ಮಂಗಳೂರು: "ಮಂಗಳೂರು ವಿಶ್ವವಿದ್ಯಾಲಯವು ಆರ್ಥಿಕ ಸಮಸ್ಯೆಯನ್ನು ಅನುಭವಿಸುತ್ತಿದ್ದು, ಉಪನ್ಯಾಸಕರ, ಸಿಬ್ಬಂದಿಯ ವೇತನ ಸೇರಿದಂತೆ, ಘಟಕ ಕಾಲೇಜುಗಳನ್ನು ನಡೆಸಲು ಸಮಸ್ಯೆಯಾಗಿದೆ" ಎಂದು ಮಂಗಳೂರು ವಿವಿ ಕುಲಪತಿ ಡಾ.ಪಿ.ಎಲ್.ಧರ್ಮ ತಿಳಿಸಿದ್ದಾರೆ.
ವಿಶ್ವವಿದ್ಯಾಲಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪನ್ಯಾಸಕರು, ಸಿಬ್ಬಂದಿಗೆ ಮೂರ್ನಾಲ್ಕು ತಿಂಗಳಿಗೊಮ್ಮೆ ವೇತನ ನೀಡುವ ಪರಿಸ್ಥಿತಿ ಎದುರಾಗಿದೆ. ವಿವಿಗೆ ಆದಾಯ ನೀಡುತ್ತಿದ್ದ ದೂರ ಶಿಕ್ಷಣ ಕೇಂದ್ರವನ್ನು ಸರ್ಕಾರದ ಆದೇಶದ ಮೇರೆಗೆ ಮುಚ್ಚಲಾಗಿದೆ. ಮಂಗಳೂರು ವಿವಿಯ ಆಂತರಿಕ ಸಂಪನ್ಮೂಲ ಕಾಲೇಜುಗಳ ಶುಲ್ಕ, ವಿವಿಧ ಸರ್ಟಿಫಿಕೇಟ್ಗಳಿಂದ ಬರುವ ಮೊತ್ತಕ್ಕೆ ಸೀಮಿತಗೊಂಡಿದೆ. ಯುಜಿಸಿ ಪ್ರಾಜೆಕ್ಟ್ಗಳು, ಕೈಗಾರಿಕೆಗಳಿಂದ ದೊರೆಯುತ್ತಿದ್ದ ಆದಾಯವೂ ಕಡಿಮೆ ಆಗಿದೆ. ಈ ಎಲ್ಲದರ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ" ಎಂದು ಹೇಳಿದರು.
"ಮಂಗಳೂರು ವಿವಿಗೊಳಪಟ್ಟಿದ್ದ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳಿದ್ದ ಶಿಕ್ಷಣ ಸಂಸ್ಥೆಗಳು ಅಟೋನೋಮಸ್ ಆಗಿರುವುದು, ಇದರಿಂದ ವಿದ್ಯಾರ್ಥಿಗಳ ಶುಲ್ಕದಿಂದ ಬರುವ ಆದಾಯವು ಬಾರದಂತಾಗಿದೆ. ಮಂಗಳೂರು ವಿಶ್ವವಿದ್ಯಾಲಯವು ತನ್ನ ಆಂತರಿಕ ಸಂಪತ್ತಿನ ಕ್ರೋಢೀಕರಣ ಶಕ್ತಿಯನ್ನು ಕಳೆದುಕೊಂಡಿದೆ. ಆಳ್ವಾಸ್, ಫಿಲೋಮಿನಾ, ವಿವೇಕಾನಂದ ಕಾಲೇಜುಗಳು ಸ್ವಾಯತ್ತ ಕಾಲೇಜುಗಳಾಗಿರುವುದರಿಂದ ಅವುಗಳಿಂದ ಬರುತ್ತಿದ್ದ ಶುಲ್ಕ ಸಿಗುತ್ತಿಲ್ಲ. ಕೊರೊನಾ ಬಳಿಕ ಸರ್ಕಾರದಿಂದ ಅನುದಾನವೂ ಬರುತ್ತಿಲ್ಲ. ಇದರ ಜತೆಗೆ ಈ ಘಟಕ ಕಾಲೇಜುಗಳ ನಿರ್ವಹಣೆಯೂ ಕಷ್ಟವಾಗಿ, ಘಟಕ ಕಾಲೇಜು ಮುಚ್ಚುವ ಬಗ್ಗೆ ಎಲ್ಲಿಯೂ ವಿವಿ ಮಾತೆತ್ತಿಲ್ಲ. ಆದರೆ ಸರ್ಕಾರದಿಂದ ಅನುಮತಿಯೇ ಇಲ್ಲದೆ ಈ ಕಾಲೇಜುಗಳನ್ನು ನಡೆಸುವುದು ಅಸಾಧ್ಯ. ಈ ಹಿಂದೆ ಅನುಮತಿಯ ಭರವಸೆಯೊಂದಿಗೆ ಅದನ್ನು ನಡೆಸಲಾಗುತ್ತಿತ್ತಾದರೂ ಮುಂದೆ ನಡೆಸುವುದು ಸಾಧ್ಯವಿಲ್ಲ" ಎಂದರು.