ಬೆಂಗಳೂರು :ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ವೇಳೆ ಸಂಚಾರ ಪೊಲೀಸರ ಜೊತೆ ಕಿರಿಕ್ ಮಾಡಿಕೊಂಡು ಅವಾಚ್ಯವಾಗಿ ನಿಂದಿಸಿದ್ದ ನಾಲ್ವರು ಆರೋಪಿಗಳನ್ನ ಕೊಡಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಹೆಬ್ಬಾಳ ಸಂಚಾರಿ ಠಾಣಾ ಪೊಲೀಸ್ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ ಆದೇಶ್, ಅಬ್ದುಲ್, ಕಿರಣ್ ಹಾಗೂ ನವೀನ್ ಕುಮಾರ್ ಎಂಬಾತನನ್ನ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿ 12 ಗಂಟೆ ಸುಮಾರಿಗೆ ಹೆಬ್ಬಾಳ ಸರ್ಕಲ್ ರಿಂಗ್ ರಸ್ತೆಯ ಬಳಿ ಪೊಲೀಸರು ಡ್ರಿಂಕ್ ಅಂಡ್ ಡ್ರೈವ್ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, ಕಾರಿನಲ್ಲಿ ಬಂದಿದ್ದ ನಾಲ್ವರನ್ನು ಪೊಲೀಸರು ತಡೆದಿದ್ದರು. ತಪಾಸಣೆ ಸಂದರ್ಭದಲ್ಲಿ ಕಾರಿನ ಚಾಲಕ ನವೀನ್ ಕುಮಾರ್ ಮದ್ಯಪಾನ ಮಾಡಿರುವುದು ದೃಢವಾಗಿತ್ತು. ಈ ವೇಳೆ, ನವೀನ್ ಕುಮಾರ್ ಮತ್ತು ಆತನ ಸ್ನೇಹಿತರು ಸಂಚಾರಿ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು. ಬಳಿಕ ಆರೋಪಿತರನ್ನು ವಶಕ್ಕೆ ಪಡೆದ ಹೆಬ್ಬಾಳ ಸಂಚಾರಿ ಠಾಣಾ ಪೊಲೀಸರು, ಕೊಡಿಗೆಹಳ್ಳಿ ಠಾಣಾ ಪೊಲೀಸರಿಗೊಪ್ಪಿಸಿದ್ದಾರೆ.