ಮೈಸೂರು:ಮಹಾನಗರ ಪಾಲಿಕೆ ವ್ಯಾಪ್ತಿಯ ವಾಣಿ ವಿಲಾಸ ನೀರು ಸರಬರಾಜು ಸಂಸ್ಥೆಯ ಹೊರಗುತ್ತಿಗೆ ನೌಕರರು, ಗ್ರಾಹಕರಿಂದ ನೀರಿನ ಬಿಲ್ ವಸೂಲಿ ಮಾಡಿ ಪಾಲಿಕೆ ನಕಲಿ ಬಿಲ್ ನೀಡಿ ಹಣ ಜಮಾ ಮಾಡದೆ 1.25 ಕೋಟಿ ಹಣವನ್ನು ವಂಚನೆ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ 21 ಮಂದಿ ಹೊರಗುತ್ತಿಗೆ ನೌಕರರನ್ನು ಸೇವೆಯಿಂದ ವಜಾ ಮಾಡಿ, ಅವರ ವಿರುದ್ಧ ದೂರು ದಾಖಲಿಸಲಾಗಿದೆ.
ಗ್ರಾಹಕರಿಂದ ನೀರಿನ ಬಿಲ್ಲಿನ ಮೊತ್ತವನ್ನು ಪಡೆದು, ಪಾಲಿಕೆಯ ಖಾತೆಗೆ ಜಮಾ ಮಾಡದೆ ಅನಧಿಕೃತವಾಗಿ ಮ್ಯಾನುವಲ್ ಬಿಲ್ ನೀಡಿ ವಂಚನೆ ಮಾಡುತ್ತಿದ್ದ, 6 ಮಂದಿ ಟೈಂ ಸ್ಕೇಲ್ ನೌಕರರು ಮತ್ತು 15 ಮಂದಿ ಹೊರಗುತ್ತಿಗೆ ಸಿಬ್ಬಂದಿಯನ್ನು ಪಾಲಿಕೆಯ ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಪ್ ಸೇವೆಯಿಂದ ವಜಾಗೊಳಿಸಿದ್ದಾರೆ.
"ಸಾರ್ವಜನಿಕರಿಂದ ಸಂಗ್ರಹಿಸಿದ ಕುಡಿಯುವ ನೀರಿನ ಬಿಲ್ ಹಣವನ್ನು ಪಾಲಿಕೆಯ ಖಾತೆಗೆ ಜಮಾ ಮಾಡದೇ ವಂಚಸಿರುವುದಲ್ಲದೇ, ಸಾಫ್ಟ್‌ವೇರ್ ಮಾಡ್ಯೂಲ್ ಬಳಸಿ ನಕಲಿ ರಶೀದಿ ಸೃಷ್ಟಿ ಮಾಡಿ ಗ್ರಾಹಕರಿಗೆ ನೀಡುತ್ತಿದ್ದರು. ಇದರಿಂದ ಪಾಲಿಕೆ ಬೊಕ್ಕಸಕ್ಕೆ ಸಮಾರು 1.25 ಕೋಟಿ ಹಣ ನಷ್ಟವಾಗಿದೆ. 2024ರ ಅಕ್ಟೋಬರ್‌ನಲ್ಲಿ ನೀರಿನ ಬಿಲ್ ಬಾಕಿ ವಸೂಲಿ ಸಂಬಂಧಿಸಿದಂತೆ ನಡೆದ ಪ್ರಗತಿ ಪರಿಶೀಲನೆ ವೇಳೆ ಈ ಅಕ್ರಮ ಬೆಳಕಿಗೆ ಬಂದಿದೆ. ಈ ಬಗ್ಗೆ ತನಿಖೆ ನಡೆಸಲು ಪಾಲಿಕೆಯ ಅಧೀಕ್ಷಕ ಎಂಜಿನಿಯರ್ ಕೆ. ಸಿಂಧು ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ. ಮೇಲ್ನೋಟಕ್ಕೆ 1.25 ಕೋಟಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದ್ದು, ಇದರಲ್ಲಿ ವಂಚಿತರಿಂದ 99 ಲಕ್ಷ ಹಣವನ್ನು ವಸೂಲಿ ಮಾಡಲಾಗಿದೆ" ಎಂದು ಆಯುಕ್ತ ಅಶಾದ್ ಉರ್ ರೆಹಮಾನ್ ಷರೀಪ್ ಮಾಹಿತಿ ನೀಡಿದರು.