ಬೆಂಗಳೂರು:ತಿರುಪತಿ ತಿಮ್ಮಪ್ಪನ ವಿಶೇಷ ದರ್ಶನದ ಅವಕಾಶ ಕೊಡಿಸುವುದಾಗಿ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಮ್ಯಾನೇಜರ್ಗೆ ವಂಚಿಸಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ ಹೆಸರಿನಲ್ಲಿ ವಂಚಿಸಲಾಗಿದ್ದು, ಧೋನಿಯ ಮ್ಯಾನೇಜರ್ ಸ್ವಾಮಿನಾಥನ್ ಶಂಕರ್ ಎಂಬುವವರು ನೀಡಿದ ದೂರಿನ ಅನ್ವಯ ಹೆಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪೊಲೀಸರಿಗೆ ನೀಡಿದ ದೂರಿನಲ್ಲಿ ಏನಿದೆ?:ಕಳೆದ ವರ್ಷ ಅಕ್ಟೋಬರ್‌ನಲ್ಲಿ ಸ್ವಾಮಿನಾಥನ್ ಶಂಕರ್ ಅವರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿಯೊಬ್ಬ 'ತಾನು ನಕುಲ್, ಹಣಕಾಸು ಸಚಿವರ ಆಪ್ತ ಸಹಾಯಕ' ಎಂದು ಪರಿಚಯಿಸಿಕೊಂಡಿದ್ದ. ಅದರಂತೆ ಅಕ್ಟೋಬರ್ 29 ರಂದು ಸಂದೀಪ್ ಹಾಗೂ ಸಲ್ಮಾನ್ ಎಂಬುವವರು ಐಟಿಸಿ ಬೆಂಗಾಲ್ ಹೋಟೆಲ್ನಲ್ಲಿ ತಮ್ಮನ್ನು ಭೇಟಿಯಾಗಿದ್ದರು.
ಅದೇ ಸಂಧರ್ಭದಲ್ಲಿ 'ನೀವು ಯಾವಾಗ ಬೇಕೆಂದರೂ ತಿರುಪತಿಯ ವೆಂಕಟೇಶ್ವರ ದೇವರ ವಿಶೇಷ ದರ್ಶನಕ್ಕೆ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ನವೆಂಬರ್ 30ರಂದು ತನಗೆ ಕರೆ ಮಾಡಿ 12 ಮಂದಿಗೆ ವಿಶೇಷ ದರ್ಶನದ ಪಾಸ್ ನೀಡಲಾಗುವುದು ಎಂದು ತಿಳಿಸಿದ್ದರು. ಈ ಸಂದರ್ಭದಲ್ಲಿ ನಾನು ದುಬೈನಲ್ಲಿ ಇದ್ದೇನೆ. ಬೇರೆಯವರಿಗೆ ಕೊಡಿ ಎಂದಾಗ ನೀವೇ ಯಾರಿಗಾದರೂ ಪ್ರೊಟೋಕಾಲ್ ಲೆಟರ್ ನೀಡಿ ಎಂದು ಹೇಳಿದ್ದರು.