ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ತುಮಕೂರು: ಮಾಜಿ ಸಚಿವ ಮಾಧುಸ್ವಾಮಿ ಪಕ್ಷ ಬಿಡುವುದಿಲ್ಲ, ನಮ್ಮ ಜೊತೆಯಲ್ಲೇ ಇರ್ತಾರೆ. ಅಲ್ಲದೇ ಈ ಬಗ್ಗೆ ನನಗೆ ಭರವಸೆ ಕೂಡ ನೀಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿರುವ ಮಾಜಿ ಶಾಸಕ ಮಸಾಲೆ ಜಯರಾಮ್ ಮನೆಯಲ್ಲಿ ಇಂದು ಮಾಧುಸ್ವಾಮಿ ಜೊತೆ ಸುದೀರ್ಘ ಮಾತುಕತೆ ನಡೆಸಿದ ಬಿಎಸ್ವೈ ನಂತರ ಪತ್ರಕರ್ತರೊಂದಿಗೆ ಮಾತನಾಡಿದರು. ಮಾಧುಸ್ವಾಮಿ ಪಕ್ಷದಲ್ಲಿ ಇದ್ದರೆ ದೊಡ್ಡ ಶಕ್ತಿ ಇದ್ದಂತೆ, ಅವರು ಪಕ್ಷ ಬಿಡೊಲ್ಲ ಅಂತ ಒಪ್ಪಿಕೊಂಡಿದ್ದಾರೆ. ನಾವು ಚುನಾವಣೆ ಬಗ್ಗೆ ಯಾವುದೇ ಚರ್ಚೆ ಮಾಡಿಲ್ಲ ಎಂದು ಹೇಳಿದರು.
ಇನ್ನು ಇದೇ ಸಂದರ್ಭದಲ್ಲಿ ಹಾಜರಿದ್ದ ಮಾಧುಸ್ವಾಮಿ ಮಾತನಾಡಿ, ನಾನು ಕಾಂಗ್ರೆಸ್ ಸೇರಲು ಮುಂದಾಗಿದ್ದು ನಿಜ. ಯಾರ್ಯಾರು ಸಂಪರ್ಕ ಮಾಡಿದ್ರು ಎಂದು ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡಿದ್ದೇನೆ. ಸದ್ಯ ಬಿಜೆಪಿಯಲ್ಲಿಯೇ ಉಳಿಯುವುದಾಗಿ ಹೇಳಿದರು.
ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಣ್ಣ ಅವರಿಗೆ ಬೆಂಬಲ ನೀಡುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಸೋಮಣ್ಣ ಅವರಿಗೆ ಸಪೋರ್ಟ್ ಮಾಡುವ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬೈರತಿ ಬಸವರಾಜ್ ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಹಾಜರಿದ್ದರು.
ಇದನ್ನೂ ಓದಿ :ಬೇಜವಾಬ್ದಾರಿ ಹೇಳಿಕೆ ನೀಡುತ್ತಿರುವ ಈಶ್ವರಪ್ಪ ಜತೆ ಸಂಧಾನಕ್ಕೆ ಮುಂದಾಗಲ್ಲ: ಬಿ ಎಸ್ ಯಡಿಯೂರಪ್ಪ