ಮೈಸೂರು : ನನಗೆ ಯಾವುದೇ ಬಣ ಇಲ್ಲ, ನಾನೊಬ್ಬ ಬಿಜೆಪಿ ಕಾರ್ಯಕರ್ತ. ಅಧಿಕಾರ ಇರಲಿ, ಬಿಡಲಿ, ಜನರ ಪರವಾಗಿ ಹೋರಾಟ ಮಾಡುತ್ತೇನೆ ಎಂದು ವಕ್ಫ್ ವಿರುದ್ಧದ ಹೋರಾಟದಲ್ಲಿ ತಮ್ಮ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿದ್ದಕ್ಕೆ ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ಇಂದು ನಗರದ ಜಲದರ್ಶಿನಿ ಅತಿಥಿ ಗೃಹದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಮೈಸೂರು, ಚಾಮರಾನಗರ ಮತ್ತು ನಾನು ಪ್ರತಿನಿಧಿಸಿದ್ದ ಕೊಡಗು ಜಿಲ್ಲೆಯಲ್ಲಿ ವಕ್ಫ್ ಹೆಸರಿಗೆ ಸರ್ಕಾರಿ ಆಸ್ತಿಗಳನ್ನು ಬದಲಾಯಿಸಿದ ವಕ್ಫ್ ವಿರುದ್ಧ ನನ್ನ ಹೋರಾಟ ಅಷ್ಟೇ , ನಾನು ಜನರ ಕೆಲಸ ಮಾಡಲು ಬಂದಿದ್ದೇನೆ. ಅಧಿಕಾರ ಇದ್ದಾಗ ಜನಪರ ಕೆಲಸ ಮಾಡಿದ್ದೇನೆ. ಅಧಿಕಾರ ಇಲ್ಲದಿದ್ದರೂ ಜನಪರ ಹೋರಾಟದಲ್ಲಿ ಭಾಗಿಯಾಗಿದ್ದೇನೆ ಎಂದರು.
ರೈತರು ಆತಂಕದಲ್ಲಿದ್ದಾರೆ : ವಕ್ಫ್ ನೋಟಿಫಿಕೇಷನ್ ಆಗಿರುವ ದಾಖಲೆಗಳನ್ನ ಬಿಡುಗಡೆ ಮಾಡಿದ ಪ್ರತಾಪ್ ಸಿಂಹ, ಯಾವಾಗ ಆರ್.ಟಿ.ಸಿ. ಗಳು ಬದಲಾಗುತ್ತವೆ ಎಂಬ ಆತಂಕದಲ್ಲಿ, ಮಠಗಳು ಮತ್ತು ರೈತರು ಇದ್ದಾರೆ. ಈ ವಿಚಾರದಲ್ಲಿ ಸಿದ್ದರಾಮಯ್ಯ ಅವರ ಆಡಳಿತದಿಂದ ಜನ ರೋಸಿ ಹೋಗಿದ್ದಾರೆ. ಸಿದ್ದರಾಮಯ್ಯ ಅವರ ಸರ್ಕಾರ ಬಂದಾಗ ಈ ರೀತಿಯಾಗುವುದು ಮಾಮೂಲು. ಈಗ ವಕ್ಫ್ ಆಸ್ತಿ ವಿಚಾರದಲ್ಲಿ ರೈತರಿಗೆ ಆತಂಕ ಸೃಷ್ಟಿಯಾಗಿದೆ. ಇದರಲ್ಲಿ ಗೆಜೆಟ್ ನೋಟಿಫಿಕೇಷನ್ ಹೊರಡಿಸಿದ್ದು, ಮೈಸೂರು - ಚಾಮರಾಜನಗರ ಭಾಗದಲ್ಲಿ 600ಕ್ಕೂ ಹೆಚ್ಚು ಎಕರೆ ಭೂಮಿ ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಆರೋಪಿಸಿದರು.