ಕರ್ನಾಟಕ

karnataka

ETV Bharat / state

ಕನ್ನಡದ ಕಣ್ಮಣಿ 'ಪಾಟೀಲ್​​​​ ಪುಟ್ಟಪ್ಪ' ಸಮಾಧಿಗೆ ಬೇಕಿದೆ ಅಭಿವೃದ್ಧಿ; 'ಪಾಪು' ಕೃತಿಗಳ ಗ್ರಂಥಾಲಯ ಸ್ಥಾಪಿಸಲು ಒತ್ತಾಯ - Patil Puttappa tomb needs develop

ಕನ್ನಡಿಗರ ಅಸ್ಮಿತೆಯ ಸಂಕೇತವಾಗಿದ್ದ ಪಾಟೀಲ್ ಪುಟ್ಟಪ್ಪ ಅವರ ಸಮಾಧಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದು, ಆದಷ್ಟು ಬೇಗ ಅಭಿವೃದ್ಧಿ ಮಾಡುವಂತೆ ಸಾಹಿತಿಗಳು, ಪುಟ್ಟಪ್ಪ ಅವರ ಸಂಬಂಧಿಗಳು ಮನವಿ ಮಾಡಿದ್ದಾರೆ.

By ETV Bharat Karnataka Team

Published : Jul 5, 2024, 4:24 PM IST

ಪಾಟೀಲ್​​​​ ಪುಟ್ಟಪ್ಪ ಅವರ ಸಮಾಧಿಗೆ ಬೇಕಿದೆ ಅಭಿವೃದ್ಧಿ
ಪಾಟೀಲ್​​​​ ಪುಟ್ಟಪ್ಪ ಅವರ ಸಮಾಧಿಗೆ ಬೇಕಿದೆ ಅಭಿವೃದ್ಧಿ (ETV Bharat)

'ಪಾಟೀಲ್​​​​ ಪುಟ್ಟಪ್ಪ' ಸಮಾಧಿಗೆ ಬೇಕಿದೆ ಅಭಿವೃದ್ಧಿ (ETV Bharat)

ಹಾವೇರಿ: ನಾಡು ನುಡಿ ನೆಲ ಜಲಕ್ಕಾಗಿ ಹೋರಾಡಿದ ಕನ್ನಡದ ಕಟ್ಟಾಳು ಪಾಟೀಲ್​ ಪುಟ್ಟಪ್ಪ. ನೇರ ನಿಷ್ಟುರತೆಯಿಂದ ಸರ್ಕಾರಗಳನ್ನೇ ಎದುರು ಹಾಕಿಕೊಂಡ ಪಾಟೀಲ್​​​ ಪುಟ್ಟಪ್ಪ 'ಪಾಪು' ಎಂತಲೇ ಪ್ರಸಿದ್ಧಿ ಪಡೆದಿದ್ದಾರೆ. ಗೋಕಾಕ್​ ಚಳವಳಿ ಸೇರಿದಂತೆ ಹಲವು ಚಳವಳಿಗಳಿಗೆ ಬೆನ್ನೆಲುಬಾಗಿ ನಿಂತವರು ಪಾಪು.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಹಲಗೇರಿ ಪಾಟೀಲ್​ ಪುಟ್ಟಪ್ಪ ಅವರ ಜನ್ಮಭೂಮಿ. ಇಲ್ಲಿಯೇ ಬಾಲ್ಯಜೀವನ ಕಳೆದು ಪಾಟೀಲ್ ಪುಟ್ಟಪ್ಪ ನಂತರ ಹುಬ್ಬಳ್ಳಿಯನ್ನು ತಮ್ಮ ಕರ್ಮಭೂಮಿಯನ್ನಾಗಿಸಿಕೊಂಡು ಹಲವು ವಲಯಗಳಲ್ಲಿ ಸೈ ಎನಿಸಿಕೊಂಡರು. ಕನ್ನಡನಾಡು ಕಂಡ ಅಪ್ಪಟ ಬರಹಗಾರ ಪಾಟೀಲ್ ಪುಟ್ಟಪ್ಪ ಮಾರ್ಚ್ 16 ರಂದು ಇಹಲೋಕ ತ್ಯಜಿಸಿದ್ದಾರೆ.

ಅವರ ಅಣತಿಯಂತೆ ಅವರ ನಿಧನದ ನಂತರ ಅವರ ಪೂರ್ವಜರು ಇರುವ ಹಲಗೇರಿ ಗ್ರಾಮದ ತೆಂಗಿನ ಅಡಿಕೆ ತೋಟದಲ್ಲಿ ಪಾಟೀಲ್ ಪುಟ್ಟಪ್ಪ ಅವರ ಅಂತ್ಯಕ್ರಿಯೆ ನಡೆಸಲಾಗಿತ್ತು. "ಪಾಟೀಲ್ ಪುಟ್ಟಪ್ಪ ಅಂತ್ಯಕ್ರಿಯೆಗೆ ಅಂದು ಗೃಹಸಚಿವರಾಗಿದ್ದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೃಷಿ ಸಚಿವ ಬಿ.ಸಿ.ಪಾಟೀಲ್​ ಸೇರಿದಂತೆ ಮಠಾಧೀಶರು ಪಾಲ್ಗೊಂಡಿದ್ದರು. ಆ ಸಂದರ್ಭದಲ್ಲಿ ಸರ್ಕಾರದ ಪ್ರತಿನಿಧಿಗಳು, ಅಧಿಕಾರಿಗಳು ಪಾಟೀಲ್ ಪುಟ್ಟಪ್ಪ ಸಮಾಧಿಯನ್ನು ಪುಣ್ಯಭೂಮಿಯನ್ನಾಗಿ ಮಾಡುವುದಾಗಿ ತಿಳಿಸಿದ್ದರು".

"ಆದರೆ, ಪಾಟೀಲ್​ ಪುಟ್ಟಪ್ಪ ನಿಧನರಾಗಿ 4 ವರ್ಷವಾದರೂ ಅವರ ಸಮಾಧಿ ಮಾತ್ರ ಯಾವುದೇ ಅಭಿವೃದ್ಧಿ ಕಂಡಿಲ್ಲ. ಪುಟ್ಟಪ್ಪ ಅವರ ಸಮಾಧಿ ಅಡಕೆ ತೋಟದಲ್ಲಿ ನಿರ್ಲಕ್ಷ್ಯಕ್ಕೆ ತುತ್ತಾಗಿದೆ. ಕಳೆದ ಕೆಲ ದಿನಗಳ ಹಿಂದೆ ಬ್ಯಾಡಗಿಯ ಅಭಿಮಾನಿಯೊಬ್ಬ ಸಿಮೆಂಟ್​​ ಇಟ್ಟಿಗೆಗಳಿಂದ ಪುಟ್ಟಪ್ಪ ಸಮಾಧಿಗೆ ಗೋಡೆ ಕಟ್ಟೆಯೊಂದನ್ನು ಕಟ್ಟಿದ್ದಾರೆ. ಅದು ಮಾಡದೇ ಇದಿದ್ದರೇ ಪಾಟೀಲ್​ ಪುಟ್ಟಪ್ಪ ಸಮಾಧಿ ಹುಡುಕಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಸಮಾಧಿಯ ಅಭಿವೃದ್ಧಿ ಇರಲಿ ಸಮಾಧಿಗೆ ಹೋಗಲು ಸಹ ಸರಿಯಾದ ದಾರಿಯಿಲ್ಲ. ಪಾಟೀಲ್​ ಪುಟ್ಟಪ್ಪ ಅವರ ಸಮಾಧಿ ಎಂಬ ಬೋರ್ಡ್​ ಬಿಟ್ಟರೆ ಮತ್ಯಾವ ಅಭಿವೃದ್ಧಿ ಕಾರ್ಯವನ್ನೂ ಇಲ್ಲಿ ಮಾಡಲಾಗಿಲ್ಲ. ಪಾಟೀಲ್​ ಪುಟ್ಟಪ್ಪ ರಾಜ್ಯಕ್ಕಾಗಿ ತಮ್ಮ ಇಡೀ ಜೀವನ ಸವೆಸಿದ್ದಾರೆ. ಕನ್ನಡಿಗರ ಅಸ್ಮಿತೆಯ ಸಂಕೇತವಾಗಿದ್ದ ಪಾಟೀಲ್ ಪುಟ್ಟಪ್ಪ ಅವರಿಗೆ ಹೀಗೆ ಆದರೆ ಹೇಗೆ" ಎಂದು ಸಾಹಿತಿ ಸತೀಶ್​ ಕುಲಕರ್ಣಿ ಬೇಸರ ವ್ಯಕ್ತಪಡಿಸಿದ್ದಾರೆ.

ಸರ್ಕಾರ ಪಾಪು ಅವರ ಸಮಾಧಿಯನ್ನು ಪ್ರವಾಸಿ ಸ್ಥಳವನ್ನಾಗಿ ಮಾಡಬೇಕಾಗಿತ್ತು. ಅಲ್ಲಿಗೆ ಬರುವ ನವಪತ್ರಕರ್ತರಿಗೆ, ಸಾಹಿತಿಗಳಿಗೆ, ಬರಹಗಾರರಿಗೆ, ಕನ್ನಡ ಹೋರಾಟಗಾರರಿಗೆ ಮಾರ್ಗದರ್ಶನ ನೀಡವಂತಹ ಸ್ಥಳವನ್ನಾಗಿ ಮಾಡಬೇಕು. ಮೊದಲು ಪುಣ್ಯಸ್ಥಳ ನಿರ್ಮಾಣ ಮಾಡಬೇಕು. ಸಮಾಧಿ ಬಳಿಯೇ ಪುಟ್ಟಪ್ಪ ಅವರ ಜೀವನದ ಮಹತ್ತರ ಘಟನೆಗಳ ಚಿತ್ರಗಳು, ಅವರ ಕೃತಿಗಳು ಸೇರಿದಂತೆ ಗ್ರಂಥಾಲಯ ಸ್ಥಾಪಿಸಬೇಕು ಎಂದು ಸಾಹಿತಿಗಳು ಒತ್ತಾಯಿಸುತ್ತಿದ್ದಾರೆ. ಕನ್ನಡಿಗರಿಗೆ ಅನ್ಯಾಯವಾದಾಗ ದೊಡ್ಡ ದ್ವನಿಯಾಗುತ್ತಿದ್ದವರು ಪಾಟೀಲ್ ಪುಟ್ಟಪ್ಪ. ಆದರೆ, ಪಾಟೀಲ್ ಪುಟ್ಟಪ್ಪ ಸಮಾಧಿ ನಿರ್ಮಾಣಕ್ಕೆ ಅಧಿಕಾರಿಗಳು,ಜನಪ್ರತಿನಿಧಿಗಳು ಮುಂದಾಗದೇ ಇರುವುದಕ್ಕೆ ಸಾಹಿತಿಗಳು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಉಡುಪಿ: ಯಕ್ಷ ಸಾಧಕ ಹಂದಾಡಿ ಬಾಲಕೃಷ್ಣ ನಾಯಕ್ ಇನ್ನಿಲ್ಲ

ABOUT THE AUTHOR

...view details