ಬೆಂಗಳೂರು: ಮೋದಿ 3.0 ಸರ್ಕಾರದಲ್ಲಿ ಜಲ ಶಕ್ತಿ ಹಾಗೂ ರೈಲ್ವೆ ಇಲಾಖೆ ರಾಜ್ಯ ಖಾತೆ ಸಚಿವರಾಗಿರುವ ವಿ.ಸೋಮಣ್ಣ ಮೇಲೆ ರಾಜ್ಯದ ಜನತೆ ಹೆಚ್ಚಿನ ನಿರೀಕ್ಷೆ ಇರಿಸಿಕೊಂಡಿದ್ದಾರೆ. ಮೇಕೆದಾಟು ಸೇರಿದಂತೆ ಅಂತಾರಾಜ್ಯ ಜಲ ವ್ಯಾಜ್ಯಗಳ ಪರಿಹಾರ, ನೀರಾವರಿ ಯೋಜನೆಗಳಿಗೆ ಅಗತ್ಯ ಅನುಮತಿ ಮತ್ತು ಅನುದಾನ ಕೊಡಿಸುವುದು, ರಾಜ್ಯದ ರೈಲ್ವೆ ಯೋಜನೆಗಳಿಗೆ ವೇಗ ನೀಡುವುದು ಸೇರಿದಂತೆ ಎರಡೂ ಇಲಾಖೆಯಡಿ ಬಾಕಿ ಇರುವ ಕಾಮಗಾರಿಗಳ ಪೂರ್ಣಗೊಳಿಸಲು ಶ್ರಮಿಸಲಿದ್ದಾರೆ ಎಂದು ಜನತೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ.
ರಾಜ್ಯ ಸರ್ಕಾರದಲ್ಲಿ ವಿವಿಧ ಖಾತೆಗಳ ನಿರ್ವಹಿಸಿ ಅಪಾರ ಅನುಭವ ಹೊಂದಿರುವ ಸೋಮಣ್ಣ ಪಾದರಸದಂತೆ ಸದಾ ಚಟುವಟಿಕೆಯಿಂದ ಇರುವ ರಾಜಕಾರಣಿ. ತಮಗೆ ಸಿಕ್ಕ ಅವಕಾಶದಲ್ಲಿ ಸಾಕಷ್ಟು ಕೆಲಸ ಮಾಡಬೇಕೆನ್ನುವ ಮಹತ್ವಾಕಾಂಕ್ಷೆ ಹೊಂದಿರುವ ನಾಯಕ. ಈಗ ಕೇಂದ್ರ ಸಂಪುಟದಲ್ಲಿ ಎರಡು ಮಹತ್ವದ ಖಾತೆಗಳ ಜವಾಬ್ದಾರಿ ಸಿಕ್ಕಿದೆ. ಸಂಪುಟ ದರ್ಜೆಯಲ್ಲದೇ ಇದ್ದರೂ ರಾಜ್ಯ ಖಾತೆಯಲ್ಲಿಯೂ ಇರುವ ಮಿತಿಯಲ್ಲಿ ರಾಜ್ಯಕ್ಕೆ ಹೆಚ್ಚಿನ ನೆರವು ಕಲ್ಪಿಸಲಿದ್ದಾರೆ ಎನ್ನುವ ನಿರೀಕ್ಷೆ ಜನತೆಯಲ್ಲಿದೆ.
ನೀರಾವರಿ ಯೋಜನೆಗಳಿಗೆ ಸಿಗುವುದೇ ವೇಗ?:ಮೊದಲಿಗೆ ಕಾವೇರಿ ಕಣಿವೆಯ ಮಹತ್ವಾಕಾಂಕ್ಷಿ ಯೋಜನೆಯಾದ ಮೇಕೆದಾಟು ಸಮತೋಲನ ಜಲಾಶಯ ಹಾಗೂ ಕುಡಿಯುವ ನೀರಿನ ಯೋಜನೆಯ ಅನುಷ್ಠಾನಕ್ಕೆ ತಮಿಳುನಾಡಿನ ವಿರೋಧ ಮೀರಿ ಕೇಂದ್ರದಿಂದ ಅಗತ್ಯ ಒಪ್ಪಿಗೆ ಕೊಡಿಸುವ ಬಹು ದೊಡ್ಡ ಜವಾಬ್ದಾರಿ ಸಚಿವ ಸೋಮಣ್ಣ ಮೇಲಿದೆ. ಮೇಕೆದಾಟು ಯೋಜನೆಯು ರಾಮನಗರ ಜಿಲ್ಲೆಯ ಕನಕಪುರ ಬಳಿ ಸಮತೋಲನ ಜಲಾಶಯದ ನಿರ್ಮಾಣವನ್ನು ಒಳಗೊಂಡ ಬಹುಪಯೋಗಿ ಯೋಜನೆಯಾಗಿದೆ. ಇದು ಪೂರ್ಣಗೊಂಡ ನಂತರ, ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ಉದ್ದೇಶಕ್ಕಾಗಿ 4 ಟಿಎಂಸಿ ನೀರನ್ನು ಪೂರೈಸುವ ನಿರೀಕ್ಷೆಯಿದೆ. ಬೆಂಗಳೂರಿನ ನೀರಿನ ಬವಣೆ ತೀರಲು ಈ ಯೋಜನೆ ಅನಿವಾರ್ಯವಾಗಿದೆ.
ಉತ್ತರ ಕರ್ನಾಟಕದ ಪ್ರಮುಖ ಯೋಜನೆಯಾಗಿರುವ ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-3 ಯೋಜನೆಯಡಿಯ ಉಪ ಯೋಜನೆಗಳನ್ನು ಪೂರ್ಣಗೊಳಿಸಲು ಹಾಗೂ ಇದರಡಿ ಭೂಸ್ವಾಧೀನ ಮತ್ತು ಪುನರ್ ವಸತಿ ಹಾಗೂ ಪುನರ್ ನಿರ್ಮಾಣಕ್ಕೆ ಆದ್ಯತೆ ನೀಡಬೇಕಾಗಿದ್ದು, ಕೇಂದ್ರದಿಂದ ಅಗತ್ಯ ಅನುದಾನ ಮಂಜೂರು ಮಾಡಿಸಿಕೊಡಬೇಕಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಆಂಧ್ರ ಹಾಗೂ ತೆಲಂಗಾಣ ಅಡ್ಡಿಪಡಿಸಿದೆ. ಇದರಿಂದ ಯೋಜನೆ ಜಾರಿ ವಿಳಂಬವಾಗಿದೆ.
ಭದ್ರಾ ಮೇಲ್ದಂಡೆ ಯೋಜನೆಯ ಅನುಷ್ಠಾನಕ್ಕಾಗಿ ಕೇಂದ್ರ ಸರ್ಕಾರವು ತನ್ನ 2023-24ನೇ ಸಾಲಿನ ಆಯವ್ಯಯದಲ್ಲಿ 5,300 ಕೋಟಿ ರೂ. ಅನುದಾನ ಘೋಷಿಸಿತ್ತು. ಆದರೆ ಈವರೆಗೆ ಯಾವುದೇ ಅನುದಾನ ಬಿಡುಗಡೆಯಾಗಿರುವುದಿಲ್ಲ. ಆ ಅನುದಾನವನ್ನು ಬಿಡುಗಡೆ ಮಾಡಿ ಯೋಜನೆಯನ್ನು ರೈತರಿಗೆ ತಲುಪಿಸಲು ಸಹಕಾರಿಯಾಗುವಂತೆ ಮಾಡುವಲ್ಲಿ ಸೋಮಣ್ಣ ಸಹಕಾರ ನೀಡಲಿದ್ದಾರೆ ಎನ್ನುವ ಆಶಾಭಾವನೆ ಇದೆ.
ಮಹದಾಯಿ ಯೋಜನೆಯಡಿ ಕಳಸಾ ಮತ್ತು ಬಂಡೂರಾ ನಾಲಾ ತಿರುವು ಯೋಜನೆಗಳಡಿ 3.9 ಟಿಎಂಸಿ ನೀರಿನ ಬಳಕೆಗಾಗಿ ವಿವರವಾದ ಯೋಜನಾ ವರದಿಗಳಿಗೆ ಕೇಂದ್ರ ಜಲ ಆಯೋಗದ ತೀರುವಳಿ ದೊರಕಿದ್ದು, ಪ್ರಸ್ತುತ ರಾಷ್ಟ್ರೀಯ ವನ್ಯಜೀವಿ ಮಂಡಳಿಯಿಂದ ಅರಣ್ಯ ತೀರುವಳಿ ನಿರೀಕ್ಷಿಸಿ ರಾಜ್ಯ ಸರ್ಕಾರವು ಟೆಂಡರ್ ಪ್ರಕ್ರಿಯೆ ಚಾಲನೆಗೊಳಿಸಿದೆ. ಈ ಯೋಜನೆಗೆ ಗೋವಾ ರಾಜ್ಯದ ವಿರೋಧವಿದ್ದು, ರಾಜ್ಯದ ಪಾಲಿನ ನೀರು ಬಳಕೆಗೆ ಅನುಮತಿ ಕೊಡಿಸುವ ಹೊಣೆ ಸೋಮಣ್ಣ ಮೇಲಿದೆ.
2018ರಲ್ಲಿ, ಜಲ ವಿವಾದಗಳ ನ್ಯಾಯಾಧಿಕರಣ ಮಹದಾಯಿ ನದಿ ಜಲಾನಯನ ಪ್ರದೇಶದಿಂದ ಕರ್ನಾಟಕಕ್ಕೆ 13.42 ಟಿಎಂಸಿ (1000 ಮಿಲಿಯನ್ ಘನ ಅಡಿ) ನೀರು, ಮಹಾರಾಷ್ಟ್ರಕ್ಕೆ 1.33 ಟಿಎಂಸಿ ಮತ್ತು ಗೋವಾಕ್ಕೆ 24 ಟಿಎಂಸಿ ನೀರನ್ನು ನೀಡಿದೆ. ಕರ್ನಾಟಕದ 13.42 ಟಿಎಂಸಿ ಹಂಚಿಕೆಯಿಂದ, 5.5 ಟಿಎಂಸಿ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ಗೊತ್ತುಪಡಿಸಿದರೆ, ಉಳಿದವು ಜಲ-ವಿದ್ಯುತ್ ಉತ್ಪಾದನೆಗೆ ಉದ್ದೇಶಿಸಲಾಗಿದೆ. ಕುಡಿಯುವ ನೀರಿಗೆ ಮೀಸಲಿಟ್ಟ 5.5 ಟಿಎಂಸಿಯಲ್ಲಿ 3.8 ಟಿಎಂಸಿ ನೀರನ್ನು ಕಳಸಾ ಮತ್ತು ಬಂಡೂರಿ ನಾಲೆಗಳ ಮೂಲಕ ಮಲಪ್ರಭಾ ಜಲಾನಯನ ಪ್ರದೇಶಕ್ಕೆ ಹರಿಸಬೇಕಿದೆ. ನೆನೆಗುದಿಗೆಗೆ ಬಿದ್ದಿರುವ ಯೋಜನೆಗಳು ಜಾರಿಯಾಗಬೇಕಿದೆ.
ತುಂಗಭದ್ರಾ ಜಲಾಶಯದಲ್ಲಿ ಹೂಳು ಸಂಗ್ರಹಣೆಯಿಂದ ಉಂಟಾಗಿರುವ ನೀರು ಸಂಗ್ರಹಣೆ ಸಾಮರ್ಥ್ಯದ ಕೊರತೆ ನಿವಾರಿಸಲು ಕೊಪ್ಪಳ ಜಿಲ್ಲೆಯ ನವಲಿ ಬಳಿ ಸಮತೋಲನಾ ಜಲಾಶಯ ನಿರ್ಮಾಣ ಸಂಬಂಧ ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳೊಂದಿಗೆ ಸಮಾಲೋಚನೆ ಪ್ರಕ್ರಿಯೆ ನಡೆದಿದ್ದು, ಯೋಜನೆ ಕಾರ್ಯಗತಗೊಳಿಸಲು ಆದ್ಯತೆ ನೀಡಬೇಕಿದೆ. ಅಂತಾರಾಜ್ಯ ವಿಷಯವಾದ್ದರಿಂದ ಸೋಮಣ್ಣ ಮಧ್ಯಪ್ರವೇಶ ಮಾಡಿ ಸಮತೋಲನಾ ಜಲಾಶಯ ನಿರ್ಮಾಣಕ್ಕೆ ನಿರಾಕ್ಷೇಪಣೆಯನ್ನು ನೆರೆ ರಾಜ್ಯಗಳಿಂದ ಕೊಡಿಸುವ ಮಹತ್ವದ ಜವಾಬ್ದಾರಿಯೂ ಇದೆ.
ರೈಲ್ವೆ ಯೋಜನೆಗಳು:ರಾಜ್ಯದಲ್ಲಿ ಸುಮಾರು 10 ಸಾವಿರ ಕೋಟಿ ರೂ. ಮೊತ್ತದಲ್ಲಿ 9 ಹೊಸ ರೈಲು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೆಲವು ಯೋಜನೆಗಳ ಕಾಮಗಾರಿ ನಿಂತಿದ್ದು, ಭೂ ಸ್ವಾಧೀನ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವಿನ ಸಂವಹನ ಕೊರತೆಯಿಂದ ಈ ಸಮಸ್ಯೆ ಎದುರಾಗಿದೆ. ಇದೇ ಕಾರಣದಿಂದ ರಾಜ್ಯದ ಐದು ಯೋಜನೆಗಳು 10 ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಈಗ ಕೇಂದ್ರ ಸಚಿವರಾಗಿರುವ ಸೋಮಣ್ಣ ರಾಜ್ಯದ ರೈಲ್ವೆ ಯೋಜನೆಗಳಿಗೆ ಕೇಂದ್ರದ ಪಾಲಿನ ಹಣ ಬಿಡುಗಡೆ ಮಾಡಿಸಿ ರಾಜ್ಯದ ಯೋಜನೆಗಳಿಗೆ ವೇಗ ನೀಡುವರೇ ಕಾದು ನೋಡಬೇಕಿದೆ.
ಬಾಗಲಕೋಟೆ – ಕುಡಚಿ ಮಾರ್ಗ ನಿರ್ಮಾಣ, ಮಲೆನಾಡು ಭಾಗದ ಜನರಿಗೆ ಹೆಚ್ಚು ಅನುಕೂಲ ಕಲ್ಪಿಸುವ ಕಡೂರು – ಚಿಕ್ಕಮಗಳೂರು – ಸಕಲೇಶಪುರ ಬ್ರಾಡ್‌ಗೇಜ್ ರೈಲು ಮಾರ್ಗ ಕಾಮಗಾರಿ ಮುಕ್ತಾಯಗೊಳಿಸಲು ಕ್ರಮ ವಹಿಸಬೇಕಿದೆ. 213 ಕಿ.ಮೀ. ಉದ್ದದ ರಾಯದುರ್ಗ–ಕಲ್ಯಾಣದುರ್ಗ– ತುಮಕೂರು ರೈಲು ಮಾರ್ಗ ನಿರ್ಮಾಣಕ್ಕೆ ವೇಗ ನೀಡುವುದು, ಮುನಿರಾಬಾದ್-ಮೆಹಬೂಬ್ನಗರ, ತುಮಕೂರು-ರಾಯದುರ್ಗ, ಚಿಕ್ಕಮಗಳೂರು -ಬೇಲೂರು, ಕುಡಚಿ-ಬಾಗಲಕೋಟೆ, ಗದಗ-ವಾಡಿ, ತುಮಕೂರು-ದಾವಣಗೆರೆ, ಬೇಲೂರು-ಹಾಸನ, ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹಾಗೂ ಧಾರವಾಡ- ಕಿತ್ತೂರು- ಬೆಳಗಾವಿ ಮಾರ್ಗಗಳ ವಿಚಾರದಲ್ಲಿ ಕೇಂದ್ರದಿಂದ ಅಗತ್ಯ ಅನುದಾನ ಬಿಡುಗಡೆಗೊಳಿಸಿ ರಾಜ್ಯದ ರೈಲ್ವೆ ಯೋಜನೆಗಳಿಗೆ ಆದ್ಯತೆ ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಸೋಮಣ್ಣ ಅವರಿಗೆ ಜಲಶಕ್ತಿ ಹಾಗೂ ರೈಲ್ವೆ ಇಲಾಖೆಯ ರಾಜ್ಯ ಖಾತೆ ಸಿಕ್ಕಿದ್ದು, ರಾಜ್ಯದ ನೀರಾವರಿ ಯೋಜನೆಗಳು ಹಾಗೂ ರೈಲ್ವೆ ಯೋಜನೆಗಳಿಗೆ ವೇಗ ಸಿಗುವ ನಿರೀಕ್ಷೆ ಇದೆ. ಸೋಮಣ್ಣ ಅವರಿಂದ ರಾಜ್ಯ ಹೆಚ್ಚಿನ ಯೋಜನೆಗಳ ನಿರೀಕ್ಷೆ ಮಾಡಬಹುದಾಗಿದೆ ಎಂದು ಬಿಜೆಪಿ ಮಾಜಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಗ್ಯಾರಂಟಿ ಯೋಜನೆಗಳೂ ಮುಂದುವರೆಯುತ್ತವೆ, ರಾಜ್ಯದ ಆರ್ಥಿಕತೆಯೂ ಸುಭದ್ರವಾಗಿರುತ್ತದೆ: ಸಿದ್ದರಾಮಯ್ಯ - CM Siddaramaiah