ಮಂಗಳೂರು: ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆ ಕ್ಷೇತ್ರಕ್ಕೆ ನಡೆಯಲಿರುವ ಉಪಚುನಾವಣೆಗೆ ನಾಮಪತ್ರ ವಾಪಸ್ ಪಡೆಯಲು ಇಂದು ಕೊನೆಯ ದಿನವಾಗಿತ್ತು. ಇಂದು ಒಬ್ಬರು ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ ನಾಲ್ವರು ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಮುಹಮ್ಮದ್ ರಿಯಾಝ್ (ಪಕ್ಷೇತರ) ತಮ್ಮ ನಾಮಪತ್ರ ಹಿಂಪಡೆದಿದ್ದಾರೆ. ಅಂತಿಮವಾಗಿ ಕಿಶೋರ್ ಬಿ.ಆರ್. (ಬಿಜೆಪಿ), ರಾಜು ಪೂಜಾರಿ (ಕಾಂಗ್ರೆಸ್), ಅನ್ವರ್ ಸಾದತ್ (ಎಸ್ಡಿ) ಮತ್ತು ದಿನಕರ ಉಳ್ಳಾಲ್ (ಪಕ್ಷೇತರ) ಅವರು ಕಣದಲ್ಲಿದ್ದಾರೆ. ಅ.21ರಂದು ಚುನಾವಣೆ ನಡೆಯಲಿದೆ.
ವೀಕ್ಷಕರಿಂದ ಪರಿಶೀಲನೆ: ಚುನಾವಣಾ ಆಯೋಗದ ವೀಕ್ಷಕರಾದ ಪಂಕಜ್ ಕುಮಾರ್ ಪಾಂಡೆ ಸೋಮವಾರ ಉಪಚುನಾವಣೆಯ ಸಿದ್ಧತೆ ಪರಿಶೀಲಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಅವರು ಮತಗಟ್ಟೆಗಳ ಸಿದ್ಧತೆ, ಚುನಾವಣಾ ಸಿಬ್ಬಂದಿ ನೇಮಕ, ಮತ ಪತ್ರಗಳ ಮುದ್ರಣ, ಮತದಾರರ ಪಟ್ಟಿ ಹಾಗೂ ಇತರ ಚುನಾವಣೆ ಸಿದ್ಧತೆಗಳ ಮಾಹಿತಿ ಪಡೆದರು. ಮತಗಟ್ಟೆ ಸಿಬ್ಬಂದಿಗೆ ತರಬೇತಿ ಹಾಗೂ ಮತ ಎಣಿಕೆ ಕೇಂದ್ರದಲ್ಲಿ ಕೈಗೊಳ್ಳಬೇಕಾದ ವ್ಯವಸ್ಥೆಗಳ ಬಗ್ಗೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.