ಬೆಂಗಳೂರು: "ಮುಖ್ಯಮಂತ್ರಿ ಸಿದ್ದರಾಮಯ್ಯನವರ ರೀತಿ ನಾನು ಸರ್ಕಾರಿ ಭೂಮಿಯನ್ನು ಸುಳ್ಳು ದಾಖಲೆ ಸೃಷ್ಟಿಸಿ ಪಡೆದಿಲ್ಲ. ಅವರಿಗೆ ಅಧಿಕಾರ ಇದೆ, ಏನು ಬೇಕಾದರೂ ಮಾಡುತ್ತಾರೆ. ಎಲ್ಲದಕ್ಕೂ ಕಾಲವೇ ಉತ್ತರ ಕೊಡುತ್ತದೆ" ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಜೆ.ಪಿ.ನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ತಮಗೆ ಸೇರಿದ ಜಮೀನನ್ನು ನಾನು 40 ವರ್ಷಗಳ ಹಿಂದೆಯೇ ಖರೀದಿಸಿದ್ದೇನೆ. ಈ ಹಿಂದೆಯೇ ಹತ್ತಾರು ಬಾರಿ ಸರ್ವೇ, ತನಿಖೆ ಎಲ್ಲವೂ ನಡೆದಿದೆ. ಈಗ ಮತ್ತೆ ನಿನ್ನೆ ಸರ್ವೇ ಕಾರ್ಯ ನಡೆಸಿದ್ದಾರೆ. ತನಿಖೆ ಮಾಡುವುದಕ್ಕೆ ನಾನು ಮುಕ್ತ. ಇದರಲ್ಲಿ ಯಾವುದೇ ಅಕ್ರಮ ಆಗಿಲ್ಲ" ಎಂದು ಹೇಳಿದರು.
ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ: "ನನ್ನನ್ನು ಟಾರ್ಗೆಟ್ ಮಾಡಿ ಸರ್ವೇ ಮಾಡಿಸುತ್ತಿದ್ದಾರೆ. ಇದರಲ್ಲಿ ಸಂಶಯವೇ ಬೇಡ. ಯಾವುದೇ ತನಿಖೆ ಮಾಡಲಿ, ನಾನು ಮುಕ್ತವಾಗಿದ್ದೇನೆ. ನಾನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ರೀತಿ ಸರ್ಕಾರಿ ಜಮೀನು ಲೂಟಿ ಮಾಡಿಲ್ಲ. ಕೇತಗಾನಹಳ್ಳಿಯ ತಮ್ಮ ಜಮೀನಿಗೆ ಸಂಬಂಧಿಸಿದಂತೆ ನಿನ್ನೆ ಕಾಂಗ್ರೆಸ್‌ನ ಕೆಲ ಪುಡಾರಿಗಳು ದೂರುದಾರನನ್ನು ಕರೆಸಿ ಮಾತನಾಡಿಸಿದ್ದಾರೆ. 40 ವರ್ಷ ಇಲ್ಲದ ದೂರುದಾರರು ಈಗ ಹೇಗೆ ಉದ್ಭವವಾದರು ಎಂದು ಪ್ರಶ್ನಿಸಿದ ಅವರು, ತನಿಖೆ ನಡೆಸಲಿ, ನನ್ನದೇನೂ ತಕರಾರಿಲ್ಲ. ಸರ್ವೇ ನಡೆಸುವಂತೆ ಜಿಲ್ಲಾಧಿಕಾರಿಗಳಿಗೂ ಹೇಳಿದ್ದೇನೆ" ಎಂದರು.
"40 ವರ್ಷಗಳಿಂದ ನನ್ನನ್ನು ಗುರಿಯಾಗಿಸಿ ಈ ರೀತಿಯ ತನಿಖೆಗಳನ್ನು ನಡೆಸುತ್ತಿದ್ದಾರೆ. 1986-87ರಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ, ಜಿ.ಪಂ.ಮಾಜಿ ಸದಸ್ಯ ರಾಮಚಂದ್ರ ಎನ್ನುವವರು ಅಂದಿನ ಮುಖ್ಯಮಂತ್ರಿ, ಪ್ರಧಾನಿ, ಗೃಹ ಸಚಿವರಿಗೆ ದೂರು ನೀಡಿ ಕಾನೂನುಬಾಹಿರ ಭೂಮಿ ಖರೀದಿ ಮಾಡಿದ್ದಾರೆ ಎಂದೆಲ್ಲಾ ಹೇಳಿದ್ದರು. ಎಲ್ಲಾ ದಾಖಲೆಗಳು ನನ್ನ ಬಳಿ ಇದೆ. ನನ್ನನ್ನು ಟಾರ್ಗೆಟ್ ಮಾಡಿ ಎಷ್ಟು ಬಾರಿ ತನಿಖೆ ನಡೆಸುತ್ತೀರಿ, 2023ರ ಮಾರ್ಚ್‌ನಲ್ಲಿ ಲೋಕಾಯುಕ್ತ ವರದಿ ಕೊಟ್ಟಿದೆ. ಸಿದ್ದರಾಮಯ್ಯ ಅವರು ಏನೇನು ಸಭೆ ಮಾಡಿಸಿದ್ದಾರೆ, ಯಾರನ್ನು ಕರೆಸಿಕೊಂಡು ಮೀಟಿಂಗ್ ಮಾಡಿದ್ದಾರೆ ಎಲ್ಲವೂ ಗೊತ್ತಿದೆ" ಎಂದು ಹೇಳಿದರು.
"ನನ್ನ ಜಮೀನಿನ ತನಿಖೆಗೆ ಐದು ಜನರ ಎಸ್‌ಐಟಿ ತಂಡ ಮಾಡಿದ್ದಾರೆ. ಪೊಲೀಸ್ ಇಲಾಖೆ ಎಸ್‌ಐಟಿ ಆಯ್ತು, ಈಗ ಐಎಎಸ್ ಅಧಿಕಾರಿಗಳ ಎಸ್‌ಐಟಿ ತಂಡವನ್ನು ಸಿದ್ದರಾಮಯ್ಯ ರಚನೆ ಮಾಡಿದ್ದಾರೆ. ನಾನು ಎಲ್ಲದಕ್ಕೂ ಮುಕ್ತವಾಗಿದ್ದೇನೆ" ಎಂದರು.
"ನೀರಾವರಿ ವಿಚಾರದಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ಮೋದಿಯವರ ಚಿಯರ್ ಲೀಡರ್ ಆಗುವುದು ಬೇಡ ಎಂಬ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಮಾತನಾಡಿ, ಸಿದ್ದರಾಮಯ್ಯನವರಿಂದ ದೇವೇಗೌಡರು ನೀರಾವರಿ ವಿಚಾರದಲ್ಲಿ ರಾಜ್ಯದ ಹಿತರಕ್ಷಣೆ ಮಾಡಲಿಕ್ಕೆ ಪಾಠ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ರಾಜ್ಯದ ನೆಲ, ಜಲ, ಭಾಷೆಯ ವಿಚಾರದಲ್ಲಿ ಸಿದ್ದರಾಮಯ್ಯನವರ ಕೊಡುಗೆ ಏನಿದೆ, ಎಂದಾದರೂ ಅವರು ನೀರಾವರಿ ಬಗ್ಗೆ ವಿಧಾನಸಭೆಯಲ್ಲಿ ಮಾತನಾಡಿದ್ದಾರಾ?" ಎಂದು ವಾಗ್ದಾಳಿ ನಡೆಸಿದರು.
"ಮುಡಾ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ವರದಿಯನ್ನು ಯಾರಾದರೂ ತನಿಖೆ ಎನ್ನುತ್ತಾರಾ?. ಸಿದ್ದರಾಮಯ್ಯ ಅವರ ಕೆಳಗೆ ಕೆಲಸ ಮಾಡುವ ಅಧಿಕಾರಿಗಳು ಮುಖ್ಯಮಂತ್ರಿಗಳ ವಿರುದ್ಧ ವರದಿ ಕೊಡುತ್ತಾರಾ?. ತನಿಖೆ ಹೇಗೆ ಆಗಿದೆ ಎಂಬುದು ನಮಗೂ ಗೊತ್ತಿದೆ. ತನಿಖಾಧಿಕಾರಿ ವರದಿ ಸಲ್ಲಿಸುವ ಮೊದಲು ಮೇಲಾಧಿಕಾರಿಗಳಿಗೆ ವರದಿ ನೀಡಿ ಅವರಿಂದ ಅನುಮೋದನೆ ಪಡೆದು ಲೋಕಾಯುಕ್ತರಿಗೆ ವರದಿ ಕೊಡುತ್ತಾರಂತೆ. ಇದನ್ನು ಯಾರಾದರೂ ತನಿಖೆ ಎನ್ನುತ್ತಾರಾ" ಎಂದು ಪ್ರಶ್ನಿಸಿದರು.
"ಡಿ.ಕೆ.ಶಿವಕುಮಾರ್ ಅವರು ಮಾಜಿ ಪ್ರಧಾನಿ ದೇವೇಗೌಡರ ಬಗ್ಗೆ ಲಘುವಾಗಿ ಮಾತನಾಡಿರುವುದನ್ನು ಗಮನಿಸಿದ್ದೇನೆ. ಡಿ.ಕೆ.ಶಿವಕುಮಾರ್ ಕೊಡುಗೆ ರಾಜ್ಯಕ್ಕೆ ಏನಿದೆ, ದುಡ್ಡು ಹೊಡೆದಿರುವುದೇ ಅವರ ಕೊಡುಗೆ. ಇನ್ನೊಂದು ವಾರ ನೋಡೋಣ, ಈ ಸರ್ಕಾರ ಏನೇನು ಮಾಡುತ್ತೆ, ಎಲ್ಲದರ ಬಗ್ಗೆಯೂ ಮಾತನಾಡುತ್ತೇನೆ. ರಾಜ್ಯದಲ್ಲಿ ಜನರ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: ಸರ್ಕಾರಿ ಜಮೀನು ಕಬಳಿಸಿರುವ ಆರೋಪ : ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಜಮೀನು ಸರ್ವೇ ಕಾರ್ಯ