌಂಟರ್ ನಂಬರ್ 29 ರಲ್ಲಿ ಕೂರಲು ವ್ಯವಸ್ಥೆ ಮಾಡಲಾಗಿದೆ. ಸಿಎಂ ಸಿದ್ದರಾಮಯ್ಯ ಖುದ್ದು ಕಂದಾಯ ಇಲಾಖೆ ಕೌಂಟರ್​ಗೆ ಆಗಮಿಸಿ ಅಹವಾಲು ಸ್ವೀಕಾರ ಮಾಡಿದರು.

ಉಳಿದಂತೆ ಗ್ರಾಮೀಣಾಭಿವೃದ್ಧಿ ಇಲಾಖೆ, ಪೌರಾಡಳಿತ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗೃಹ ಇಲಾಖೆ ಕೌಂಟರ್ ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನಸಂದಣಿ ಕಂಡುಬರುತ್ತಿದೆ.

ಇದನ್ನೂ ಓದಿ :ವಿಧಾನಸೌಧದಲ್ಲಿ ಇಂದು ರಾಜ್ಯ ಮಟ್ಟದ ಜನತಾ ದರ್ಶನ; ಹರಿದು ಬಂದ‌ ಜನ ಸಾಗರ

Last Updated : Feb 8, 2024, 1:56 PM IST

ABOUT THE AUTHOR

...view details