ಬೆಳಗಾವಿ: ಪ್ರವಾಹ ಜನಸಾಮಾನ್ಯರ ಬದುಕಿನ ಮೇಲಷ್ಟೇ ತನ್ನ ವಕ್ರದೃಷ್ಟಿ ಬೀರುತ್ತಿಲ್ಲ. ಮಕ್ಕಳ ಶಿಕ್ಷಣಕ್ಕೂ ಸಾಕಷ್ಟು ಅಡ್ಡಿಯುಂಟು ಮಾಡುತ್ತಿದೆ. ನದಿ ತೀರದ ಮಕ್ಕಳಿಗೆ ಪ್ರತಿವರ್ಷವೂ ಈ ಗೋಳು ತಪ್ಪಿದ್ದಲ್ಲ. ದಯವಿಟ್ಟು ತಮಗೆ ಏನಾದರೂ ವ್ಯವಸ್ಥೆ ಮಾಡಿಕೊಡುವಂತೆ ಮಕ್ಕಳು ಅಂಗಲಾಚುತ್ತಿದ್ದಾರೆ.
ಹೌದು, ಪಶ್ಚಿಮಘಟ್ಟಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಸಪ್ತನದಿಗಳು ಹರಿಯುವ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿತ್ತು. ನದಿಗಳು ಅಪಾಯದ ಮಟ್ಟ ಮೀರಿ ಹರಿದ ಪರಿಣಾಮ ಜನ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಪಾಲಕರ ಜೊತೆಗೆ ಮಕ್ಕಳು ಕೂಡ ಇಲ್ಲಿಯೇ ವಾಸ್ತವ್ಯ ಹೂಡಿದ್ದರು. ನೀರು ನುಗ್ಗಿದ್ದರಿಂದ ಮನೆ ವಸ್ತುಗಳ ಜೊತೆಗೆ ಮಕ್ಕಳ ಪುಸ್ತಕಗಳಿಗೂ ಹಾನಿಯಾಗಿದೆ. ಹಾಗಾಗಿ, ಪ್ರತಿ ಬಾರಿಯೂ ಮಳೆಗಾಲದಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗುತ್ತಿದೆ. ಅದರಲ್ಲೂ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ವ್ಯಾಸಂಗಕ್ಕೆ ತೀವ್ರ ತೊಂದರೆ ಆಗುತ್ತಿದೆ.
ಕೃಷ್ಣಾ, ವೇದಗಂಗಾ, ದೂಧಗಂಗಾ ನದಿಗಳ ಪ್ರವಾಹದಿಂದ ಅಥಣಿ, ಚಿಕ್ಕೋಡಿ, ನಿಪ್ಪಾಣಿ, ರಾಯಬಾಗ, ಘಟಪ್ರಭಾ ನೆರೆಯಿಂದ ಗೋಕಾಕ, ಮೂಡಲಗಿ ಹಾಗೂ ಮಲಪ್ರಭಾ ನದಿಯಿಂದ ಖಾನಾಪುರ ತಾಲ್ಲೂಕಿನ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಒಟ್ಟು 40ಕ್ಕೂ ಅಧಿಕ ಗ್ರಾಮಗಳು ಪ್ರವಾಹ ಬಾಧಿತವಾಗಿವೆ. ಈ ಪೈಕಿ ಜಿಲ್ಲೆಯ 160ಕ್ಕೂ ಅಧಿಕ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಗೋಕಾಕಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಕಾಳಜಿ ಕೇಂದ್ರದಲ್ಲಿ 6 ಎಸ್ಎಸ್ಎಲ್ಸಿ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ್ದು, ಇಲ್ಲಿಯೇ ಸದ್ದು ಗದ್ದಲದ ನಡುವೆ ಉತ್ತಮ ಅಂಕ ಗಳಿಸುವ ಉದ್ದೇಶದಿಂದ ಅಭ್ಯಾಸ ಮಾಡುತ್ತಿದ್ದರು. ಈಗ ನೀರು ಕಡಿಮೆ ಆಗಿದ್ದರಿಂದ ವಾಪಸ್ ತಮ್ಮ ಮನೆಗಳಿಗೆ ಸಂತ್ರಸ್ತರು ತೆರಳಿದ್ದಾರೆ. ಮತ್ತೆ ಪ್ರವಾಹ ಸೃಷ್ಟಿಯಾದರೆ, ಇಲ್ಲಿಯೇ ಓಡಿಬರಬೇಕು.
ಮನೆಗಾಗಿ ಮನವಿ: ಗೋಕಾಕದ ದಾಳಿಂಬೆ ತೋಟದ ಮಜಗಾರ ಓಣಿ ವಿದ್ಯಾರ್ಥಿ ವಿದ್ಯಾಶ್ರೀ ದಿಲೀಪ ಕದಮ್ ಈಟಿವಿ ಭಾರತ ಜೊತೆಗೆ ಮಾತನಾಡಿ, ಹೊಳಿ ಬಂತು ಎಂದರೆ ಸಾಕು ಶಾಲೆಗೆ ಹೋಗಲು ತೊಂದರೆ ಆಗುತ್ತದೆ. ಪ್ರತಿ ವರ್ಷ ಇದೇ ರೀತಿ ಕಷ್ಟ ಅನುಭವಿಸುತ್ತಿದ್ದೇವೆ. ಕಷ್ಟ ಪಟ್ಟು ಓದಿ ನಮ್ಮ ತಂದೆ ತಾಯಿಗೆ ಹೆಸರು ತರಬೇಕು ಎಂದರೆ ಪ್ರವಾಹ ನಮಗೆ ಅಡ್ಡಿಯಾಗಿದೆ. ಹೊಳಿ ಬರದ ಪ್ರದೇಶದಲ್ಲಿ ತಮಗೆ ಮನೆ ಕಟ್ಟಿಸಿ ಕೊಡುವಂತೆ ಕೇಳಿಕೊಂಡರು.