ಮೀರತ್(ಉತ್ತರ ಪ್ರದೇಶ): ಮದುಮಗನ ಮಾಲೆಯಲ್ಲಿದ್ದ ನೋಟು ಕಸಿದು ಪರಾರಿಯಾಗುತ್ತಿದ್ದ ಕಳ್ಳನನ್ನು ವರನೇ ಸಿನಿಮೀಯ ಶೈಲಿಯಲ್ಲಿ ಹಿಡಿದಿರುವ ಘಟನೆ ನಡೆದಿದೆ.
ಮೀರತ್ನ ಡುಂಗ್ರೌಲಿ ಗ್ರಾಮದಲ್ಲಿ ಯುವಕನ ಮದುವೆ ನಡೆದಿತ್ತು. ಮದುವೆಯ ಬಳಿಕ ಅಲ್ಲಿಂದ ಪೂಜೆಗಾಗಿ ದೇವಾಲಯಕ್ಕೆ ಕುಟುಂಬಸಮೇತ ತೆರಳುತ್ತಿರುವಾಗ ಕಳ್ಳನೊಬ್ಬ ವರನ ಮಾಲೆಯಲ್ಲಿದ್ದ ನೋಟಿನ ಹಾರವನ್ನೇ ಕಸಿದು ಮಿನಿ ಟ್ರಕ್ನಲ್ಲಿ ಪರಾರಿಯಾಗುತ್ತಾನೆ. ಇತ್ತ ಮದುಮಗ ಕೈಕಟ್ಟಿ ಕೂರದೆ ಕಳ್ಳನನ್ನು ಹಿಂಬಾಲಿಸುತ್ತಾನೆ.
ಚಲಿಸುತ್ತಿದ್ದ ವಾಹನವನ್ನು ಹತ್ತಿದ ವರ ಕಿಟಕಿ ಮೂಲಕ ಅಲ್ಲಿಂದಲೇ ಹಣದ ಹಾರವನ್ನು ಕಳ್ಳನಿಂದ ಪಡೆದು ವಾಹನ ನಿಲ್ಲಿಸಲು ಹೇಳುತ್ತಾನೆ. ಆದರೆ ಕಳ್ಳ ಮಾತು ಕೇಳದೇ ಇದ್ದಾಗ ಕಿಟಕಿ ಮೂಲಕವೇ ಒಳಗೆ ನುಗ್ಗಿ ವಾಹನ ನಿಲ್ಲಿಸುತ್ತಾನೆ. ಆ ವೇಳೆ ಕುಟುಂಬಸ್ಥರು ಬಂದಿದ್ದು ಆತನನ್ನು ಹೊರಗೆಳೆದು ಥಳಿಸಿದ್ದಾರೆ. ಎಲ್ಲರೂ ತನ್ನ ಸುತ್ತ ಸೇರಿದ್ದನ್ನು ಕಂಡ ಕಳ್ಳ ಕ್ಷಮೆಯಾಚಿಸಲು ಪ್ರಾರಂಭಿಸುತ್ತಾನೆ. ಬಳಿಕ ಹಿರಿಯರು ಮನವೊಲಿಸಿದ್ದು ಅವನನ್ನು ಬಿಟ್ಟು ಬಿಡಲಾಗಿದೆ.
ಈ ಘಟನೆಯ ವಿಡಿಯೋವನ್ನು ಯಾರೋ ಸೆರೆ ಹಿಡಿದಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಮದುಮಗನ ಹೀರೋಯಿಸಂಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಈ ಕುರಿತು ಯಾರಿಂದಲೂ ದೂರು ಬಂದಿಲ್ಲ ಎಂದು ಗ್ರಾಮಾಂತರ ಎಸ್ಪಿ ರಾಕೇಶ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಗೂಗಲ್ ಮ್ಯಾಪ್ ಎಡವಟ್ಟು: ಸೇತುವೆಯಿಂದ ನದಿಗೆ ಬಿದ್ದ ಕಾರು, ಸ್ಥಳದಲ್ಲೇ ಮೂವರು ಸಾವು