ಬಂಗಾರದ ಬೆಲೆಗಾಗಿ ಕಪ್ಪು ಅರಿಶಿಣ ಬೆಳೆದ ರೈತರು ಕಂಗಾಲು (ETV Bharat) ದಾವಣಗೆರೆ:ಚನ್ನಗಿರಿ ತಾಲೂಕಿನ ಕಾರಿಗನೂರು ಗ್ರಾಮದ ರೈತರು ಕಪ್ಪು ಅರಿಶಿಣಕ್ಕೆ ಬಂಗಾರದ ಬೆಲೆ ಬರಲಿದೆ ಎಂದು ತಮ್ಮ ಜಮೀನುಗಳಲ್ಲಿ ಅರಿಶಿಣ ಬೆಳೆದಿದ್ದರು. ಇದೀಗ ಫಸಲಿಗೆ ಬಂದಿದ್ದ ಬೆಳೆ ಕಟಾವು ಮಾಡುತ್ತಿದ್ದಂತೆ ಸರಿಯಾದ ಬೆಲೆ ಸಿಗದೆ, ಖರೀದಿ ಮಾಡುವವರೂ ಇಲ್ಲದೇ ರೈತರಿಗೆ ದಿಕ್ಕೇ ತೋಚದಂತಾಗಿದೆ. ಇದರ ಪರಿಣಾಮ, ಹತಾಶರಾಗಿ ಟ್ರ್ಯಾಕ್ಟರ್ ಹರಿಸಿ ಬೆಳೆ ನಾಶಪಡಿಸುತ್ತಿದ್ದಾರೆ.
ಕಾರಿಗನೂರು ಗ್ರಾಮದ ರೈತ ರುದ್ರೇಶ್ ಅವರು ಒಂದು ಎಕರೆ ಜಮೀನಿನಲ್ಲಿ ಕಪ್ಪು ಅರಿಶಿಣ ಬೆಳೆದಿದ್ದರು. ಕೈ ತುಂಬಾ ಲಾಭದ ನಿರೀಕ್ಷೆಯಲ್ಲಿದ್ದರು. ಆದರೆ ಬೆಲೆ ಕುಸಿದು 7ಕ್ಕೂ ಹೆಚ್ಚು ರೈತರು ನಷ್ಟ ಅನುಭವಿಸಿದ್ದಾರೆ.
ರೈತ ರುದ್ರೇಶ್ ಪ್ರತಿಕ್ರಿಯಿಸಿ, ''ಕಂಪನಿಯವರೆಂದು ಹೇಳಿಕೊಂಡು ಬಂದು ಕೆಲವರು ನಮಗೆ ಈ ಕಪ್ಪು ಅರಿಶಿಣಕ್ಕೆ ಬಂಗಾರದ ಬೆಲೆ ಇದೆ, ಬಿತ್ತನೆ ಮಾಡಿ ಎಂದು ನಂಬಿಸಿದರು. ನಾವು ಬೆಳೆ ಬೆಳೆದೆವು. ಒಂದು ಕೆ.ಜಿ. ಬಿತ್ತನೆ ಬೀಜಕ್ಕೆ 80 ರೂ, ಫಸಲು ಬಂದ್ರೆ 200 ರೂ. ಕೆ.ಜಿ.ಯಂತೆ ಖರೀದಿ ಮಾಡುತ್ತೇವೆ ಎಂದಿದ್ದರು. ಹೀಗೆ ಹೇಳೆ ಬಿತ್ತನೆ ಬೀಜ ಕೊಟ್ಟಿದ್ದರು. 4 ಕ್ವಿಂಟಲ್ ಬೀಜ ಖರೀದಿಸಿ ಬಿತ್ತನೆ ಮಾಡಿದ್ವಿ. ಆದ್ರೆ ಫಸಲು ಖರೀದಿ ಮಾಡುತ್ತೇನೆ ಎಂದವರು ಬರಲೇ ಇಲ್ಲ" ಎಂದು ಹೇಳಿದರು.
"ಮಂಗಳೂರು ಮೂಲದ ವ್ಯಕ್ತಿಗೆ ಮೊದಲ ಫಸಲನ್ನು ಕೆ.ಜಿ.ಗೆ 200ರಂತೆ ಮಾರಾಟ ಮಾಡಿದ್ವಿ. ಅವರು 6 ಲಕ್ಷ ರೂಪಾಯಿ ನೀಡಿಲ್ಲ. ಮತ್ತೆ ಎರಡನೇ ಬಾರಿ 6 ಲಕ್ಷ ವ್ಯಯಿಸಿ ಬಿತ್ತನೆ ಮಾಡಿದ್ವಿ. ಈಗ ಬೆಲೆ ಇಲ್ಲ. ನಮಗೆ 12 ಲಕ್ಷ ರೂ ನಷ್ಟವಾಗಿದೆ. ಅಲ್ಲದೇ ಏಳು ಮಂದಿ ರೈತರು 8 ಎಕರೆಯಲ್ಲಿ ಬೆಳೆ ಬೆಳೆದು ನಾಶ ಮಾಡಿದ್ದಾರೆ. ಇದೀಗ ಭತ್ತ ನಾಟಿ ಮಾಡುತ್ತೇವೆ. ರೈತರು ಯಾವುದೇ ಕಾರಣಕ್ಕೂ ಈ ಕಪ್ಪು ಅರಿಶಿಣ ಬೆಳೆಯಬೇಡಿ. ಬಿತ್ತನೆ ಬೀಜ ಕೊಟ್ಟು ಮೋಸ ಮಾಡುವವರಿದ್ದಾರೆ'' ಎಂದರು.
ಇದನ್ನೂ ಓದಿ:ದಾವಣಗೆರೆಯಲ್ಲಿ ಕಾಡು ಹಂದಿಗಳ ಉಪಟಳ; ಮೆಕ್ಕೆಜೋಳ, ಅಡಿಕೆ ಬೆಳೆ ನಾಶ - Pig Menace