ಬೆಂಗಳೂರು:ಆರ್.ಟಿ.ನಗರದ 80 ಅಡಿ ರಸ್ತೆಯಲ್ಲಿನವಾಣಿಜ್ಯಕಟ್ಟಡವೊಂದರಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದೆ. ಮೊದಲ ಮಹಡಿಯಲ್ಲಿರುವ ಮಿರಾಕಲ್ ಡ್ರಿಂಕ್ಸ್ ಹೆಸರಿನ ಆಯುರ್ವೇದಿಕ್ ಉತ್ಪನ್ನಗಳ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಹತ್ತಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ದಟ್ಟ ಹೊಗೆ ವ್ಯಾಪಿಸುತ್ತಿದ್ದಂತೆ ಅಗ್ನಿಶಾಮಕ ದಳಕ್ಕೆ ಸಾರ್ವಜನಿಕರು ಮಾಹಿತಿ ರವಾನಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಐದಕ್ಕೂ ಅಧಿಕ ಅಗ್ನಿಶಾಮಕ ವಾಹನಗಳೊಂದಿಗೆ ಸಿಬ್ಬಂದಿ ದೌಡಾಯಿಸಿ, ಬೆಂಕಿ ವ್ಯಾಪಿಸದಂತೆ ಕಾರ್ಯಾಚರಣೆ ನಡೆಸುತ್ತಿದ್ದಾರೆ.