ಬೆಂಗಳೂರು:ರೇವಣ್ಣ ವಿಷಯದಲ್ಲಿ ಪ್ಲಾನ್ ಆಫ್ ಆ್ಯಕ್ಷನ್ ಮಾಡಿದ್ದಾರೆ. ಪ್ರಜ್ವಲ್ ರೇವಣ್ಣ ಇಲ್ಲ ಎಂದು ಇವರನ್ನ ಬಲಿಪಶು ಮಾಡುವ ಪ್ರಯತ್ನ ಮಾಡಿದ್ದಾರೆ. ಇಡೀ ಪ್ರಕರಣದ ಸೂತ್ರಧಾರ ಡಿಸಿಎಂ ಡಿ.ಕೆ. ಶಿವಕುಮಾರ್ ಎಂದು ಮಾಜಿ ಸಿಎಂ ಡಿ. ವಿ. ಸದಾನಂದ ಗೌಡ ಆರೋಪಿಸಿದ್ದಾರೆ.
ಸಂಜಯನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏನು ಅಸ್ತ್ರ ಸಿಗದೇ ಇದ್ದಾಗ ಈ ಸಿಡಿ ಬಿಡೋದು ಅತ್ಯಂತ ನೀಚ ಕೆಲಸ, ರಾಜಕೀಯದಲ್ಲಿ ಕೂಡ ಇಂತಹ ಸೀರಿಯಸ್ ಕೇಸ್ ದಿಕ್ಕು ತಪ್ಪುತ್ತದೆ. ಒಮ್ಮೊಮ್ಮೆ ಸಣ್ಣ ಕೇಸ್ ಬಹಳ ಸೀರಿಯಸ್ ಆಗುತ್ತದೆ. ಸಮಾಜವನ್ನೇ ಬ್ಲಾಸ್ಟ್ ಮಾಡುವ ಪ್ರಯತ್ನ ಇದು. ಸಿಡಿ ಹಂಚಿಕೆ ಮಾಡಿದಾಗಲೇ ಕ್ರಮ ಆಗಬೇಕಿತ್ತು ಎಂದರು.
ವಿಧಾನಸಭೆ ಬಳಿಕ ಕಾಂಗ್ರೆಸ್ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ದೊಡ್ಡ ಮಟ್ಟದಲ್ಲಿ ಪ್ರಯತ್ನ ಮಾಡಿದರು. ಆದರೆ ಮೋದಿ ಗ್ಯಾರಂಟಿ ಮುಂದೆ ಇವರದ್ದು ಎಲ್ಲಾ ಟುಸ್ ಆಗಿದೆ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಹಾವು - ಮುಂಗುಸಿ ಆಗಿದ್ದರು. ಆದರೆ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಹಿನ್ನಡೆ ಆಗುತ್ತದೆ ಎಂದು ಗೊತ್ತಾಯಿತು, ಅದಕ್ಕೆ ಒಟ್ಟಾಗಿ ನಿಂತಿದ್ದಾರೆ. ಈಗ ಪೆನ್ ಡ್ರೈವ್ ಕೇಸ್ನಲ್ಲಿ ಎಸ್ಐಟಿ ತನಿಖೆ ಸರಿಯಾದ ಹಾದಿಯಲ್ಲಿ ಸಾಗುತ್ತಿರುವಂತೆ ಕಾಣುತ್ತಿಲ್ಲ. ಡಿ.ಕೆ. ಶಿವಕುಮಾರ್ ಕಲಾಕಾರ, ಅವರಂಥ ಕಲಾಕಾರ ಕರ್ನಾಟಕದಲ್ಲೇ ಯಾರೂ ಇಲ್ಲ. ಕಾರ್ತಿಕ್ ಹೇಗೆ ಹೊರ ದೇಶಕ್ಕೆ ಹೋದರು?. ಅವರನ್ನು ಯಾಕೆ ವಶಕ್ಕೆ ಪಡೆದಿಲ್ಲ?. ಚುನಾವಣೆಗಾಗಿ ಏನೋ ಪ್ರಯತ್ನ ಮಾಡಿದ್ದಾರೆ, ಇದರ ಸೂತ್ರಧಾರ ಡಿ.ಕೆ. ಶಿವಕುಮಾರ್ ಎಂದು ದೂರಿದರು.