ಬೆಂಗಳೂರು:ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಸಮರ ರಂಗೇರಿದ್ದು, ಮಾಜಿ ಮುಖ್ಯಮಂತ್ರಿಗಳಿಬ್ಬರ ಮಕ್ಕಳು 'ರಾಜಕೀಯ ರಂಗಪ್ರವೇಶಕ್ಕೆ' ಅಣಿಯಾಗಿದ್ದಾರೆ.
ಶಿಗ್ಗಾಂವಿ ಕ್ಷೇತ್ರಕ್ಕೆ ಬಿಜೆಪಿಯಿಂದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ, ಚನ್ನಪಟ್ಟಣ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನೂ ಸಂಡೂರು ಕ್ಷೇತ್ರದಿಂದ ಈ ಹಿಂದೆ ಶಾಸಕರಾಗಿ ಈಗ ಸಂಸದರಾಗಿ ಆಯ್ಕೆಯಾದ ಈ.ತುಕಾರಾಮ್ ಪತ್ನಿ ಅನ್ನಪೂರ್ಣ ಮೊದಲ ಬಾರಿ ಸ್ಪರ್ಧಿಸುತ್ತಿದ್ದಾರೆ.
ಮಾಜಿ ಮುಖ್ಯಮಂತ್ರಿಗಳ ಕುಟುಂಬ ಸದಸ್ಯರು ರಾಜಕಾರಣ ಪ್ರವೇಶ ರಾಜ್ಯದಲ್ಲಿ ಹೊಸದೇನಲ್ಲ. ಮಾಜಿ ಮುಖ್ಯಮಂತ್ರಿ ದಿ. ಡಿ.ದೇವರಾಜ ಅರಸು ಅವರಿಂದ ಹಿಡಿದು ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಕುಟುಂಬದ ಕುಡಿಗಳು ರಾಜಕೀಯ ರಂಗಪ್ರವೇಶ ಮಾಡಿ ಸೋಲು - ಗೆಲುವು ಕಂಡಿದ್ದಾರೆ. ಇದೀಗ ಉಪಚುನಾವಣೆಯಲ್ಲಿ ಮಾಜಿ ಸಿಎಂ ಹೆಚ್ಡಿಕೆ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಪುತ್ರ ಭರತ್ ಬೊಮ್ಮಾಯಿ ಅವರು ರಾಜಕೀಯ ಅಸ್ತಿತ್ವಕ್ಕಾಗಿ ಹೋರಾಟ ನಡೆಸಲು ಸಜ್ಜಾಗಿದ್ದಾರೆ.
ಮೂರನೇ ತಲೆಮಾರು:ಹೆಚ್.ಡಿ.ದೇವೇಗೌಡ, ಎಸ್.ಆರ್.ಬೊಮ್ಮಾಯಿ ಸಹ ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ರಾಜ್ಯ ರಾಜಕಾರಣದಲ್ಲಿ ಮಾಜಿ ಮುಖ್ಯಮಂತ್ರಿಗಳ ಕುಟುಂಬ ಸದಸ್ಯರು ಶಾಸಕ, ಸಂಸದರಾದರೂ ಮುಖ್ಯಮಂತ್ರಿ ಆಗುವ ಯೋಗ ಲಭಿಸಿದ್ದು ಹೆಚ್. ಡಿ.ಕುಮಾರಸ್ವಾಮಿ ಹಾಗೂ ಬಸವರಾಜ ಬೊಮ್ಮಾಯಿ ಅವರಿಗೆ ಮಾತ್ರ. ಇದೀಗ ಮೂರನೇ ತಲೆಮಾರಿನ ನಿಖಿಲ್ ಕುಮಾರಸ್ವಾಮಿ ಹಾಗೂ ಭರತ್ ಬೊಮ್ಮಾಯಿ ಚುನಾವಣಾ ಅಖಾಡದಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.
ಮೂರನೇ ಬಾರಿಗೆ ಸ್ಪರ್ಧೆ: ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆ ಮೂಲಕ ನಿಖಿಲ್ ಕುಮಾರಸ್ವಾಮಿ ಮೂರನೇ ಬಾರಿಗೆ ಸ್ಪರ್ಧೆಗಿಳಿದ್ದಾರೆ. 2019 ರಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು. ಆಗ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿತ್ತು. 2023ರ ವಿಧಾನಸಭಾ ಚುನಾವಣೆಯಲ್ಲಿ ರಾಮನಗರ ಕ್ಷೇತದಿಂದ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಈಗ ಮೂರನೇ ಬಾರಿಗೆ ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಯಾಗಿ ಕಣಕ್ಕಿಳಿದಿದ್ದಾರೆ. ಇಂದು ಜೆಡಿಎಸ್ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಉಮೇದುವಾರಿಕೆ ಸಲ್ಲಿಸಲಿದ್ದಾರೆ. ಒಕ್ಕಲಿಗ ಸಮುದಾಯದ ಮತಗಳೇ ನಿರ್ಣಾಯಕವಾಗಿರುವ ಕ್ಷೇತ್ರದಲ್ಲಿ ಈ ಬಾರಿ ನಿಖಿಲ್ ಜಯಭೇರಿ ಬಾರಿಸುತ್ತಾರಾ ಕಾದುನೋಡಬೇಕು.