ಕರ್ನಾಟಕ

karnataka

ETV Bharat / state

ಕೇಂದ್ರ ವಿತರಿಸುವ ಅಕ್ಕಿಗೆ ಶೇ.1ರಷ್ಟು ಪೌಷ್ಟಿಕಾಂಶ ಸೇರ್ಪಡೆ: ಪ್ರಲ್ಹಾದ್​ ಜೋಶಿ - FORTIFIED RICE DISTRIBUTION

ಕೇಂದ್ರ ಸರ್ಕಾರ ವಿತರಣೆ ಮಾಡುವ ಅಕ್ಕಿಗೆ ಶೇ.1ರಷ್ಟು ಪೌಷ್ಟಿಕಾಂಶ ಸೇರ್ಪಡೆ ಮಾಡಲಾಗುವುದು. 5 ವರ್ಷ ಸಾರವರ್ಧಿತ ಅಕ್ಕಿ ನೀಡುವ ಯೋಜನೆ ಇದಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ತಿಳಿಸಿದ್ದಾರೆ.

pralhad joshi
ಪ್ರಲ್ಹಾದ್​ ಜೋಶಿ (ETV Bharat)

By ETV Bharat Karnataka Team

Published : Oct 11, 2024, 11:04 AM IST

ಹುಬ್ಬಳ್ಳಿ:''ಮುಂದಿನ ದಿನಗಳಲ್ಲಿಕೇಂದ್ರ ಸರ್ಕಾರ ವಿತರಿಸುವ ಪಡಿತರ ಅಕ್ಕಿಗೆ ಶೇಕಡಾ 1ರಷ್ಟು ಪೌಷ್ಟಿಕಾಂಶ ಸೇರಿಸಲಾಗುತ್ತದೆ'' ಎಂದು ಕೇಂದ್ರ ಸಚಿವ ಆಹಾರ ಸಚಿವ ಪ್ರಲ್ಹಾದ್​ ಜೋಶಿ ತಿಳಿಸಿದರು. ಹುಬ್ಬಳ್ಳಿಯಲ್ಲಿ ಇಂದು ಮಾತನಾಡಿದ ಅವರು, ''ಪೌಷ್ಟಿಕಾಂಶ ಸೇರಿಸಿ ಸಾರವರ್ಧಿತ ಅಕ್ಕಿ ತಯಾರಿಸಿ, ವಿತರಣೆ ಮಾಡಲು ಕೇಂದ್ರ ಕ್ರಮ ಕೈಗೊಂಡಿದೆ. ಗರೀಬ್ ಕಲ್ಯಾಣ ಮತ್ತು ಅಂತ್ಯೋದಯ ಅನ್ನ ಯೋಜನೆಯಡಿ ವಿತರಿಸುವ ಅಕ್ಕಿಗೆ ಇನ್ನು ಮುಂದೆ ಶೇ.1ರಷ್ಟು ಪೌಷ್ಟಿಕಾಂಶ ಸೇರಿಸಲಾಗುವುದು'' ಎಂದು ಹೇಳಿದರು.

''ರಕ್ತಹೀನತೆಯನ್ನು ಹೋಗಲಾಡಿಸಲು ಪೌಷ್ಠಿಕಾಂಶಯುಕ್ತ ಹಾಗೂ ಸಾರವರ್ಧಿತ ಅಕ್ಕಿ ವಿತರಣೆಗೆ ಕೇಂದ್ರ ಸರ್ಕಾರ ಮುಂದಾಗಿದೆ. 5 ವರ್ಷಗಳ ಕಾಲ ಬಲವರ್ಧಿತ ಅಕ್ಕಿ ವಿತರಣೆಗೆ ಅನುಮೋದನೆ ನೀಡಲಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಲ್ಲಿ ಪ್ರತಿ ತಿಂಗಳು ಒಬ್ಬ ವ್ಯಕ್ತಿಗೆ 5 ಕೆಜಿ ಅಕ್ಕಿ ಮತ್ತು ಅಂತ್ಯೋದಯ ಅನ್ನ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ 35 ಕೆಜಿ ಆಹಾರ ಧಾನ್ಯ ವಿತರಿಸಲಾಗುತ್ತಿದೆ'' ಎಂದರು.

18,000 ಕೋಟಿ ವೆಚ್ಚ: ''ದೇಶಾದ್ಯಂತ ಈ ಪೌಷ್ಟಿಕಾಂಶಯುಕ್ತ ಅಕ್ಕಿ ವಿತರಣೆ ಯೋಜನೆಗೆ 18,000 ಕೋಟಿ ರೂ. ವೆಚ್ಚವಾಗುತ್ತದೆ. ಕಡುಬಡವರನ್ನು ರಕ್ತಹೀನತೆಯಿಂದ ಕಾಪಾಡಲು ಪ್ರಯೋಜನವಾಗಲಿದೆ'' ಎಂದು ಸಚಿವ ಪ್ರಲ್ಹಾದ್​​ ಜೋಶಿ ಹೇಳಿದರು.

ರಾಜ್ಯ ಸರ್ಕಾರದ್ದು ಯಾವ ಭಾಗ್ಯವೂ ಇಲ್ಲ: ''ರಾಜ್ಯ ಸರ್ಕಾರ ಅನ್ನಭಾಗ್ಯ ಘೋಷಣೆ ಮಾಡಿದ್ದಷ್ಟೇ. ಯಾವ ಭಾಗ್ಯವೂ ಇಲ್ಲ. ಕೇಂದ್ರ ಸರ್ಕಾರ ಪೂರೈಸುವ 5 ಕೆಜಿ ಅಕ್ಕಿಯನ್ನಷ್ಟೇ ನೀಡುತ್ತಿದ್ದಾರೆ'' ಎಂದು ಇದೇ ವೇಳೆ ಸಚಿವ ಜೋಶಿ ರಾಜ್ಯ ಸರ್ಕಾರವನ್ನು ಟೀಕಿಸಿದರು.

ಇದನ್ನೂ ಓದಿ:ಕೋವಿಡ್ ಅವ್ಯವಹಾರ: ಡಿಸಿಎಂ ನೇತೃತ್ವದಲ್ಲಿ ಸಂಪುಟ ಉಪಸಮಿತಿ ರಚಿಸಿ ಸಿಎಂ ಆದೇಶ

ಕೇಂದ್ರ ಸಚಿವ ಸಂಪುಟ ತೀರ್ಮಾನ: ಬಜೆಟ್​​ನಲ್ಲಿ ಘೋಷಿಸಿದಂತೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ) ಅಡಿ 2028ರವರೆಗೆ ಉಚಿತವಾಗಿ ಪಡಿತರ ವಿತರಿಸುವ ಯೋಜನೆಯನ್ನು ಮುಂದುವರಿಸಲು ಕೇಂದ್ರ ಸರ್ಕಾರ ಇತ್ತೀಚೆಗೆ ನಿರ್ಧರಿಸಿತ್ತು.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತ್ತು. ಆಹಾರ ನಿಯಂತ್ರಕ ಸಂಸ್ಥೆಯಾದ ಎಫ್‌ಎಸ್‌ಎಸ್‌ಎಐ ಸೂಚಿಸಿದ ಮಾನದಂಡಗಳ ಪ್ರಕಾರ, ಸೂಕ್ಷ್ಮ ಪೋಷಕಾಂಶಗಳಿಂದ (ಕಬ್ಬಿಣ, ಫೋಲಿಕ್ ಆಮ್ಲ, ವಿಟಮಿನ್ ಬಿ12) ಸಮೃದ್ಧವಾಗಿರುವ ಅಕ್ಕಿಯನ್ನು ಪೂರೈಕೆ ಮಾಡಲಾಗುತ್ತಿದೆ.

ಇದನ್ನೂ ಓದಿ:ಪಿಎಂ ಗರೀಬ್​​ ಕಲ್ಯಾಣ್​​ ಯೋಜನೆಯಡಿ 2028ರವರೆಗೆ ಉಚಿತ ಅಕ್ಕಿ ವಿತರಣೆಗೆ ಕೇಂದ್ರ ಒಪ್ಪಿಗೆ

ABOUT THE AUTHOR

...view details