ಮಂಗಳೂರು:ನಗರದ ಅಡ್ಯಾರ್ನಲ್ಲಿರುವ ಬೊಂಡ ಫ್ಯಾಕ್ಟರಿಯ ಎಳನೀರು ಸೇವಿಸಿ ಇದುವರೆಗೆ 137 ಮಂದಿ ಅಸ್ವಸ್ಥರಾಗಿರುವ ಹಿನ್ನೆಲೆಯಲ್ಲಿ ಮುಂದಿನ ಆದೇಶದವರೆಗೆ ಎಳನೀರು ಮತ್ತು ಇತರ ಆಹಾರೋತ್ಪನ್ನಗಳನ್ನು ಮಾರಾಟ ಮಾಡದಂತೆ ನೋಟಿಸ್ ಜಾರಿಗೊಳಿಸಿ, ಬಂದ್ ಮಾಡಲಾಗಿದೆ.
ಸೋಮವಾರ ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಸೇವಿಸಿ 137 ಮಂದಿ ಅಸ್ವಸ್ಥರಾಗಿದ್ದಾರೆ. ಹೊರ ರೋಗಿಗಳಾಗಿ 84 ಮಂದಿ ಹಾಗೂ ಒಳರೋಗಿಗಳಾಗಿ 53 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದುವರೆಗೆ 23 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಲ್ಲಿರುವ ಎಲ್ಲರ ಆರೋಗ್ಯವು ಸ್ಥಿರವಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಗುರುವಾರ ಆಹಾರ ಸುರಕ್ಷತೆಯ ಜಿಲ್ಲಾ ಅಂಕಿತ ಅಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಹಾಗೂ ತಂಡ ಮತ್ತೆ ಬೊಂಡ ಫ್ಯಾಕ್ಟರಿಗೆ ತೆರಳಿ ಸ್ಥಳ ಪರಿಶೀಲನೆ ನಡೆಸಿದೆ. ಸಂಸ್ಥೆಯ ಮುಖ್ಯಸ್ಥರೊಂದಿಗೆ ಚರ್ಚಿಸಿ ತಾತ್ಕಾಲಿಕವಾಗಿ ಹಾಗೂ ಮುಂದಿನ ಆದೇಶದವರೆಗೆ ಎಳನೀರು ಮತ್ತು ಇತರೆ ಆಹಾರೋತ್ಪಗಳನ್ನು ಮಾರಾಟ ಮಾಡದಂತೆ ನೋಟಿಸ್ ಜಾರಿಗೊಳಿಸಿದೆ. ಅಲ್ಲದೇ, ಸದ್ಯ ಫ್ಯಾಕ್ಟರಿ ಬಂದ್ ಮಾಡಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಫ್ಯಾಕ್ಟರಿಯ ಎಳನೀರು ಸೇವಿಸಿದ ಬಳಿಕ ಹಲವರು ಅಸ್ವಸ್ಥರಾದ ಘಟನೆ ನಡೆದಿತ್ತು. ಅಡ್ಯಾರ್ನಲ್ಲಿರುವ ಲ್ಯಾಂಡ್ಸ್ ಫ್ಲೆವರ್ ಸಂಸ್ಥೆಯ ಬೊಂಡ ಫ್ಯಾಕ್ಟರಿ ಎಂಬ ಎಳನೀರು ಮತ್ತು ನ್ಯಾಚುರಲ್ ಐಸ್ ಕ್ರೀಮ್ ಮಾರಾಟ ಮಾಡುವ ಸಂಸ್ಥೆಯಿಂದ ಅಡ್ಯಾರ್ ಕಣ್ಣೂರು ಮತ್ತು ತುಂಬೆ ಸುತ್ತಮುತ್ತಲಿನ ನಿವಾಸಿಗಳು ಲೀಟರ್ ಲೆಕ್ಕದಲ್ಲಿ ಎಳನೀರು ಖರೀದಿಸಿದ್ದರು. ಮಂಗಳವಾರ ಬೆಳಗ್ಗೆಯಿಂದ ಜನರು ವಾಂತಿ ಮತ್ತು ಭೇದಿಯಿಂದ ಬಳಲಿದ್ದರು.
ಇದನ್ನೂ ಓದಿ: ಫ್ಯಾಕ್ಟರಿ ನೀಡಿದ ಎಳನೀರು ಸೇವಿಸಿದ ಬಳಿಕ ಹಲವರು ಅಸ್ವಸ್ಥ: ಆಸ್ಪತ್ರೆಗೆ ದಾಖಲು