ಬೆಳಗಾವಿ:ಖತರ್ನಾಕ್ ಮಕ್ಕಳ ಮಾರಾಟ ಜಾಲವನ್ನು ಭೇದಿಸಿರುವ ಪೊಲೀಸರು, ಆರ್‌ಎಂಪಿ ವೈದ್ಯ ಸೇರಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲಾ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಮತ್ತು ಮಾಳಮಾರುತಿ ಠಾಣೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಖೆಡ್ಡಾಗೆ ಕೆಡವಿದ್ದಾರೆ.
ಪ್ರಕರಣ ಸಂಬಂಧ ಕಿಂಗ್ ಪಿನ್ಗಳಾದ ಕಿತ್ತೂರಿನ ಡಾ.ಅಬ್ದುಲ್ ಗಫಾರ್ ಲಾಡಖಾನ್, ನೇಗಿನಹಾಳದ ಮಹಾದೇವಿ ಜೈನ್, ಚಂದನ ಸುಬೇದಾರ್, ಪವಿತ್ರಾ ಮತ್ತು ಪ್ರವೀಣ್ ಎಂಬುವರನ್ನು ಬಂಧಿಸಲಾಗಿದೆ. ಈ ಗ್ಯಾಂಗ್ ಮಕ್ಕಳ ಮಾರಾಟದಲ್ಲಿ ಫುಲ್ ಆಕ್ಟಿವ್ ಆಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆಗೂ ಮುನ್ನ ಗರ್ಭಿಣಿಯಾಗಿ, ಗರ್ಭಪಾತ ಮಾಡಿಸಬೇಕು ಎನ್ನುವವರೇ ಇವರ ಟಾರ್ಗೆಟ್ ಆಗಿದ್ದರು. 7-8 ತಿಂಗಳ ಗರ್ಭಿಣಿಯರ ಆಪರೇಷನ್ ಮಾಡಿ, ಮಗು ರಕ್ಷಿಸಿ ತಾವೇ ಸಾಕುವುದಾಗಿ ನಂಬಿಸುವ ಮೂಲಕ ಅವರನ್ನು ಕಳಿಸುತ್ತಿದ್ದರು. ಆರ್‌ಎಂಪಿ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಎರಡ್ಮೂರು ತಿಂಗಳು ಆ ಶಿಶುಗಳನ್ನು ಆರೈಕೆ ಮಾಡುತ್ತಿದ್ದರು. ಹೀಗೆ ಆರೈಕೆ ಮಾಡಿದ ಮಗುವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಮಕ್ಕಳಿಲ್ಲದವರಿಗೆ ರೂ. 60 ಸಾವಿರದಿಂದ ಒಂದೂವರೆ ಲಕ್ಷ ರೂ.ವರೆಗೆ ಮಾರಾಟ ಮಾಡುತ್ತಿದ್ದರು ಎಂಬ ಆಘಾತಕಾರಿ ಸಂಗತಿ ಬಯಲಾಗಿದೆ.
ಆರೋಪಿ ಖೆಡ್ಡಾಗೆ ಬಿದ್ದಿದ್ದು ಹೀಗೆ:ಈ ಬಗ್ಗೆ ಮಕ್ಕಳ ರಕ್ಷಣಾ ಇಲಾಖೆಗೆ ಗೊತ್ತಾಗುತ್ತಿದ್ದಂತೆ ಮಕ್ಕಳ ಮಾರಾಟ ಜಾಲದ ಆರೋಪಿ ಮಹಾದೇವಿ ಜೈನ್ಗೆ ಅಧಿಕಾರಿಗಳು ಸಂಪರ್ಕಿಸಿದ್ದಾರೆ. ನಮಗೆ ಮಗು ಬೇಕಾಗಿದೆ ಎಂದು ಹೇಳಿದ್ದನ್ನು ನಂಬಿದ ಆರೋಪಿ, 1 ಲಕ್ಷದ 40 ಸಾವಿರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಇದಕ್ಕೆ ಒಪ್ಪಿ, ಬೆಳಗಾವಿಯ ರಾಮತೀರ್ಥ ನಗರಕ್ಕೆ ಮಗು ತರುವಂತೆ ಮಕ್ಕಳ ರಕ್ಷಣಾ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಬಳಿಕ ಮಗುವಿನ ಜೊತೆಗೆ ಬಂದ ಮಹಾದೇವಿ ಹಾಗೂ ಗ್ಯಾಂಗ್ ಅಧಿಕಾರಿಗಳ ಬಲೆಗೆ ಬಿದ್ದಿದೆ. ಕಿಂಗ್ ಪಿನ್ ವೈದ್ಯ ಅಬ್ದುಲ್ ಗಫಾರ್ ಖಾನ್ನಿಂದ 60 ಸಾವಿರ ರೂ.ಗೆ ಮಗುವನ್ನು ಮಹಾದೇವಿ ಅಲಿಯಾಸ್ ಪ್ರಿಯಾಂಕಾ ಜೈನ್ ಖರೀದಿ ಮಾಡಿದ್ದರು. ಬಳಿಕ 1 ಲಕ್ಷ 40 ಸಾವಿರ ರೂ. ಹಣಕ್ಕೆ ಮಗು ಮಾರಾಟ ಮಾಡಲು ಯತ್ನಿಸಿ ಖೆಡ್ಡಾಕ್ಕೆ ಬಿದ್ದಿದ್ದಾರೆ.
ಉಳಿದಿಬ್ಬರು ಆರೋಪಿಗಳಾದ ಪವಿತ್ರಾ ಮತ್ತು ಪ್ರವೀಣ್ ಇಬ್ಬರು ಪರಸ್ಪರ ಪ್ರೀತಿಸಿದ್ದರು. ಆದರೆ, ವಿವಾಹಕ್ಕೂ ಮುನ್ನವೇ ದೈಹಿಕ ಸಂಪರ್ಕ ಬೆಳೆಸಿದ್ದರಿಂದ ಪವಿತ್ರಾ 7 ತಿಂಗಳ ಗರ್ಭಿಣಿಯಾಗಿದ್ದರು. ಮನೆಯಲ್ಲಿ ಗೊತ್ತಾದರೆ ಸಮಸ್ಯೆ ಆಗುತ್ತದೆ ಎಂದು ಈ ಜೋಡಿಯು ಕಿತ್ತೂರಿನಲ್ಲಿರುವ ವೈದ್ಯ ಅಬ್ದುಲ್ ಗಫಾರ್ ಲಾಡಖಾನ್ ಬಳಿ ತೆರಳಿದ್ದರು. ವೈದ್ಯ 20 ಸಾವಿರ ರೂ. ಹಣ ಪಡೆದು, ಆಪರೇಷನ್ ಮಾಡಿ ಮಗು ತೆಗೆದಿದ್ದರು ಎಂಬ ಸಂಗತಿ ಗೊತ್ತಾಗಿದೆ. ಐವರು ಆರೋಪಿಗಳನ್ನು ಬಂಧಿಸಿ, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೊಲೀಸ್ ಆಯುಕ್ತರ ಪ್ರತಿಕ್ರಿಯೆ:ಪ್ರಕರಣದ ಬಗ್ಗೆ 'ಈಟಿವಿ ಭಾರತ'ವು ಬೆಳಗಾವಿ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್ ಮಾರ್ಬನ್ಯಾಂಗ್ ಅವರನ್ನು ಸಂಪರ್ಕಿಸಿದಾಗ, ''ಮಕ್ಕಳ ಮಾರಾಟ ಮಾಡುತ್ತಿದ್ದ ಗ್ಯಾಂಗ್ ಭೇದಿಸಲಾಗಿದೆ. ಐವರು ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದೇವೆ. ಆರೋಪಿಗಳು ಈವರೆಗೆ ಎಷ್ಟು ಮಕ್ಕಳನ್ನು ಮಾರಾಟ ಮಾಡಿದ್ದಾರೆ? ಯಾವೆಲ್ಲಾ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಬಗ್ಗೆ ಹೆಚ್ಚಿನ ತನಿಖೆ ಮಾಡುತ್ತಿದ್ದೇವೆ'' ಎಂದು ತಿಳಿಸಿದರು.
ಇದನ್ನೂ ಓದಿ:ಶಸ್ತ್ರಚಿಕಿತ್ಸೆಗೆ ಲಂಚ: ಮೈಸೂರು ವೈದ್ಯನಿಗೆ 4 ವರ್ಷ ಜೈಲು ಶಿಕ್ಷೆ - Doctor Sentenced To Jail