ಕರ್ನಾಟಕ

karnataka

ETV Bharat / state

ಕಾಂಗ್ರೆಸ್ ಪಕ್ಷದವರೇ ಸಿದ್ದರಾಮಯ್ಯ ಮುಗಿಸಲು ಹೊರಟಿದ್ದಾರೆ : ಮಾಜಿ ಸಚಿವ ರಮೇಶ್ ಜಾರಕಿಹೊಳಿ - Former Minister Ramesh Jarkiholi

ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಅವರು ಸಿಎಂ ಸಿದ್ದರಾಮಯ್ಯ ಕುರಿತು ಮಾತನಾಡಿದ್ದಾರೆ. ಕಾಂಗ್ರೆಸ್​ ಪಕ್ಷದವರೇ ಸಿದ್ದರಾಮಯ್ಯ ಅವರನ್ನು ಮುಗಿಸಲು ಮುಂದಾಗಿದ್ದಾರೆ ಎಂದು ಹೇಳಿದ್ದಾರೆ.

former-minister-ramesh-jarkiholi
ಮಾಜಿ ಸಚಿವ ರಮೇಶ್ ಜಾರಕಿಹೊಳಿ (ETV Bharat)

By ETV Bharat Karnataka Team

Published : Sep 27, 2024, 4:57 PM IST

ಬೆಳಗಾವಿ : ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಲು ಅವರ ಪಕ್ಷದವರೇ ಕೆಲಸ ಮಾಡಿದ್ದಾರೆ. ಅದು ಓಪನ್ ಸಿಕ್ರೇಟ್, ಯಾರು ಅಂತಾ ಜಗಜ್ಜಾಹೀರಾಗಿದೆ. ಪದೇ ಪದೆ ಅವರ ಹೆಸರು ತೆಗೆದುಕೊಳ್ಳಲ್ಲ. ಇದಕ್ಕೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ‌. ನಾವು ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ ಎನ್ನುವ ಮೂಲಕ ಇದರಲ್ಲಿ ಡಿಸಿಎಂ ಡಿ. ಕೆ ಶಿವಕುಮಾರ ಕೈವಾಡವಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಆರೋಪ ಮಾಡಿದರು.

ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ಸರ್ಕಾರದಿಂದ ಕಡಿವಾಣ ವಿಚಾರಕ್ಕೆ ನಗರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಸರ್ಕಾರ ಸಿಬಿಐ ತನಿಖೆಗೆ ಕಡಿವಾಣ ಹಾಕಲಿ,‌ ನ್ಯಾಯಾಲಯ ಇದೆಯಲ್ಲ‌. ಸಿದ್ದರಾಮಯ್ಯ ವಿರುದ್ಧ ಎಫ್ಐಆರ್‌ಗೆ ನ್ಯಾಯಾಲಯ ಆದೇಶಿಸಿದೆ. ಈ ಹಂತದಲ್ಲಿ ಸಿಬಿಐಗೆ ಕಡಿವಾಣ ಹಾಕಿದ್ದು ಸಂಶಯ ಮೂಡುತ್ತದೆ. ಸಿಎಂ, ಡಿಸಿಎಂ ಮೇಲೆ ಗುರುತರ ಆರೋಪಗಳಿವೆ. ಸರ್ಕಾರದ ನಿರ್ಧಾರದ ಬಗ್ಗೆ ಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶಗಳಿವೆ ಎಂದು ತಿರುಗೇಟು ನೀಡಿದರು.

ಮಾಜಿ ಸಚಿವ ರಮೇಶ್ ಜಾರಕಿಹೊಳಿ (ETV Bharat)

ಡಿಸೆಂಬರ್‌ನಲ್ಲಿ ಕಾಂಗ್ರೆಸ್ ಸರ್ಕಾರ ಪತನ ಆಗುತ್ತೆ ಎಂಬ ಚರ್ಚೆ ವಿಚಾರಕ್ಕೆ, 2028ಕ್ಕೆ 120-140 ಸ್ಥಾನ ಗೆಲ್ಲಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ‌. 2028ಕ್ಕೆ ಪೂರ್ಣಪ್ರಮಾಣದ ಸರ್ಕಾರ ತರಲು ನಾವು ಪ್ರಯತ್ನಿಸುತ್ತಿದ್ದೇವೆ. ಸಿದ್ದರಾಮಯ್ಯ ರಾಜೀನಾಮೆ ವಿಚಾರದಲ್ಲಿ ನಮ್ಮ ಪಕ್ಷ‌ದ ನಿರ್ಣಯಕ್ಕೆ ನಾನು ಬದ್ಧನಿದ್ದೇನೆ. ಬಿಎಸ್‌ವೈ ವಿರುದ್ಧ ಈ ಹಿಂದೆ ಎಫ್ಐಆರ್‌ ಆದಾಗ ಸಿದ್ದರಾಮಯ್ಯ ಏನು ಹೇಳಿದ್ದರು. ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದ್ದರು. ಬಿಎಸ್‌ವೈ ವಿಚಾರದಲ್ಲಿ ತಾವು ಹೇಗೆ ನಡೆದುಕೊಂಡಿದ್ದಿರಿ ಎಂಬುದನ್ನು ನೆನೆಪಿಸಿಕೊಳ್ಳಿರಿ ಎಂದು ಪ್ರಶ್ನಿಸಿದರು.

ರಾಜಕೀಯವಾಗಿ ನನಗಿಂತ ಜ್ಯೂನಿಯರ್: ರಮೇಶ್ ಜಾರಕಿಹೊಳಿಯಂತಹ ನಾಯಕರು ಸಿದ್ಧಾಂತದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ವಿಜಯೇಂದ್ರ ವ್ಯಂಗ್ಯವಾಡಿರುವುದಕ್ಕೆ, ವಿಜಯೇಂದ್ರ ರಾಜಕೀಯವಾಗಿ ನನಗಿಂತ ಜ್ಯೂನಿಯರ್, ಅವರ ಹೇಳಿಕೆಗೆ ಉತ್ತರ ‌ಕೊಡಲ್ಲ ಎಂದಷ್ಟೇ ಹೇಳಿದರು.

ಮಾಜಿ ಸಚಿವ ಈಶ್ವರಪ್ಪ ಮನೆಯಲ್ಲಿ ಬಿಜೆಪಿ ನಾಯಕರು ಸಭೆ ನಡೆಸಿದ್ದರ ಕುರಿತು ಮಾತನಾಡಿ, ಈಶ್ವರಪ್ಪ ಮನೆಯಲ್ಲಿ ನಡೆದ ಸಭೆಯಲ್ಲಿ ಯಾವುದೇ ರೀತಿ ವಿಶೇಷತೆ ಏನೂ ಇಲ್ಲ. ನಾನು ಮುಂಬೈನಿಂದ ಬೆಂಗಳೂರಿಗೆ ಬಂದ‌ ತಕ್ಷಣವೇ ಯತ್ನಾಳ್​ ‌ಕಾಲ್ ಮಾಡಿದ್ದರು. ಈಶ್ವರಪ್ಪ ಮನೆಗೆ ಹೋಗಿ ಬರೋಣ ಎಂದು ಕರೆದರು. ಆದರೆ, ಅಂದು ಈಶ್ವರಪ್ಪ ‌ಮನೆಗೆ ರಾಜುಗೌಡ ಬಂದಿದ್ದು ಗೊತ್ತಿರಲಿಲ್ಲ. ರಾಜುಗೌಡ ಬಂದಿದ್ದು ಗೊತ್ತಾಗಿದ್ದರೆ ನಾನು ಒಳಗೆ ಹೋಗುತ್ತಿರಲಿಲ್ಲ ಎಂದರು.

ರಾಷ್ಟ್ರೀಯ ನಾಯಕರೇ ಪಕ್ಷಕ್ಕೆ ತೆಗೆದುಕೊಳ್ಳಬೇಕು: ಈಶ್ವರಪ್ಪ ‌ಮನೆಯಲ್ಲಿ ಯಾವುದೇ ರಾಜಕೀಯ ಚರ್ಚೆಗಳೇ ಆಗಿಲ್ಲ. ಈಶ್ವರಪ್ಪ-ಯತ್ನಾಳ್ ‌ಅವರು ತಮ್ಮ ಸಮುದಾಯಕ್ಕೆ ಮೀಸಲಾತಿ‌ ಕೊಡಿಸುವ ಬಗ್ಗೆ ಚರ್ಚಿಸಿದರು. ಪಂಚಮಸಾಲಿಗೆ 2ಎ ಮೀಸಲಾತಿ, ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಬಗ್ಗೆಯಷ್ಟೇ ಚರ್ಚೆ ಆಗಿದೆ. ಸಭೆಯಲ್ಲಿ ಈಶ್ವರಪ್ಪರ‌ನ್ನು‌ ಬಿಜೆಪಿಗೆ ಕರೆತರುವ ಬಗ್ಗೆ ಚರ್ಚೆಯೇ ಆಗಿಲ್ಲ. ಈಶ್ವರಪ್ಪ ಅವರ‌ನ್ನು ಬಿಜೆಪಿಗೆ ಕರೆತರುವ ಶಕ್ತಿ ನನಗಿಲ್ಲ. ಈಶ್ವರಪ್ಪ ನಮ್ಮ ರಾಷ್ಟ್ರೀಯ ನಾಯಕರೇ ಉಚ್ಛಾಟನೆ ಮಾಡಿದ್ದಾರೆ. ಈಶ್ವರಪ್ಪ ಅವರನ್ನು ರಾಷ್ಟ್ರೀಯ ನಾಯಕರೇ ಪಕ್ಷಕ್ಕೆ ತೆಗೆದುಕೊಳ್ಳಬೇಕು ಎಂದರು.

ಈಶ್ವರಪ್ಪ ಮನೆಯಲ್ಲಿ ನಡೆದ ಸಭೆಯಲ್ಲಿ ನಿಜವಾಗಿ ಚರ್ಚೆ ಆದ ವಿಷಯವನ್ನು ಮಾಧ್ಯಮಗಳ ಎದುರು ರಾಜುಗೌಡ ಹೇಳಿಲ್ಲ. ನಿಜವಾದ ಚರ್ಚಿತ ವಿಷಯ ಹೇಳಿದರೆ ರಾಜುಗೌಡನನ್ನು ವಿಜಯೇಂದ್ರ ಹೊಡೆಯುತ್ತಿದ್ದ ಎಂದು ರಮೇಶ್​ ಜಾರಕಿಹೊಳಿ ಲೇವಡಿ ಮಾಡಿದರು.

ಪಕ್ಷದ ಚೌಕಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ : ಈಶ್ವರಪ್ಪ ‌ಆರ್‌ಸಿಬಿ ಬ್ರಿಗೇಡ್ ಸ್ಥಾಪನೆ ಬಗ್ಗೆ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ‌ಯಾರು ಏನು ಬೇಕಾದರೂ ‌ಸಂಘಟನೆ‌ ಮಾಡಬಹುದು. ಅವರಿಗೆ ಹಕ್ಕಿದೆ. ಈಶ್ವರಪ್ಪ ಹಿಂದುಳಿದ ವರ್ಗಗಳ ನಾಯಕ. ಆದರೆ, ಅವರ ಮನೆಯಲ್ಲಿ ಸೇರಿದ್ದನ್ನು ರಾಜಕೀಯ ಮಾಡಿದ್ದರ ಬಗ್ಗೆ ಬೇಜಾರಿದೆ ಎಂದ ರಮೇಶ್ ಜಾರಕಿಹೊಳಿ, ರಾಜುಗೌಡ ಬಿಎಸ್‌ವೈ ಶಿಷ್ಯಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ರಾಜುಗೌಡ ಸ್ವಭಾವ ಮೊದಲಿನಿಂದಲೂ ಹೀಗೆ ಇದೆ‌. ನಾವು ಭಿನ್ನಮತೀಯ ನಾಯಕರು ಅಲ್ಲವೇ ಅಲ್ಲ. ಪಕ್ಷ ಶುದ್ಧೀಕರಣಕ್ಕಾಗಿ,‌ ಸಂಘಟನೆಗೆ ಸಭೆ ಮಾಡುತ್ತಿದ್ದೇವೆ. ಪಕ್ಷದ ಚೌಕಟ್ಟಿನಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಸಮರ್ಥಿಸಿಕೊಂಡರು.

ಇದನ್ನೂ ಓದಿ :ಮುಡಾ ಪ್ರಕರಣ: ಸಿಎಂ ಸಿದ್ದರಾಮಯ್ಯ, ಪತ್ನಿ ಸೇರಿ ನಾಲ್ವರ ವಿರುದ್ಧ ಲೋಕಾಯುಕ್ತ ಎಫ್​ಐಆರ್​ - FIR Against CM Siddaramaiah

ABOUT THE AUTHOR

...view details