ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯ ವ್ಯಾಪ್ತಿಯ ಬಾಚಹಳ್ಳಿಯಲ್ಲಿ ಹೆಣ್ಣಾನೆಯೊಂದರ ಮೃತದೇಹ ದೊರೆತಿದೆ. ಆನೆ ಆಂಥ್ರಾಕ್ಸ್ (Anthrax-ನೆರಡಿ) ಕಾಯಿಲೆಯಿಂದ ಮೃತಪಟ್ಟಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಶಂಕಿಸಿದ್ದಾರೆ.
ಆನೆಗೆ ಅಂದಾಜು 30 ವರ್ಷ ವಯಸ್ಸಾಗಿದ್ದು, ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ತಿರುಗುತ್ತಿದ್ದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಸ್ಥಳಕ್ಕಾಗಮಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಹಾಗೂ ವಲಯ ಅರಣ್ಯಾಧಿಕಾರಿ ಮಲ್ಲೇಶ್ ಪರಿಶೀಲನೆ ನಡೆಸಿದ್ದಾರೆ.
ಆನೆಯ ಬಾಯಿ, ಗುದದ್ವಾರ, ಕಿವಿ, ಬಾಲದಲ್ಲಿ ರಕ್ತ ಸೋರಿಕೆಯಾಗಿರುವುದು ಕಂಡು ಬಂದಿದೆ. ಪರಿಶೀಲನೆಯ ಸಮಯದಲ್ಲಿ ಪಶು ವೈದ್ಯ ಡಾ.ಮಿರ್ಜಾ ವಾಸೀಂ ಅಂಥ್ರಾಕ್ಸ್ ರೋಗದ ಗುಣ ಲಕ್ಷಣಗಳು ಮೇಲ್ನೋಟಕ್ಕೆ ಕಂಡುಬಂದಿವೆ ಎಂದಿದ್ದಾರೆ.