ಬೆಂಗಳೂರು:ಕ್ರೋಸಿನ್ ಮಾತ್ರೆಯೂ ಕೆಲವರಿಗೆ ಅಲರ್ಜಿ ಆಗಲಿದೆ ಅದರಂತೆ ಕೊರೊನಾ ವ್ಯಾಕ್ಸಿನ್ನಲ್ಲಿಯೂ ಕೆಲವರಿಗೆ ಅಡ್ಡ ಪರಿಣಾಮ ಆಗಿರಬಹುದು. ಹಾಗಾಗಿ ಕೋವಿಡ್-19 ಗೆ ನೀಡಲಾದ ಕೋವಿಶೀಲ್ಡ್ ವ್ಯಾಕ್ಸಿನ್ ಅಡ್ಡ ಪರಿಣಾಮವಾಗಲಿದೆ ಎನ್ನುವ ವಿಚಾರ ಸಾಮಾನ್ಯ ಜನರು ಮಾಡುವ ಚರ್ಚೆ ಅಲ್ಲ. ವಿಜ್ಞಾನಿಗಳು ವೈಜ್ಞಾನಿಕವಾಗಿ ಚರ್ಚೆ ಮಾಡುವ ವಿಚಾರ ಎಂದು ಮಾಜಿ ಡಿಸಿಎಂ ಡಾ. ಸಿಎನ್ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಲ್ಲಾ ಮೆಡಿಕಲ್ ಟೆಸ್ಟಲ್ಲಿ ಪ್ರೂವ್ ಆದ ಬಳಿಕವೇ ಜನರಿಗೆ ಕೋವಿಶೀಲ್ಡ್ ಲಸಿಕೆ ಕೊಡಲಾಗಿದೆ. ಕ್ರೋಸಿನ್ ಮಾತ್ರೆಯಲ್ಲೂ ಕೆಲವರಿಗೆ ಅಲರ್ಜಿ ಆಗುತ್ತದೆ. ಆದರೆ ಅದರಿಂದ ಎಷ್ಟು ಒಳ್ಳೆಯದಾಗಿದೆ, ಎಷ್ಟು ಜನರ ಪ್ರಾಣ ಉಳಿದಿದೆ ಅನ್ನೋದು ಮುಖ್ಯ. ಬಹಳ ಕಡಿಮೆ ಪ್ರಮಾಣದ ಸೈಡ್ ಎಫೆಕ್ಟ್ ಬಗ್ಗೆಯೇ ಮುಖ್ಯವಾಗಿ ಉಲ್ಲೇಖ ಮಾಡೋದಲ್ಲ. ಈ ವಿಚಾರವನ್ನು ರಾಜಕೀಯಕ್ಕಾಗಿ ಚರ್ಚೆ ಮಾಡೋದು ಸಮಂಜಸವಲ್ಲ. ಸಮಾಜದ ಹಿತದೃಷ್ಟಿಯಿಂದ ಚರ್ಚೆಯಾಗಬೇಕು, ಇದರಲ್ಲಿ ರಾಜಕಾರಣ ಪ್ರವೇಶ ಮಾಡಬಾರದು, ವಿಜ್ಞಾನಿಗಳು ವೈಜ್ಞಾನಿಕವಾಗಿ ಚರ್ಚೆ ಮಾಡೋ ವಿಚಾರ ಇದು, ಸಾಮಾನ್ಯ ಜನರು ಚರ್ಚೆ ಮಾಡೋದಲ್ಲ ಎಂದರು.
ಪ್ರಜ್ವಲ್ ರೇವಣ್ಣ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅಶ್ವತ್ಥನಾರಾಯಣ, "ಕಾಂಗ್ರೆಸ್ ಅಂದರೆ ಕುತಂತ್ರ. ನೇರವಾಗಿ ಅಮಾಯಕ ಹೆಣ್ಣು ಮಕ್ಕಳ ರಕ್ಷಣೆಗೆ ಬರೋದು ಬಿಟ್ಟು, ರಾಜಕಾರಣ ಮಾಡುತ್ತಿದ್ದಾರೆ. ಸರ್ಕಾರ ಇದ್ದೂ, ಇಲ್ಲದಂತೆ ವರ್ತನೆ ಮಾಡುತ್ತಿದೆ. ಅಮಾಯಕ ಹೆಣ್ಣು ಮಕ್ಕಳನ್ನು ಸ್ವಾರ್ಥ ರಾಜಕಾರಣಕ್ಕೆ ಬಳಸಿಕೊಳ್ಳೋದು ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇವೆ. ಅವರೇ ವಿದೇಶಕ್ಕೆ ಹೋಗಲು ಬಿಟ್ಟಿದ್ದಾರೆ. ಕಾನೂನಾತ್ಮಕವಾಗಿ ಕ್ರಮ ಕೈಗೊಂಡಿಲ್ಲ. ಇದರಲ್ಲಿ ಸರ್ಕಾರದಿಂದ ಸಂಪೂರ್ಣ ಲೋಪವಾಗಿದೆ. ಇವರ ಸಮ್ಮಿಶ್ರ ಸರ್ಕಾರದ ಅಲೆಯಲ್ಲಿ ಗೆದ್ದವರು. ಇದರಲ್ಲಿ ಕಾಂಗ್ರೆಸ್ ಜವಾಬ್ದಾರಿ ಇದೆ. ಬಿಜೆಪಿಗೆ ಈ ಘಟನೆ ಬಗ್ಗೆ ನೋವಿದೆ. ಯಾವುದೇ ಅಮಾಯಕ ಹೆಣ್ಣು ಮಕ್ಕಳಿಗೆ ಈ ರೀತಿ ಲೈಂಗಿಕ ದುರುಪಯೋಗ ಆಗಬಾರದು".
ಈ ವಿಚಾರದಲ್ಲಿ ಬಿಜೆಪಿ ನಿಲುವು ಸ್ಪಷ್ಟವಾಗಿದೆ. ಯಾವುದೇ ಗೊಂದಲ ಇಲ್ಲ. ದೇವೇಗೌಡರ ಹಾಗೂ ಕುಮಾರಸ್ವಾಮಿ ಅವರ ಹೆಸರನ್ನೂ ಇದರಲ್ಲಿ ಎಳೆದು ತರಲಾಗಿದೆ. ದೇಶ ಬಿಟ್ಟು ಹೋಗಲು ಅವಕಾಶ ನೀಡಿ ಇವರ ಇಂಟಲಿಜೆನ್ಸ್ ಫೇಲ್ಯೂರ್ ಆಗಿದೆ. ಅಮಾಯಕ ಹೆಣ್ಣು ಮಕ್ಕಳನ್ನು ಬಯಲಿಗೆ ತಂದು, ಅವಮಾನ ಮಾಡುತ್ತಿದೆ. ಈ ವಿಚಾರದಲ್ಲಿ ತಕ್ಷಣವೇ ಕ್ರಮ ತೆಗೆದುಕೊಂಡು ನಿಲ್ಲಿಸಬಹುದಿತ್ತು. ಆದರೆ ರಾಜಕೀಯವಾಗಿ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ವಿಡಿಯೋ ಬಿಟ್ಟಿದ್ದು ಬಿಜೆಪಿ ಅನ್ನುವ ಆರೋಪ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ಅವರು, "ಈಗ ಎಸ್ಐಟಿ ತನಿಖೆಗೆ ನೀಡಿದ್ದಾರೆ. ಪ್ಯಾರಲಲ್ ರಿಪೋರ್ಟ್ ಕೂಡ ಪಡೆಯಲಿ. ಇದರಲ್ಲೂ ರಾಜಕೀಯ ಮಾಡಿದ್ದಾರೆ. ಈಗಾಗಲೇ ಎಸ್ಐಟಿ ರಚನೆಯಾಗಿದೆ. ಸರ್ಕಾರ ಜವಾಬ್ದಾರಿಯಿಂದ ಕೆಲಸ ಮಾಡಬೇಕು ತಪ್ಪಿತಸ್ಥರಿದ್ದರೆ ಕ್ರಮ ಕೈಗೊಳ್ಳಬೇಕು. ಸಮಾಜಕ್ಕೆ ಮುಜುಗರ ತರಿಸಿರೋದು ಕಾಂಗ್ರೆಸ್. ರಾಜ್ಯದಲ್ಲಿ ಸರ್ಕಾರ ಇದೆ, ಅಧಿಕಾರ ಇದೆ ಪೆನ್ ಡ್ರೈವ್ ಲೀಕ್ ಮಾಡಿದ್ದು ಯಾರು ಎಂದು ಪತ್ತೆ ಮಾಡಿ ಕ್ರಮವಹಿಸಿ. ಕಾಂಗ್ರೆಸ್ ದುರುದ್ದೇಶ ಸ್ಪಷ್ಟವಾಗಿದೆ. ಹೆಣ್ಣು ಮಕ್ಕಳನ್ನು ಸೋಶಿಯಲ್ ಮೀಡಿಯಾದಲ್ಲಿ ಎಳೆದು ತರೋದನ್ನು ನಿಲ್ಲಿಸಿ. ರಾಜಕೀಯ ಸಾಕು, ಈಗಲಾದರೂ ಕ್ರಮ ಕೈಗೊಳ್ಳಿ. ಮೋದಿ ಕಡೆ ಬೊಟ್ಟು ಮಾಡುತ್ತಿದ್ದಾರೆ ಇವರ ಲೋಪದ ಬಗ್ಗೆ ಮಾತನಾಡುತ್ತಿಲ್ಲ'' ಎಂದರು.
ಬಳಿಕ ಮೋದಿ ಸಾವಿನ ಬಗ್ಗೆ ಕಾಂಗ್ರೆಸ್ ಶಾಸಕ ರಾಜು ಕಾಗೆ ಹೇಳಿಕೆ ವಿಚಾರದ ಕುರಿತು ಮಾತನಾಡಿ, "ಇದು ರಾಜ್ಯ ಮಟ್ಟದ ಚುನಾವಣೆ ಅಲ್ಲ, ಇದು ದೇಶ ಮಟ್ಟದ ಚುನಾವಣೆ. ದೇಶಕ್ಕೆ ಮೋದಿ ಬೇಕು ಅಂತ ದೇಶದ ಜನತೆ ಬಯಸುತ್ತಿದೆ. ಇಂತಹ ದುರಹಂಕಾರದ ಮಾತು ಸರಿಯಲ್ಲ. ಮೋದಿ ವಿಶ್ವವೇ ಮೆಚ್ಚಿದ ಜನನಾಯಕ. ಮಹಿಳೆಯರು, ದಲಿತರು, ಯುವಕರ ಪರ ಕೆಲಸ ಮಾಡಿರೋ ವ್ಯಕ್ತಿ. ಕಾಂಗ್ರೆಸ್ ವ್ಯಕ್ತಿಗಳಿಗೆ ಅಧಿಕಾರದ ದಾಹ. ಕೊಟ್ಟಿರೋ ಅಧಿಕಾರವನ್ನು ಜವಾಬ್ದಾರಿಯಿಂದ ನಿಭಾಯಿಸುತ್ತಿಲ್ಲ'' ಎಂದು ಟಾಂಗ್ ನೀಡಿದರು.
ಇದನ್ನೂ ಓದಿ:ಕೋವಿಶೀಲ್ಡ್ ಲಸಿಕೆ ತನಿಖೆ ಕೋರಿ ಸುಪ್ರೀಂ ಕೋರ್ಟ್‌ಗೆ ಅರ್ಜಿ; ರೋಗಿಗಳ ಸುರಕ್ಷತೆಯೇ ನಮ್ಮ ಆದ್ಯತೆ ಎಂದ ಕಂಪೆನಿ - Covid 19 Vaccine