ಮೈಸೂರು : ಬೇಸಿಗೆ ಸಮೀಪಿಸುತ್ತಿರುವುದರಿಂದ ಅರಣ್ಯದಲ್ಲಿ ಕಾಡ್ಗಿಚ್ಚು ಸಂಭವಿಸುವ ಅಪಾಯ ಹೆಚ್ಚಿದೆ. ಇದರಿಂದಾಗಿ ಅಪಾರ ಪ್ರಮಾಣದ ಅರಣ್ಯ ಸಂಪತ್ತು ಹಾಗೂ ಪ್ರಾಣಿ ಸಂಕುಲಗಳು ನಾಶವಾಗುತ್ತವೆ. ಇದನ್ನು ತಡೆಯುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈಗಿನಿಂದಲೇ ಮುಂಜಾಗ್ರತಾ ಕ್ರಮವನ್ನ ಕೈಗೊಂಡಿದೆ.
ನಾಡ ಅಧಿದೇವತೆ ಚಾಮುಂಡಿ ತಾಯಿ ಇರುವ ಚಾಮುಂಡಿ ಬೆಟ್ಟ ಹಲವಾರು ಅಮೂಲ್ಯ ಅರಣ್ಯ ಸಂಪತ್ತುಗಳ ತಾಣವಾಗಿದೆ. ಜೊತೆಗೆ ವೈವಿಧ್ಯಮಯ ಪ್ರಾಣಿ ಸಂಕುಲಗಳ ವಾಸ ಸ್ಥಾನವಾಗಿದೆ. ಡಿಸೆಂಬರ್, ಜನವರಿ ತಿಂಗಳಿನಲ್ಲಿ ಚಾಮುಂಡಿ ಬೆಟ್ಟದ ಸಸ್ಯಗಳು ಹಾಗೂ ಗಿಡ ಗಂಟಿಗಳು ಬಿಸಿಲಿಗೆ ಒಣಗುತ್ತವೆ. ಈ ಸಮಯದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೋಗುವ ಭಕ್ತರು ರಸ್ತೆ ಬದಿಯಲ್ಲಿ ಬೆಂಕಿ ತಗುಲುವ ವಸ್ತುಗಳನ್ನು ಬಳಸಿ ಬಿಸಾಡುವುದರಿಂದ ಕಾಡ್ಗಿಚ್ಚು ಹಬ್ಬುತ್ತದೆ. ಇದನ್ನು ತಡೆಯಲು ಅರಣ್ಯ ಇಲಾಖೆ ಹೊಸ ಪ್ಲಾನ್ ಹಾಕಿಕೊಂಡು ಕೆಲಸ ಶುರು ಮಾಡಿದೆ.
ಬೆಂಕಿ ಹಚ್ಚಿ ನಂದಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ (ETV Bharat) ಹತ್ತು ಜನ ಅರಣ್ಯ ಸಿಬ್ಬಂದಿಯಿಂದ ಕೆಲಸ : ಚಾಮುಂಡಿ ಬೆಟ್ಟದ ಮುಖ್ಯ ರಸ್ತೆ, ನಂಜನಗೂಡು ಮತ್ತು ಬಂಡಿಪಾಳ್ಯ ರಸ್ತೆಗಳ ಎರಡು ಬದಿಯಲ್ಲಿ ಇರುವ ಒಣಗಿದ ಎಲೆ ಮತ್ತು ಹುಲ್ಲುಗಳಿಗೆ ಅರಣ್ಯ ಇಲಾಖೆ ಸಿಬ್ಬಂದಿ ಬೆಂಕಿ ಹಚ್ಚಿ ಆನಂತರ ನೀರನ್ನು ಹಾಕಿ ನಂದಿಸುತ್ತಾರೆ. ಈ ರೀತಿ ಮಾಡುವುದರಿಂದ ಮುಂದೆ ಚಾಮುಂಡಿ ಬೆಟ್ಟದಲ್ಲಿ ಸಂಭವಿಸುವ ಕಾಡ್ಗಿಚ್ಚನ್ನು ತಡೆಯಬಹುದಾಗಿದೆ. ಆ ನಿಟ್ಟಿನಲ್ಲಿ ಹತ್ತು ಜನರ ಅರಣ್ಯ ಇಲಾಖೆ ತಂಡ ಕಳೆದ ಏಳು ದಿನಗಳಿಂದ ಈ ಕೆಲಸ ಮಾಡುತ್ತಿದೆ.
ಬೆಂಕಿ ಹಚ್ಚಿ ನಂದಿಸುತ್ತಿರುವ ಅರಣ್ಯ ಇಲಾಖೆ ಸಿಬ್ಬಂದಿ (ETV Bharat) ಅರಣ್ಯ ಸಿಬ್ಬಂದಿ ಹೇಳಿದ್ದೇನು? 'ಪ್ರವಾಸಿಗರು ರಸ್ತೆ ಬದಿಯಲ್ಲಿ ಸಿಗರೇಟ್ ಇನ್ನಿತರ ಬೆಂಕಿ ಹರಡುವ ವಸ್ತುಗಳನ್ನ ಬಿಸಾಡುವುದರಿಂದ ಕಾಡಿಗೆ ಪೂರ್ಣ ಬೆಂಕಿ ತಗಲುವ ಸಂಭವವಿದೆ. ಇದಕ್ಕೆ ಮುಂಜಾಗ್ರತಾ ಕ್ರಮವಾಗಿ ಅರಣ್ಯದ ಬದಿಯಲ್ಲಿ ನಾವೇ ಬೆಂಕಿ ಇಟ್ಟು ಒಣ ಹುಲ್ಲನ್ನು ಸುಡುತ್ತೇವೆ. ಇದರಿಂದಾಗಿ ಒಂದು ವೇಳೆ ಸಿಗರೇಟ್ ಬಿದ್ದರೂ ಬೆಂಕಿ ಹೊತ್ತುವುದಿಲ್ಲ. ಈ ರೀತಿಯಾಗಿ ಮಾಡುವುದರಿಂದ ಕಾಡ್ಗಿಚ್ಚಿನಿಂದ ರಕ್ಷಣೆ ಪಡೆದುಕೊಳ್ಳಬಹುದಾಗಿದೆ' ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಗಗನ್ ಮಾಹಿತಿ ನೀಡಿದರು.
ಇದನ್ನೂ ಓದಿ :ಕೆಮ್ಮಣ್ಣುಗುಂಡಿ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು : ವಿಡಿಯೋ - ಶೋಲಾರಣ್ಯ ಗುಡ್ಡ