ಕರ್ನಾಟಕ

karnataka

By ETV Bharat Karnataka Team

Published : 5 hours ago

ETV Bharat / state

ಗೋಡ್ಸೆಯಂಥ ಖಳನಾಯಕರನ್ನು ಪೂಜಿಸುವ ದುಷ್ಟ ಶಕ್ತಿಗಳನ್ನು ಸೋಲಿಸಿ; ಸಿದ್ದರಾಮಯ್ಯ - Gandhi Jayanti

ನಾವು ಗಾಂಧಿ ಭಾರತವನ್ನು ಇನ್ನಷ್ಟು ಬಲಿಷ್ಠಗೊಳಿಸುವ ಮೂಲಕ ಗೋಡ್ಸೆ ಭಾರತವನ್ನು ನಿರ್ಮಿಸಲು ಹೊರಟಿರುವವರನ್ನು ಸೋಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

GANDHI JAYANTI
ಮುಖ್ಯಮಂತ್ರಿ ಸಿದ್ದರಾಮಯ್ಯ (ETV Bharat)

ಬೆಂಗಳೂರು: ಗೋಡ್ಸೆಗಳನ್ನು ನಾವು ಸಹಿಸಬಾರದು. ಗಾಂಧಿ ಬಗ್ಗೆ ಸುಳ್ಳು ಪ್ರಚಾರ ಮಾಡಿ ಗೋಡ್ಸೆಯಂಥ ಖಳನಾಯಕರನ್ನು ಪೂಜಿಸುವ ದುಷ್ಟ ಶಕ್ತಿಗಳನ್ನು ನಾವು ಸೋಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ವಾರ್ತಾ ಮತ್ತು ಸಾರ್ವಜನಿಕ‌ ಸಂಪರ್ಕ‌ ಇಲಾಖೆ ಗಾಂಧಿ ಜಯಂತಿ ನಿಮಿತ್ತ ಬುಧವಾರ ವಾರ್ತಾ ಸೌಧದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ, ಟೀಯೆಸ್ಸಾರ್, ಮೊಹರೆ ಹಣಮಂತರಾಯ ಪತ್ರಿಕೋದ್ಯಮ ಪ್ರಶಸ್ತಿ ಹಾಗೂ ರಾಜ್ಯ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆ ವಿಜೇತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದರು.

ಮಹಾತ್ಮಾ ಗಾಂಧಿಯವರನ್ನು ದೈಹಿಕವಾಗಿ ಕೊಲ್ಲಬಹುದು. ಆದರೆ, ಅವರ ವಿಚಾರಗಳನ್ನು ಕೊಲ್ಲಲು ಸಾಧ್ಯವಿಲ್ಲ. ನಾವು ಗೋಡ್ಸೆ ಭಾರತವನ್ನು ನಿರ್ಮಿಸಲು ಹೊರಟಿರುವವರನ್ನು ಸೋಲಿಸಬೇಕು. ನಾವು ಗಾಂಧಿ ಭಾರತವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು ಎಂದು ತಿಳಿಸಿದರು.

ತಾನು ಮೊದಲಬಾರಿ ಮುಖ್ಯಮಂತ್ರಿಯಾದ ನಂತರ 2014 ರಲ್ಲಿ ಮಹಾತ್ಮಗಾಂಧಿ ಸೇವಾ ಪ್ರಶಸ್ತಿ ಆರಂಭಿಸಿದೆ. ಗಾಂಧಿ ತತ್ವಗಳನ್ನು ಅನುಸರಿಸುತ್ತಾ, ವಿದ್ಯಾರ್ಥಿಗಳಿಗೆ ಮಾನವೀಯ ಮೌಲ್ಯ ಕಲಿಸುತ್ತಿರುವ ಅತ್ಯಂತ ಅರ್ಹರು ಈ ಬಾರಿಯ ಗಾಂಧಿ ಸೇವಾ ಪ್ರಶಸ್ತಿ ಪಡೆದಿದ್ದಾರೆ ಎಂದು ಶ್ಲಾಘಿಸಿದರು.

ಈಗ ಪತ್ರಿಕೋದ್ಯಮಕ್ಕೆ ಗೌರವ, ಘನತೆ ಇದೆಯಾ?:ಗಂಡ - ಹೆಂಡತಿ ಜಗಳವನ್ನೇ ಇಡೀ ದಿನ ತೋರಿಸಿದರೆ ಅದು ನೈತಿಕ ಪತ್ರಿಕೋದ್ಯಮನಾ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ಇದೀಗ ಊಹಾ ಪತ್ರಿಕೋದ್ಯಮದ ಪಿಡುಗು ಹೆಚ್ಚಾಗಿದೆ. ಈ ಊಹಾ ಪತ್ರಿಕೋದ್ಯಮ ಸಮಾಜಕ್ಕೆ ಬೇಕಾ ಎಂದು ಪ್ರಶ್ನಿಸಿದರು.

ಅವರು ಹಿಂಗೆ ಹೇಳಿದ್ರು, ನೀವೇನು ಹೇಳ್ತೀರಾ? ಅಂತ ಮುಖಕ್ಕೆ ಮೈ ಹಿಡಿಯೋದೇ ಇವತ್ತಿನ ಪತ್ರಿಕೋದ್ಯಮ ಆಗಿದೆ. ಇದು ಯಾವ ರೀತಿ ಪತ್ರಿಕೋದ್ಯಮ‌ ನನಗಂತೂ ಅರ್ಥ ಆಗ್ತಾ ಇಲ್ಲ. ಹಿಂದೆಲ್ಲಾ ಪತ್ರಕರ್ತರಿಗೆ ತುಂಬಾ ಘನತೆ ಗೌರವ ಇತ್ತು. ಈಗ ಇದೆಯಾ ಗೊತ್ತಿಲ್ಲ. ಈ ಬಗ್ಗೆ ವಿಶ್ಲೇಷಣೆ ಮಾಡಿದರೆ ಅದನ್ನೇ ದೊಡ್ಡ ವಿವಾದ ಮಾಡಿ ಬಿಡ್ತಾರೆ. ಹೀಗಾಗಿ ಈ ಊಹಾ ಪತ್ರಿಕೋದ್ಯಮದ ಬಗ್ಗೆ ಹೆಚ್ಚೇನೂ ಹೇಳುವುದಿಲ್ಲ ಎಂದರು.

ಮಾಧ್ಯಮಧ್ವನಿ ಇಲ್ಲದವರಿಗೆ ಧ್ವನಿಯಾಗಬೇಕು.‌ ಕಟ್ಟ ಕಡೆಯ ಮನುಷ್ಯನಿಗೆ ನೆರವಾಗಬೇಕು. ಫೇಕ್ ನ್ಯೂಸ್​ನಿಂದ ಸಮಾಜದಲ್ಲಿ ಬದಲಾವಣೆ ಅಸಾಧ್ಯ. ಅಂತಹ ಸುದ್ದಿ ಮಾಡುವವರ ವಿರುದ್ದವಾಗಿ ಇರಬೇಕು. ವ್ಯವಸ್ಥೆಯ ದೋಷಗಳನ್ನು ತಿಳಿಸುವ ಪತ್ರಿಕೋದ್ಯಮ ಅದಕ್ಕೆ ಪರಿಹಾರ ಸೂಚನೆ ಮಾಡದಿದ್ದಲ್ಲಿ ಸಮಾಜದಲ್ಲಿ ಬದಲಾವಣೆ ಹೇಗೆ ಸಾಧ್ಯ ಎಂಬ ಪ್ರಶ್ನೆ ಬರಲಿದೆ. ಟೀಯೆಸ್ಸಾರ್ ಮತ್ತು ಮೊಹರೆ ಹಣಮಂತರಾಯ ಪ್ರಶಸ್ತಿ ಪುರಸ್ಕೃತರು ಇಂದಿನ ಪತ್ರಕರ್ತರಿಗೆ ಮಾದರಿ ಆಗಬೇಕು ಎಂದು ಆಶಿಸಿದರು.

ಶಿಕ್ಷಣ ಪಡೆದವರಿಗೆಲ್ಲಾ ಮಾನವಿಯತೆ ಇರುವುದಿಲ್ಲ:ಶಿಕ್ಷಣ ಪಡೆದವರೆಲ್ಲಾ ಮಾನವೀಯತೆ ಇರುವವರು ಎಂದು ಹೇಳಲಾಗುವುದಿಲ್ಲ. ಶಿಕ್ಷಣ ಮನುಷ್ಯರನ್ನು ಮಾನವೀಯಗೊಳಿಸಬೇಕು. ಇಲ್ಲದಿದ್ದರೆ ಅಂತಹ ಶಿಕ್ಷಣಕ್ಕೆ ಮೌಲ್ಯ ಇರುವುದಿಲ್ಲ. ಶಿಕ್ಷಣ ಪಡೆದವರು ಸಮಾಜದ ಆಸ್ತಿ ಆಗಬೇಕು. ಸಮಾಜದ ವಿರೋಧಿ ಆಗಬಾರದು. ಆದರೆ, ಪ್ರಸ್ತುತ ಅಲ್ಪ ಮಾನವರೇ ಹೆಚ್ಚಾಗುತ್ತಿದ್ದಾರೆ. ಎಲ್ಲರಿಗೂ ವೈಜ್ಞಾನಿಕ ವೈಚಾರಿಕ ಜನ ಪರ ಕಾಳಜಿ ಶಿಕ್ಷಣ ಸಿಗಬೇಕು. ಸಿಕ್ಕಲ್ಲಿ ಮಾತ್ರ ಮನುಷ್ಯರಾಗಲು ಸಾಧ್ಯ. ಸಮಾಜದಲ್ಲಿ ಕಂದಾದಾಚಾರ ಬಿತ್ತಲಾಗುತ್ತಿದ್ದು, ಇದು ಬದಲಾಗಬೇಕು. ಸಮಾಜದ ಬದಲಾವಣೆಗಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟ ಗಾಂಧೀಜಿ ಅವರ ಬದುಕೇ ನಮಗೆ ಸಂದೇಶ. ಹೀಗಾಗಿ ಇವರ ವಿಚಾರಗಳು ಎಂದೆಂದಿಗೂ ಶಾಶ್ವತ ಎಂದರು.

ಶಾಸಕರಾದ ರಿಜ್ವಾನ್ ಅರ್ಷದ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ.ಪ್ರಭಾಕರ್, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ, ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸಾಧು ಕೋಕಿಲಾ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕಾರ್ಯದರ್ಶಿ ತ್ರಿಲೋಕಚಂದ್ರ, ಕಂಠೀರವ ಸ್ಟುಡಿಯೊ ಅಧ್ಯಕ್ಷರಾದ ಅಯೂಬ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.

ಇದನ್ನೂ ಓದಿ:ಗಾಂಧಿಯವರ ಸರ್ವೋದಯ, ಅಂಬೇಡ್ಕರರ ಅಂತ್ಯೋದಯ ನಮ್ಮ ಸರ್ಕಾರದ ಧ್ಯೇಯ: ಸಿಎಂ - Gandhi Jayanti

ABOUT THE AUTHOR

...view details