ಬೆಂಗಳೂರು: ಬಿಜೆಪಿ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ 7 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಇಲ್ಲಿಯ 72ನೇ ಸಿಸಿಹೆಚ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಕಾಟನ್‌ಪೇಟೆಯ ಪೀಟರ್ (46), ಸೂರ್ಯ ಅಲಿಯಾಸ್ ಸೂರಜ್ (20), ಸ್ಟೀಫನ್ (21), ಪುರುಷೋತ್ತಮ್ (22), ಅಜಯ್ (21), ಅರುಣ್‌ಕುಮಾರ್ (36) ಮತ್ತು ಸೆಲ್ವರಾಜ್ ಅಲಿಯಾಸ್ ಬುದಾನ್ (36)ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಪ್ರಕರಣದ ಮತ್ತೊಬ್ಬ ಆರೋಪಿ, ಕೊಲೆಯಾದ ರೇಖಾ ಕದಿರೇಶ್ ಅತ್ತಿಗೆ ಮಾಲಾ ಮೃತಪಟ್ಟಿದ್ದಾಳೆ. ಆರೋಪಿಗಳು 2021ರ ಜೂನ್‌ನಲ್ಲಿ ಕಚೇರಿ ಬಳಿಯೇ ರೇಖಾ ಕದಿರೇಶ್ ಅವರನ್ನು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು.
ಬಳಿಕ ಪಶ್ಚಿಮ ವಿಭಾಗದ ಅಂದಿನ ಡಿಸಿಪಿ ಸಂಜೀವ್ ಎಂ. ಪಾಟೀಲ್ ನೇತೃತ್ವದಲ್ಲಿ ಕಾಟನ್‌ಪೇಟೆಯ ಠಾಣಾಧಿಕಾರಿ ಚಿದಾನಂದಮೂರ್ತಿ ಹಾಗೂ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿತ್ತು. ಬಳಿಕ ಆರೋಪಿಗಳ ವಿರುದ್ಧ ಸುಮಾರು 800ಕ್ಕೂ ಹೆಚ್ಚು ಪುಟಗಳ ಆರೋಪಪಟ್ಟಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸುದೀರ್ಘ ವಾದ-ಪ್ರತಿವಾದ ಆಲಿಸಿದ ಕೋರ್ಟ್, ಎಲ್ಲಾ 7 ಜನರು ಅಪರಾಧಿಗಳು ಎಂದು ಘೋಷಿಸಿ ಶಿಕ್ಷೆ ಹಾಗೂ ದಂಡ ವಿಧಿಸಿ ಆದೇಶಿಸಿದೆ.