ಕೃಷಿ ಪಂಪ್ ಸೆಟ್ಗೆ ಆಧಾರ್ ಜೋಡಣೆ ಕೈಬಿಡಿ: ಸಿಎಂಗೆ ರೈತ ಒಕ್ಕೂಟಗಳ ಮನವಿ (ETV Bharat) ಬೆಂಗಳೂರು: ಕೃಷಿ ಪಂಪ್ ಸೆಟ್ಗಳ ರೈತರು ಆಧಾರ್ ಲಿಂಕ್ ಮಾಡುತ್ತಿರುವುದನ್ನು ಕೈ ಬಿಡಬೇಕು ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟಗಳ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿತು.
ಕುರುಬೂರು ಶಾಂತಕುಮಾರ್ ನೇತೃತ್ವದಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ವಿವಿಧ ಬೇಡಿಕೆಗಳ ಬಗ್ಗೆ ಮನವಿ ಪತ್ರ ಸಲ್ಲಿಸಿದರು. ಮುಖ್ಯವಾಗಿ ಕೃಷಿ ಪಂಪ್ ಸೆಟ್ಗಳಿಗೆ ಆಧಾರ್ ಜೋಡಣೆ ಮಾಡಲಾಗುತ್ತಿದ್ದು, ಕೂಡಲೇ ಅದನ್ನು ನಿಲ್ಲಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಿಎಂ ಸಿದ್ದರಾಮಯ್ಯ, ರೈತರು ಕೃಷಿ ಪಂಪ್ ಸೆಟ್ಗಳನ್ನು ಆಧಾರ್ಗೆ ಜೋಡಣೆ ಮಾಡಬೇಕಾಗಿಲ್ಲ. ಸದ್ಯ ಹೇಗಿದೆ ಮುಂದೆಯೂ ಹಾಗೇ ಮುಂದುವರಿಯಲಿದೆ ಎಂದು ಭರವಸೆ ನೀಡಿದ್ದಾರೆ ಎಂದು ಕುರುಬೂರು ಶಾಂತಕುಮಾರ್ ತಿಳಿಸಿದರು.
ರಾಜ್ಯದ ಎಲ್ಲ ಜಲಾಶಯಗಳ ಹಾಗೂ ಕೆರೆಗಳ ಹೂಳು ತೆಗೆಸಿ, ಈ ಮಣ್ಣನ್ನು ರೈತರ ಜಮೀನಿಗೆ ಸರಬರಾಜು ಮಾಡುವ ಯೋಜನೆ ರೂಪಿಸಬೇಕು. ತೆಲಂಗಾಣ ಸರ್ಕಾರದ ಮಾದರಿಯಲ್ಲಿ ಈ ಕೆಲಸ ಮಾಡಬೇಕು ಎಂದು ಮನವಿ ಮಾಡಲಾಗಿದೆ. ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ರದ್ದು ಮಾಡಲು ಕ್ರಮ ಕೈಗೊಳ್ಳಬೇಕು. ಕೃಷಿ ಸಾಲ ಪಾವತಿಸದ ರೈತರ ಜಮೀನು ವಶಪಡಿಸಿಕೊಳ್ಳುವ ಸರ್ಪೈಸಿ ಕಾಯ್ದೆ ಜಾರಿಗೆ ತಂದಿರುವುದನ್ನ ರದ್ದುಗೊಳಿಸುವಂತೆ ಕೇಂದ್ರಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದೇವೆ ಎಂದರು.
ವೈಜ್ಞಾನಿಕ ಪರಿಹಾರ ಮಾನದಂಡಕ್ಕೆ ಆಗ್ರಹ:ಬರ, ಅತಿವೃಷ್ಟಿ ಹಾನಿ, ಪ್ರವಾಹ ಹಾನಿ, ಎನ್ಡಿಆರ್ಎಫ್ ಪರಿಹಾರ ಮಾನದಂಡ ತಿದ್ದುಪಡಿ ಮಾಡಿ ವೈಜ್ಞಾನಿಕ ಪರಿಹಾರ ಮಾಡದಂಡ ಜಾರಿಯಾಗಬೇಕು. ಖಾಸಗಿ ಫೈನಾನ್ಸ್ಗಳು, ಬ್ಯಾಂಕುಗಳು ಸಾಲ ವಸೂಲಿಗೆ ನೋಟಿಸ್ ನೀಡಿ ಕಿರುಕುಳ ನೀಡಿ ಜಮೀನುಗಳನ್ನು ಹರಾಜು ಮಾಡುತ್ತಿರುವುದನ್ನು ನಿಲ್ಲಿಸಬೇಕು. ಜಿಂದಾಲ್ ಕಂಪನಿಗೆ 3,667 ಎಕರೆ ಜಮೀನು ನೀಡಿರುವುದನ್ನು ಕೈ ಬಿಡಬೇಕು. ಕಳಸಾ ಬಂಡೂರಿ ಯೋಜನೆಗೆ ವನ್ಯಜೀವಿ ಮಂಡಳಿ ಅನುಮತಿ ನೀಡಿ ಯೋಜನೆಗೆ ಅವಕಾಶ ಕಲ್ಪಿಸಬೇಕು ಎಂದು ಕೇಂದ್ರಕ್ಕೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ಕಬ್ಬಿನ ಉತ್ಪನ್ನ, ಇಳುವರಿ, ಕಡಿಮೆ ತೋರುತ್ತಿರುವ ಕಾರಣ ಪ್ರಸಕ್ತ ಸಾಲಿಗೆ ಎಫ್ಆರ್ಪಿ ದರ ಕ್ಕಿಂತ ಕಬ್ಬಿನ ಹೆಚ್ಚುವರಿ ದರ ನಿಗದಿ ಮಾಡಬೇಕು. ಹಿಂದಿನ ವರ್ಷ ನಿಗದಿ ಮಾಡಿ ಆದೇಶ ಹೊರಡಿಸಿದ್ದ ಟನ್ಗೆ 150 ರೂ. ದರವನ್ನು ತಕ್ಷಣವೇ ಕೊಡಿಸಬೇಕು. ರಾಜ್ಯಾದ್ಯಂತ ಎಪಿಎಂಸಿಗಳಲ್ಲಿ ರೈತರ ಉತ್ಪನ್ನಗಳನ್ನು ಖರೀದಿಸಿದ ದಲ್ಲಾಳಿಗಳು, ಶೇಕಡ 10 ಕಮಿಷನ್ ತೆಗೆದುಕೊಳ್ಳುವುದನ್ನ ನಿಲ್ಲಿಸಬೇಕು. ತೂಕದಲ್ಲಿ 5 ರಿಂದ 6 ಕೆಜಿ ಸ್ಯಾಂಪಲ್ ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಶಿವಮೊಗ್ಗ ತರಕಾರಿ ಮಾರುಕಟ್ಟೆಯಲ್ಲಿ ಈ ರೀತಿಯ ಚಟುವಟಿಕೆ ಹೆಚ್ಚು ನಡೆಯುತ್ತಿದೆ ಎಂದು ತಿಳಿಸಿದರು.
ಮೇಲ್ಕಂಡ ಒತ್ತಾಯಗಳ ಬಗ್ಗೆ ಸೆಪ್ಟೆಂಬರ್ 30ರ ಗಡುವಿನ ಒಳಗಾಗಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದೇವೆ ಎಂದರು.
ಇದನ್ನೂ ಓದಿ: ದೊಡ್ಡಬಳ್ಳಾಪುರ - ನೆಲಮಂಗಲ ರಸ್ತೆ ಗುಂಡಿಗಳಿಗೆ ಸಿಕ್ತು ಮುಕ್ತಿ: ನಟ ವಿನೋದ್ ರಾಜ್ ಸಮಾಜಸೇವೆಗೆ ಪ್ರಶಂಸೆ - Vinod Raj social work