ಕರ್ನಾಟಕ

karnataka

ETV Bharat / state

ಹಾವೇರಿ: ದರ ನಿಗದಿಪಡಿಸಿ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ರೈತರ ಮನವಿ - SUGARCANE PRICE FIXING ISSUE

ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಬ್ಬಿಗೆ ದರ ನಿಗದಿಪಡಿಸುವಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ.

ಕಬ್ಬಿನ ದರ ನಿಗದಿ ವಿಚಾರ; ಜಿ.ಎಂ. ಶುಗರ್ಸ್​ ಕಾರ್ಖಾನೆ ಮಾಲೀಕರ ವಿರುದ್ಧ ಮೋಸದ ಆರೋಪ
ಕಬ್ಬಿನ ದರ ನಿಗದಿ ವಿಚಾರ (ETV Bharat)

By ETV Bharat Karnataka Team

Published : Nov 27, 2024, 10:58 AM IST

ಹಾವೇರಿ:"ಪ್ರತೀ ವರ್ಷ ರೈತರನ್ನು ಕರೆದು ದರ ನಿಗದಿಪಡಿಸಿ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಲಾಗುತ್ತಿತ್ತು. ಆದರೆ, ಈ ವರ್ಷ ಮಾಲೀಕರು ಯಾವುದೇ ರೀತಿಯ ದರ ನಿಗದಿಪಡಿಸದೇ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಿದ್ದಾರೆ" ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, "ಕಳೆದ ವರ್ಷ ನಡೆದ ಮೌಖಿಕ ಒಪ್ಪಂದದಂತೆ ರೈತರಿಗೆ ಬಾಕಿ ಉಳಿಸಿಕೊಂಡಿರುವ ಲಕ್ಷಾಂತರ ರೂಪಾಯಿ ಪಾವತಿ ಮಾಡಬೇಕೆಂದು ಒತ್ತಾಯಿಸಿ ಜಿಲ್ಲೆಯ ರೈತರು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ್ ದಾನಮ್ಮನವರ ಅವರಿಗೆ ಮನವಿ ಮಾಡಿದ್ದಾರೆ" ಎಂದು ತಿಳಿಸಿದರು.

ದರ ನಿಗದಿಪಡಿಸಿ ಸಕ್ಕರೆ ಕಾರ್ಖಾನೆ ಆರಂಭಿಸುವಂತೆ ರೈತರ ಮನವಿ (ETV Bharat)

"ಕಳೆದ ವರ್ಷ ರೈತರಿಗೆ ಟನ್ ಕಬ್ಬಿಗೆ 3,050 ರೂ. ಹಣ ನಿಗದಿ ಮಾಡುವುದಾಗಿ ಜೆ.ಎಂ.ಶುಗರ್ಸ್​ ಕಾರ್ಖಾನೆ ಆಡಳಿತ ಮಂಡಳಿ ಹೇಳಿತ್ತು. ಆದರೆ, ಟನ್ ಕಬ್ಬಿಗೆ 3,024 ರೂ. ನೀಡಿದೆ. ಕಳೆದ ವರ್ಷ ಒಟ್ಟು 3 ಲಕ್ಷ 6 ಸಾವಿರ ಟನ್ ಕಬ್ಬು ಅರೆಯಲಾಗಿದೆ. ಮೌಖಿಕ ಒಪ್ಪಂದದಂತೆ ಟನ್​ಗೆ 26 ರೂ. ಬಾಕಿಯಂತೆ 3 ಲಕ್ಷ 6 ಸಾವಿರ ಟನ್​ಗೆ ಸುಮಾರು 80 ಲಕ್ಷ ರೂ. ಬಾಕಿ ಇದೆ. ಮಧ್ಯಸ್ಥಿಕೆ ವಹಿಸುವ ಮೂಲಕ ಈ ಮೊತ್ತವನ್ನು ರೈತರ ಖಾತೆಗೆ ಹಾಕುವಂತೆ ಜಿಲ್ಲಾಧಿಕಾರಿಗಳ ಜೊತೆಗೆ ಮಾಲೀಕರ ಬಳಿಯೂ ಮನವಿ ಮಾಡಿಕೊಂಡಿದ್ದೇವೆ".

"ಜಿಲ್ಲಾಧಿಕಾರಿಗಳು ಪ್ರತೀ ಸಾರಿ ಎರಡ್ಮೂರು ಬಾರಿ ರೈತರು ಮತ್ತು ಕಾರ್ಖಾನೆಗಳ ಮಾಲೀಕರ ಸಭೆ ಕರೆಯುತ್ತಿದ್ದರು. ಈ ಬಾರಿ ಈವರೆಗೂ ಸಭೆ ಕರೆದಿಲ್ಲ. ಆದಷ್ಟು ಬೇಗ ಜಿಲ್ಲಾಧಿಕಾರಿಗಳು ರೈತರು ಮತ್ತು ಕಾರ್ಖಾನೆಗಳ ಮಾಲೀಕರನ್ನು ಕರೆದು ಸಭೆ ನಡೆಸುವ ಮೂಲಕ ಕಬ್ಬು ದರ ನಿಗದಿ ಮತ್ತು ಹಳೆಯ ಬಾಕಿ ಕೊಡಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಡಬೇಕು" ಎಂದು ಅವರು ಮನವಿ ಮಾಡಿದರು.

ಇದೇ ವೇಳೆ, "ಟೋಲ್​ಗಳಲ್ಲಿ ಕಬ್ಬಿನ ಗಾಡಿಗಳಿಗೆ ಟೋಲ್​ ವಸೂಲಿ ಮಾಡಬಾರದು ಎಂದು ಡಿಸಿ ಸೂಚನೆ ಇದ್ದರೂ ಅನಾವಶ್ಯಕವಾಗಿ ಕಬ್ಬಿನ ಲಾರಿಗಳು, ಟ್ರ್ಯಾಕ್ಟರ್​ಗಳಿಗೆ ಟೋಲ್​​ ಕಟ್ಟಿಸಿಕೊಳ್ಳಲಾಗುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು" ಎಂದು ಒತ್ತಾಯಿಸಿದರು.

"ಸರ್ಕಾರದ ಆದೇಶದಂತೆ ಜಿಲ್ಲೆಯ ಮೂರು ಸಕ್ಕರೆ ಕಾರ್ಖಾನೆಗಳು ಈಗಾಗಲೇ ಕಬ್ಬು ನುರಿಯಲು ಆರಂಭಿಸಿವೆ. ಟೋಲ್​ಗಳಲ್ಲಿ ಕಬ್ಬಿನ ಗಾಡಿಗಳಿಗೆ ಹೆಚ್ಚಿನ ಟೋಲ್​ ವಸೂಲಿ ಮಾಡಲಾಗುತ್ತದೆ ಎಂದು ರೈತರಿಂದ ದೂರುಗಳು ಬಂದಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ರೈತರಿಗೆ ಅನುಕೂಲ ಮಾಡಿಕೊಡುವಂತೆ ಸೂಚಿಸಲಾಗಿದೆ. ಆದರೂ, ಕೆಲವು ದೂರುಗಳ ಬಂದಿದ್ದು, ಮತ್ತೊಮ್ಮೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳೊಂದಿಗೆ ಮಾತನಾಡುವೆ" ಎಂದು ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ್ ದಾನಮ್ಮನವರ ಹೇಳಿದ್ದಾರೆ.

ರೈತರ ಹಳೆ ಬಾಕಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, "ಕಬ್ಬನ್ನು ಕಾರ್ಖಾನೆಗೆ ತಂದ 15 ದಿನಗಳ ಒಳಗೆ ಬಾಕಿ ಮೊತ್ತವನ್ನು ರೈತರ ಖಾತೆಗೆ ಕಾರ್ಖಾನೆಗಳ ಮಾಲೀಕರು ಜಮಾ ಮಾಡಬೇಕು. ಕಾರ್ಖಾನೆ ಹಾಗೂ ರೈತರ ನಡುವಿನ ಲಿಖಿತ ಒಪ್ಪಂದ ಪಾಲನೆ ಯಾಗದಿದ್ದರಷ್ಟೇ ಕ್ರಮ ಜರುಗಿಸಬಹುದಾಗಿದೆ ಎಂದು ಸರ್ಕಾರ ಹೇಳುತ್ತದೆ. ಆದರೆ, ಕಾರ್ಖಾನೆ ಮಾಲೀಕರು ನೀಡಿರುವ ಮೌಖಿಕ ಭರವಸೆ ಪ್ರಕಾರ ಬಾಕಿ ಕೊಡಿಸಬೇಕು ಎಂಬುದು ಕಬ್ಬು ಬೆಳೆಗಾರರ ಒತ್ತಾಯವಾಗಿದೆ. ಆದರೆ, ಲಿಖಿತ ಒಪ್ಪಂದವಿಲ್ಲದೆ ಮೌಖಿಕ ಮಾತುಕತೆ ಆಧರಿಸಿ ಬಾಕಿ ಪಾವತಿಸುವಂತೆ ಸರ್ಕಾರ ಸೂಚಿಸಲು ಸಾಧ್ಯವಿಲ್ಲ. ಒಂದೊಮ್ಮೆ ಸರ್ಕಾರ ಕ್ರಮ ಕೈಗೊಂಡರೂ ಅದನ್ನು ಕಾರ್ಖಾನೆ ಮಾಲೀಕರು ನ್ಯಾಯಾಲಯದಲ್ಲಿ ಪ್ರಶ್ನಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಜಿಲ್ಲಾಡಳಿತ ಕೂಡಾ ಏನು ಮಾಡಲಾಗದ ಸ್ಥಿತಿಯಲ್ಲಿದೆ. ಆದರೂ ಈ ಕುರಿತು ಕಾರ್ಖಾನೆ ಮಾಲೀಕರ ಜೊತೆ ಮಾತನಾಡುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು.

ಕಬ್ಬು ಬೆಳೆಗಾರ ಸಂಘದ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ ಆರೋಪದಲ್ಲಿ ಯಾವುದೆ ಹುರುಳಿಲ್ಲ ಎಂದು ಜಿ.ಎಂ.ಶುಗರ್ಸ್​ ಎಂಡಿ ಜಿ.ಎಂ. ಲಿಂಗರಾಜ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತಂತೆ ದೂರವಾಣಿಯಲ್ಲಿ ಮಾತನಾಡಿದ ಅವರು, ಕಬ್ಬು ಪೂರೈಸಿದ ರೈತರಿಗೆ ಯಾವುದೇ ಬಾಕಿ ಹಣ ಉಳಿಸಿಕೊಂಡಿಲ್ಲ. ಸರ್ಕಾರ ದರ ನಿಗದಿ ಮಾಡಿದ ಮೇಲಿಯೇ ಈ ವರ್ಷ ಕಬ್ಬು ನುರಿಯಲು ಆರಂಭಿಸಿದ್ದೇವೆ. ಸರ್ಕಾರ ನಿಗದಿಪಡಿಸಿದ ದರದಂತೆ ರೈತರಿಗೆ ಹಣ ನೀಡುತ್ತಿದ್ದೇವೆ. ರೈತರು ಕಾರ್ಖಾನೆಗೆ ಕಬ್ಬು ಪೂರೈಸಿದ ನಂತರ ಹಣ ಪಾವತಿಸುವ ಪ್ರಕ್ರಿಯೆ ನಿರಂತರವಾಗಿರುತ್ತೆ. ಹಣ ಪಾವತಿಯಲ್ಲಿ ಯಾವುದೇ ಬಾಕಿ ಉಳಿದಿಲ್ಲ. ಸಿಸ್ಟಮ್​ಗಳಲ್ಲಿ ಕಬ್ಬು ಪೂರೈಕೆ ದಾಖಲೆಯಾಗುತ್ತದ್ದಂತೆ ಹಣ ಜಮಾ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:ಸಾರ್ವಜನಿಕ ಉದ್ಯಾನವನಗಳಿಗೆ ಸಾಕು ನಾಯಿಗಳನ್ನು ತಂದು ಗಲೀಜು ಮಾಡುವ ಮಾಲೀಕರಿಗೆ ದಂಡ: ಹೈಕೋರ್ಟ್

ABOUT THE AUTHOR

...view details