ಬೆಂಗಳೂರು:ಕರ್ನಾಟಕ ಮಹಿಳಾ ಉದ್ಯಮಿಗಳ ಸಂಘ ಗುರುವಾರ ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ 80ಕ್ಕೂ ಹೆಚ್ಚು ಮಹಿಳೆಯರಿಗೆ ವಾಣಿಜ್ಯ ಚಾಲನಾ ಪರವಾನಗಿ ವಿತರಿಸಿ ಸಾರಿಗೆ ಕ್ಷೇತ್ರದಲ್ಲಿ ಮಹಿಳೆಯರ ಸಬಲೀಕರಣದತ್ತ ಮಹತ್ವದ ಹೆಜ್ಜೆ ಇಟ್ಟಿತು.
ಈ ಪೈಕಿ ಸುಮಾರು 60 ಮಹಿಳೆಯರು ಮಹಿಳಾಕೇಂದ್ರಿತ ಟ್ಯಾಕ್ಸಿ ಸೇವೆಯಾದ ಗೋಪಿಂಕ್ನಲ್ಲಿ ನೋಂದಣಿಯಾಗಿದ್ದಾರೆ.
ಕರ್ನಾಟಕ ಮಹಿಳಾ ಉದ್ಯಮಿಗಳ ಸಂಘದಿಂದ ಬಿಡದಿಯಲ್ಲಿ ಮಹಿಳೆಯರಿಗೆ ಪ್ರಾದೇಶಿಕ ಚಾಲನಾ ತರಬೇತಿ ಕೇಂದ್ರದ ಯೋಜನೆಯನ್ನು ಕಾರ್ಯಕ್ರಮದಲ್ಲಿ ಘೋಷಿಸಲಾಯಿತು.
ಕರ್ನಾಟಕ ಸರ್ಕಾರ ಮತ್ತು ರಾಷ್ಟ್ರೀಯ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಬೆಂಬಲದಲ್ಲಿ ನಿರ್ಮಾಣವಾಗುತ್ತಿರುವ ಚಾಲನಾ ಕೇಂದ್ರಕ್ಕೆ 10 ಕೋಟಿ ರೂ ವೆಚ್ಚ ಮಾಡಲಾಗುತ್ತಿದೆ. ಮಹಿಳೆಯರಿಗಾಗಿಯೇ ಮೀಸಲಿಡಲಾಗುತ್ತಿರುವ ಈ ಸೌಲಭ್ಯವು ಭಾರತದಲ್ಲಿ ಮೊದಲನೆಯದು. ಸ್ವಯಂಚಾಲಿತ ಟ್ರ್ಯಾಕ್‌ಗಳು, ವಸತಿ ಮತ್ತು ತರಬೇತಿ ಸಂಪನ್ಮೂಲಗಳನ್ನು ಕೇಂದ್ರ ಒಳಗೊಂಡಿರುವುದಾಗಿ ತಿಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಪೂರ್ವ ವಿಭಾಗದ ಸಂಚಾರ ಡಿಸಿಪಿ ಬಿ.ಅನಿತಾ (ETV Bharat) ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪೂರ್ವ ವಿಭಾಗದ ಸಂಚಾರ ಡಿಸಿಪಿ ಬಿ.ಅನಿತಾ, "ಆಶಾ ಸಂಸ್ಥೆಯ ಉಪಕ್ರಮ ಶ್ಲಾಘನೀಯ. ಈ ಕಾರ್ಯಕ್ರಮ ಬದಲಾಗುತ್ತಿರುವ ಮನಸ್ಥಿತಿಯ ಪ್ರತಿಬಿಂಬ. ಮಹಿಳೆಯರಿಗೆ ವಾಣಿಜ್ಯ ಚಾಲನೆಯಲ್ಲಿ ತರಬೇತಿ ನೀಡುವುದರಿಂದ ಆರ್ಥಿಕ ಸ್ವಾತಂತ್ರ್ಯವನ್ನು ಉತ್ತೇಜಿಸಿದಂತಾಗುತ್ತದೆ. ಮಹಿಳಾ ಪ್ರಯಾಣಿಕರ ಸುರಕ್ಷತೆಯನ್ನೂ ಸಹ ಕಾಯ್ದುಕೊಂಡಂತಾಗುತ್ತದೆ" ಎಂದು ಹೇಳಿದರು.
ಕರ್ನಾಟಕ ಮಹಿಳಾ ಉದ್ಯಮಿಗಳ ಸಂಘದ ಅಧ್ಯಕ್ಷೆ ಎನ್.ಆರ್.ಆಶಾ ಮಾತನಾಡಿ, "ಸದ್ಯ ಮಹಿಳಾ ಚಾಲಕರಿಗೆ ಬೇಡಿಕೆ ಹೆಚ್ಚಿದೆ. ವಿಶೇಷವಾಗಿ ಬೆಂಗಳೂರಿನ ಮಹಿಳಾ ಪ್ರಯಾಣಿಕರಿಗೆ ರಾತ್ರಿಯ ವೇಳೆ ಮಹಿಳಾ ಚಾಲಕರಿಗೆ ಪ್ರಯಾಣಿಸುವುದು ಸುರಕ್ಷಿತ ಎನ್ನುವ ಭಾವನೆಯಿದೆ. ಈ ಹಿನ್ನೆಲೆಯಲ್ಲಿ ನಮ್ಮ ತರಬೇತಿ ಕಾರ್ಯಕ್ರಮಗಳು ಸುರಕ್ಷಿತ ಟ್ಯಾಕ್ಸಿ ಸೇವೆಯ ಜೊತೆಗೆ ಮಹಿಳೆಯರ ಅರ್ಥಿಕ ಬಲವರ್ಧನೆಗೆ ದಾರಿಯಾಗಲಿದೆ. ಟ್ರಾವೆಲ್ ಏಜೆನ್ಸಿಗಳು, ಪ್ರಯಾಣಿಕ ಸೇವಾ ಕೇಂದ್ರಗಳು ಮತ್ತು ಕಾರ್ ವಾಶ್ ಸೌಲಭ್ಯಗಳ ಉದ್ಯಮಗಳನ್ನು ಪ್ರಾರಂಭಿಸಲು ಅವರಿಗೆ ಇನ್ನಷ್ಟು ಪ್ರೋತ್ಸಾಹ ನೀಡಲಿದೆ" ಎಂದರು.
ಇದನ್ನೂ ಓದಿ:ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ NWKRTC ಚಾಲಕ ಮತ್ತು ನಿರ್ವಾಹಕ