ಬಳ್ಳಾರಿ: "ಶ್ರೀರಾಮುಲುಗೆ ಸ್ವಲ್ಪ ಮುಂಗೋಪ ಅಷ್ಟೇ. ರೆಡ್ಡಿ ಸಹೋದರರು ಹಾಗೂ ಶ್ರೀರಾಮುಲು ಒಟ್ಟಾಗಿದ್ದಾಗ ಏನಾಗಿತ್ತು, ಬೇರೆ ಬೇರೆಯಾದಾಗ ಏನಾಗಿತ್ತೆನ್ನುವುದು ಎಲ್ಲರಿಗೂ ಗೊತ್ತಾಗಿದೆ. ಈಗ ಒಂದಾಗುವ ಸಮಯ ಬಂದಿದೆ" ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಹೇಳಿದರು.
ಇಂದು ಬಳ್ಳಾರಿಗೆ ಭೇಟಿ ನೀಡಿದ ಅವರು, ರೆಡ್ಡಿ ಸಹೋದರರ ಮುನಿಸು ಹಾಗೂ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ವಿಚಾರದ ಕುರಿತು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದರು.
"ಸದ್ಯ ಬಳ್ಳಾರಿ ಬಿಜೆಪಿ ಸ್ಥಿತಿ ಎಲ್ಲ ನಾಯಕರಿಗೆ ಗೊತ್ತಾಗಿದೆ. ನಾವೆಲ್ಲ ಬಳ್ಳಾರಿಗೆ ಬಂದು ಹೋಗುತ್ತೇವೆ ಅಷ್ಟೇ. ಇಲ್ಲೇ ಇರುವವರಲ್ಲ. ಅವರು ಇಲ್ಲೇ ಇರುವವರು. ಸ್ವಲ್ಪ ದಿನದಲ್ಲಿ ಕಾದು ನೋಡಿ, ಎಲ್ಲರೂ ಒಟ್ಟಾಗ್ತಾರೆ. ಬಳ್ಳಾರಿ ಅಷ್ಟೇ ಅಲ್ಲ, ರಾಜ್ಯ ಬಿಜೆಪಿಯಲ್ಲೂ ಯಾವುದೇ ಸಮಸ್ಯೆ ಇಲ್ಲ. ಮತ್ತೆ ಹಳೆ ಬಿಜೆಪಿಯನ್ನು ಸ್ವಲ್ಪ ದಿನಗಳಲ್ಲೇ ನೋಡುತ್ತೀರಿ. ಡಿಸೆಂಬರ್ ನಂತರ ಪಕ್ಷ ಹಳೆ ಮಾದರಿಯಲ್ಲಿ ಮತ್ತೊಮ್ಮೆ ಗಟ್ಟಿಯಾಗುತ್ತದೆ. ರೆಡ್ಡಿ ಸಹೋದರರನ್ನು ಒಂದು ಮಾಡುತ್ತೇವೆ" ಎಂದರು.
ಸಿಎಂ ಸಿದ್ದರಾಮಯ್ಯ ಬಗ್ಗೆ ಸೋಮಣ್ಣ ಸಾಫ್ಟ್ ಕಾರ್ನರ್: "ಮುಡಾ ಅಕ್ರಮದ ಬಗ್ಗೆ ಪದೇ ಪದೇ ಮಾತಾಡೋದು ಬೇಡ. ಕಾನೂನಿದೆ, ಅದರ ಪಾಡಿಗೆ ಅದು ತನಿಖೆ ಮಾಡುತ್ತದೆ. ಈ ಬಗ್ಗೆ ಎಷ್ಟು ಬಾರಿ ಮಾತಾನಾಡಿದರೂ ಅಷ್ಟೇ. ಸಿಎಂ ರಾಜೀನಾಮೆ ಪಡೆಯೋದು, ಬಿಡುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ನಾವು ಯಾರೂ ಸಿದ್ದರಾಮಯ್ಯನವರ ಪತ್ನಿ ಬಗ್ಗೆ ಮಾತನಾಡಿಲ್ಲ. ಊಹೆ ಮಾಡಿಕೊಂಡು ಮಾತನಾಡಬೇಡಿ. ಸಿದ್ದರಾಮಯ್ಯನವರ ಪತ್ನಿ ಬಗ್ಗೆ ನಮಗೆ ಗೌರವ ಇದೆ. ಮುಡಾ ಹಗರಣದ ವಿಚಾರದಲ್ಲಿ ಏನು ನಿರ್ಧಾರ ತೆಗೆದುಕೊಳ್ಳಬೇಕೆನ್ನುವುದು ಅವರ ಪಕ್ಷಕ್ಕೆ ಬಿಟ್ಟದ್ದು" ಎಂದು ತಿಳಿಸಿದರು.