ಕರ್ನಾಟಕ

karnataka

ETV Bharat / state

'₹1.60 ಲಕ್ಷ ಸಾಲಕ್ಕೆ ₹3.80 ಲಕ್ಷ ಪಾವತಿಸಿದರೂ ಮತ್ತೆ ಬಡ್ಡಿಗೆ ಕಿರುಕುಳ': ಬೆಂಗಳೂರಲ್ಲಿ ಎಫ್ಐಆರ್ - HARASSMENT FOR BORROWERS

ಸಾಲಕ್ಕೆ ಬಡ್ಡಿ ರೂಪದಲ್ಲಿ ಹೆಚ್ಚಿನ ಮೊತ್ತ ಪಾವತಿಸಿದರೂ ಕೂಡ ಮತ್ತೆ ಬಡ್ಡಿ ಹಣ ನೀಡುವಂತೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ದಂಪತಿ ವಿರುದ್ಧ ಬೆಂಗಳೂರಿನ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

HARASSMENT FOR BORROWERS
ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಕಚೇರಿ, ಬೆಂಗಳೂರು (ETV Bharat)

By ETV Bharat Karnataka Team

Published : Feb 9, 2025, 10:07 AM IST

ಬೆಂಗಳೂರು:1.60 ಲಕ್ಷ ರೂ. ಸಾಲಕ್ಕೆ ಬಡ್ಡಿ ರೂಪದಲ್ಲಿ 3.80 ಲಕ್ಷ ರೂ. ಪಾವತಿಸಿದ್ದರೂ ಸಹ ಮತ್ತೆ ಬಡ್ಡಿ ನೀಡುವಂತೆ ಕಿರುಕುಳ ನೀಡುತ್ತಿದ್ದ ಆರೋಪದ ಮೇಲೆ ದಂಪತಿ ವಿರುದ್ಧ ಸಿಸಿಬಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋ-ಆಪರೇಟೀವ್‌ ಡೆಪ್ಯೂಟಿ ರಿಜಿಸ್ಟ್ರಾರ್‌ ಗಂಗಾಧರ್‌ ಎಂಬವರು ನೀಡಿದ ದೂರಿನ ಮೇರೆಗೆ, ಶಶೀಂದ್ರಾ ಮತ್ತು ಅಶೋಕ್‌ ದಂಪತಿ ವಿರುದ್ಧ ರಾಜ್ಯ ಅಕ್ರಮ ಹಣ ವರ್ಗಾವಣೆ ಕಾಯ್ದೆ ಮತ್ತು ಅಧಿಕ ಬಡ್ಡಿ ವಸೂಲಿ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಜಯನಗರ ಸಿದ್ಧಾಪುರ ಕೆ.ಎಂ.ಕಾಲೊನಿ ನಿವಾಸಿ ಸಮ್ರೀನ್‌ ತಾಜ್‌ ಅವರು ತಮ್ಮ ಸಹೋದರಿಯ ಮದುವೆ ಸಲುವಾಗಿ ಸಂಬಂಧಿ ಮೊಹಮ್ಮದ್‌ ರಫೀಕ್‌ ಎಂಬಾತನ ಸಹಾಯದಿಂದ ಶಶೀಂದ್ರಾ ಎಂಬ ಮಹಿಳೆಯಿಂದ 2021ರ ಜುಲೈನಲ್ಲಿ 5% ಮಾಸಿಕ ಬಡ್ಡಿಗೆ 1.60 ಲಕ್ಷ ರೂ ಸಾಲ ಪಡೆದಿದ್ದರು. ಸಾಲ ಪಡೆಯುವಾಗ ಸಮ್ರೀನ್‌ ಮತ್ತು ಸಂಬಂಧಿ ರಫೀಕ್‌ ಇಬ್ಬರು ತಲಾ ಒಂದು ಖಾಲಿ ಚೆಕ್‌ಅನ್ನು ಶಶೀಂದ್ರಾಗೆ ನೀಡಿದ್ದಾರೆ. ಬಳಿಕ ಪ್ರತಿ ತಿಂಗಳು 8 ಸಾವಿರ ರೂ.ನಂತೆ ಒಂದೂವರೆ ವರ್ಷಗಳ ಕಾಲ ಸುಮಾರು 1.44 ಲಕ್ಷ ರೂ. ಹಣವನ್ನು ಶಶೀಂದ್ರಾಗೆ ನೀಡಿದ್ದಾರೆ ಎಂದು ಪೊಲೀಸರಿಗೆ ಕೊಟ್ಟ ದೂರಿನಲ್ಲಿ ತಿಳಿಸಲಾಗಿದೆ.

ಬಳಿಕ ಸಮ್ರೀನ್‌ಗೆ ಪ್ರತಿ ತಿಂಗಳು ಸರಿಯಾಗಿ ಬಡ್ಡಿ ಕಟ್ಟಲು ಸಾಧ್ಯವಾಗದೆ, ತಡವಾಗಿ ಬಡ್ಡಿ ಕಟ್ಟಿದ್ದಾರೆ. ಬಡ್ಡಿ ಕಟ್ಟುವುದು ವಿಳಂಬವಾದಾಗ ಶಶೀಂದ್ರಾ, ಸಮ್ರೀನ್‌ಗೆ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ದೂರಲಾಗಿದೆ. ಬಳಿಕ ಸಮ್ರೀನ್‌ ಅವರು ಎರಡು-ಮೂರು ಬಾರಿ ಶಶೀಂದ್ರಾ ಅವರ ಮನೆ ಬಳಿ ಹೋಗಿ ಬಡ್ಡಿ ಕಟ್ಟಲು ಆಗುತ್ತಿಲ್ಲ. ಅಸಲು ಹಣವನ್ನು ಮಾತ್ರ ಕಟ್ಟಿ ತೀರಿಸುವುದಾಗಿ ಮನವಿ ಮಾಡಿದ್ದಾರೆ. ಈ ವೇಳೆ ಶಶೀಂದ್ರಾ, ಯಾವುದೇ ಕಾರಣಕ್ಕೂ ಬಡ್ಡಿ ಬಿಡುವುದಿಲ್ಲ ಎಂದಿದ್ದಾರೆ. ಇದಕ್ಕೆ ಸಮ್ರೀನ್‌ ಇನ್ನುಮುಂದೆ ಪ್ರತಿ ತಿಂಗಳು 10 ಸಾವಿರ ರೂ. ಅಸಲು ಮತ್ತು 5 ಸಾವಿರ ರೂ. ಬಡ್ಡಿ ಸೇರಿ 15 ಸಾವಿರ ರೂ. ಕಟ್ಟುವುದಾಗಿ ಮಾತುಕತೆ ಮಾಡಿಕೊಂಡು ಬರಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಚೆಕ್‌ ದುರುಪಯೋಗಪಡಿಸಿಕೊಂಡು ಬ್ಯಾಂಕ್‌ಗೆ ಹಾಕಿ ಬೌನ್ಸ್‌:ಅದರಂತೆ, 2023ರ ನವೆಂಬರ್‌ನಿಂದ ಪ್ರತಿ ತಿಂಗಳು 15 ಸಾವಿರ ರೂ. ಹಣವನ್ನು ಶಶೀಂದ್ರಾಗೆ ಫೋನ್‌ ಪೇ ಮುಖಾಂತರ ಪಾವತಿಸಲಾಗಿತ್ತು. 2024ರ ಮೇ 24ರ ವರೆಗೆ ಬಡ್ಡಿ ರೂಪದಲ್ಲಿ ಒಟ್ಟು 1.86 ಲಕ್ಷ ರೂ. ಪಾವತಿಸಲಾಗಿದೆ. ಈ ನಡುವೆ ಶಶೀಂದ್ರಾ ಟ್ಯಾಕ್ಸ್‌ ಕಟ್ಟಬೇಕು ಎಂದು ಸಮ್ರೀನ್‌ ಬಳಿ ನಗದು ರೂಪದಲ್ಲಿ 50 ಸಾವಿರ ಪಡೆದಿದ್ದಾರೆ. ಅಂದರೆ 1.60 ಲಕ್ಷ ರೂ. ಸಾಲಕ್ಕೆ ಮೀಟರ್ ಬಡ್ಡಿ ರೂಪದಲ್ಲಿ ಒಟ್ಟು 3.80 ಲಕ್ಷ ರೂ. ಪಡೆದುಕೊಂಡಿದ್ದಾರೆ. ಬಳಿಕವೂ, ಈವರೆಗೆ ನೀನು ಕಟ್ಟಿರುವ ಹಣ ಬಡ್ಡಿಗೆ ಸರಿಯಾಗಿದೆ. ಹೀಗಾಗಿ, ನೀನು ಅಸಲು ಹಣ ಕಟ್ಟಬೇಕು. ಜೊತೆಗೆ, ಅಸಲು ಕಟ್ಟುವವರೆಗೂ ಬಡ್ಡಿ ಕಟ್ಟಬೇಕು ಎಂದು ಶಶೀಂದ್ರಾ ಒತ್ತಾಯಿಸಿದ್ದಾರೆ. ಈ ನಡುವೆ ಸಮ್ರೀನ್‌ ಸಾಲ ಪಡೆಯುವಾಗ ಸಂಬಂಧಿ ರಫೀಕ್‌ ನೀಡಿದ್ದ ಖಾಲಿ ಚೆಕ್‌ ಅನ್ನು ಶಶೀಂದ್ರಾ ದುರುಪಯೋಗಪಡಿಸಿಕೊಂಡು 4 ಲಕ್ಷ ರೂ. ಬರೆದುಕೊಂಡು ಬ್ಯಾಂಕ್‌ಗೆ ಹಾಕಿ ಬೌನ್ಸ್‌ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಲೇವಾದೇವಿ ಪರವಾನಗಿ ಪಡೆಯದ ಆರೋಪ:ಶಶೀಂದ್ರಾ ಮತ್ತು ಆಕೆಯ ಪತಿ ಅಶೋಕ್‌ ಹಲವು ವರ್ಷಗಳಿಂದ ಮೀಟರ್‌ ಬಡ್ಡಿ ದಂಧೆ ನಡೆಸುತ್ತಿದ್ದಾರೆ. ಸಾಲ ನೀಡುವಾಗ ಭದ್ರತೆಗೆ ದಾಖಲೆಗಳನ್ನು ಪಡೆದು ಬಳಿಕ ಮೀಟರ್‌ ಬಡ್ಡಿ ವಿಧಿಸಿ, ಖಾಲಿ ಚೆಕ್‌ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದೇ ರೀತಿ ಹಲವರಿಗೆ ಯಾಮಾರಿಸಿದ್ದಾರೆ. ಲೇವಾದೇವಿ ನಡೆಸಲು ಈ ದಂಪತಿ ಯಾವುದೇ ಪರವಾನಗಿ ಪಡೆದಿಲ್ಲ ಎಂದು ಆರೋಪಿಸಿರುವ ಸಮ್ರೀನ್‌, ದಂಪತಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಕೋ-ಆಪರೇಟೀವ್‌ ಡೆಪ್ಯೂಟಿ ರಿಜಿಸ್ಟ್ರಾರ್‌ಗೆ ದೂರು ನೀಡಿದ್ದರು. ಈ ಸಂಬಂಧ ಡೆಪ್ಯೂಟಿ ರಿಜಿಸ್ಟ್ರಾರ್‌ ಅವರು ಸಿಸಿಬಿಗೆ ದೂರು ಸಲ್ಲಿಸಿದ್ದಾರೆ. ಈ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುತ್ತಿದೆ ಎಂದು ಸಿಸಿಬಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:₹1.20 ಲಕ್ಷಕ್ಕೆ ₹12 ಲಕ್ಷ ಬಡ್ಡಿ ಕಟ್ಟಿದರೂ ಸಾಲ ತೀರಿಲ್ಲವೆಂದು ಟ್ರ್ಯಾಕ್ಟರ್ ಕೊಂಡೊಯ್ದ ಆರೋಪಿ ಬಂಧನ

ABOUT THE AUTHOR

...view details