ಬೆಂಗಳೂರು: ಮಾಜಿ ಸಂಸದರ ಸಹೋದರಿ ಎಂದು ನಂಬಿಸಿ ಚಿನ್ನ ಪಡೆದು ವಂಚಿಸಿದ ಪ್ರಕರಣದ ಆರೋಪಿಗಳಾದ ಐಶ್ವರ್ಯಾ ಗೌಡ ಹಾಗೂ ಆಕೆಯ ಪತಿ ಹರೀಶ್ ಕೆ.ಎನ್.ಗೆ ಕೋರ್ಟ್ಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಇಂದು ವಿಚಾರಣೆಗೆ ಹಾಜರಾಗಿದ್ದ ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದ ಚಂದ್ರಾಲೇಔಟ್ ಠಾಣೆ ಪೊಲೀಸರು ಕೋರಮಂಗಲದ ಎನ್‌ಜಿವಿಯಲ್ಲಿರುವ ನ್ಯಾಯಾಧೀಶರ ನಿವಾಸದ ಮುಂದೆ ಹಾಜರುಪಡಿಸಿದ್ದರು. ಇಬ್ಬರೂ ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ.
ಮಾಜಿ ಸಂಸದರ ಸಹೋದರಿಯೆಂದು ನಂಬಿಸಿ ಖರೀದಿ ನೆಪದಲ್ಲಿ 9.82 ಕೋಟಿ ರೂ. ಮೌಲ್ಯದ 14 ಕೆ.ಜಿ. 660 ಗ್ರಾಂ ಚಿನ್ನ ವಂಚಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿತ್ತು. ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಚಿನ್ನದಂಗಡಿಯ ಮಾಲಕಿ ವನಿತಾ ಎಸ್. ಐತಾಳ್ ಅವರು ನೀಡಿದ ದೂರಿನನ್ವಯ ಐಶ್ವರ್ಯಾ ಗೌಡ, ಹರೀಶ್ ಕೆ. ಎನ್ ಹಾಗೂ ನಟ ಧರ್ಮೇಂದ್ರ ಬಿ ವಿರುದ್ಧ ಚಂದ್ರಾಲೇಔಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಇದೇ ಪ್ರಕರಣದಲ್ಲಿ ಚಿನ್ನದಂಗಡಿಯ ಮಾಲಕಿ ವನಿತಾ ಎಸ್. ಐತಾಳ್ ಅವರಿಗೆ ಕರೆ ಮಾಡಿ ಡಿ. ಕೆ. ಸುರೇಶ್ ಅವರ ಧ್ವನಿಯಲ್ಲಿ ಮಾತನಾಡಿರುವ ಆರೋಪ ಎದುರಿಸುತ್ತಿರುವ ನಟ ಧರ್ಮೇಂದ್ರಗೆ ಬಂಧನದ ಭೀತಿ ಎದುರಾಗಿದೆ.
ಇದನ್ನೂ ಓದಿ:ದೊಡ್ಡಬಳ್ಳಾಪುರ: ಹಣ ಕೇಳಿದ ಸ್ನೇಹಿತನ ಹತ್ಯೆ, ಇಬ್ಬರು ಆರೋಪಿಗಳ ಬಂಧನ