ತುಮಕೂರು:ಹಾಲಿನ ದರ ಹೆಚ್ಚಳದಿಂದ ರಾಜ್ಯ ಸರ್ಕಾರಕ್ಕೆ ಮೂರು ಪೈಸೆ ಆದಾಯ ಬರಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಾಲಿನ ದರ ಹೆಚ್ಚಳದಿಂದ ರಾಜ್ಯ ಸರ್ಕಾರಕ್ಕೆ ಲಾಭ ಬರಲ್ಲ. ಲಾಭ ರೈತರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ಸಿಗುತ್ತೆ. ಒಂದು ಬಾಟಲ್ ನೀರಿಗೆ ಕೊಡುವ ದರವನ್ನು ಹಾಲಿಗೆ ಕೊಡಿ ಎಂದರೆ ವಿರೋಧ ಬರ್ತಿದೆ, ಇದು ಬಹಳ ವಿಪರ್ಯಾಸ. ಹಾಲಿನ ದರ ಹೆಚ್ಚಳದ ಲಾಭ ರೈತರ ಖಾತೆಗೆ ಹೋಗುತ್ತದೆ. ಸಂಸ್ಥೆ, ಸರ್ಕಾರಕ್ಕೆ ಲಾಭವಿಲ್ಲ. ರೈತರಿಗೆ ಹಣ ಕೊಡ್ತೀವಿ ಇದನ್ನು ಎಲ್ಲರೂ ಬೆಂಬಲಿಸಬೇಕು ಎಂದರು.
ಇಡೀ ದೇಶದಲ್ಲಿ ನಮ್ಮಷ್ಟು ಕಡಿಮೆ ದರದಲ್ಲಿ ರೈತರಿಂದ ಹಾಲು ಸಂಗ್ರಹ ಮಾಡುವ ರಾಜ್ಯ ಬೇರೆ ಯಾವುದು ಇಲ್ಲ. ಹಾಗೇ ಕಡಿಮೆ ದರದಲ್ಲಿ ಗ್ರಾಹಕರಿಗೆ ಹಾಲು ಕೊಡುತ್ತಿರುವ ರಾಜ್ಯ ಬೇರೆಯಿಲ್ಲ. ಇಡೀ ದೇಶದಲ್ಲಿ ಇಷ್ಟು ಕಡಿಮೆ ಪ್ರಮಾಣದಲ್ಲಿ ಹಾಲು ಮಾರಾಟ ಮಾಡುವ ವ್ಯವಸ್ಥೆ ಎಲ್ಲೂ ಇಲ್ಲ. ಕೆಲವು ರಾಜ್ಯಗಳಲ್ಲಿ ಹಾಲು ಲೀಟರ್ಗೆ 58 ರಿಂದ 60 ರೂಪಾಯಿಯಂತೆ ಮಾರಾಟವಾಗುತ್ತಿದೆ. ಎಲ್ಲಾ ಅಂಕಿ - ಅಂಶಗಳನ್ನ ಮುಖ್ಯಮಂತ್ರಿಗೆ ಕೊಟ್ಟಿದ್ದೇನೆ. ನಮ್ಮ ರಾಜ್ಯದಲ್ಲೂ ಖರೀದಿ ಮಾಡುವುದು ಮಾರಾಟ ಮಾಡುವುದು ಎಲ್ಲವೂ ಒಂದೇ ದರ ಮಾಡೋಣ ಅಂತ ಹೇಳಿದ್ದೇನೆ ಎಂದು ತಿಳಿಸಿದರು.