ಕರ್ನಾಟಕ

karnataka

ETV Bharat / state

ಮಾನಹಾನಿ ಪ್ರಕರಣ: ಮೊದಲ ಆರೋಪಿ ಜೊತೆ ರಾಜಿಯಾದರೂ ಇತರೆ ಆರೋಪಗಳ ಪ್ರಕರಣ ರದ್ದುಗೊಳಿಸಲಾಗದು- ಹೈಕೋರ್ಟ್​ - High Court - HIGH COURT

ಮಾನಹಾನಿ ಪ್ರಕರಣದಲ್ಲಿ ಮೊದಲ ಆರೋಪಿ ಜೊತೆ ರಾಜಿ ಸಂಧಾನವಾಗಿದ್ದರೂ ಇತರೆ ಆರೋಪಗಳ ಪ್ರಕರಣ ರದ್ದುಗೊಳಿಸಲಾಗದು ಎಂದು ಹೈಕೋರ್ಟ್​ ತಿಳಿಸಿದೆ.

High Court
ಹೈಕೋರ್ಟ್ (ETV Bharat)

By ETV Bharat Karnataka Team

Published : Aug 7, 2024, 9:44 PM IST

ಬೆಂಗಳೂರು: ಮಾನಹಾನಿಯಂತಹ ಪ್ರಕರಣಗಳನ್ನು ನಿರ್ಧರಿಸುವ ಸಂದರ್ಭದಲ್ಲಿ ಪ್ರತಿಯೊಬ್ಬ ಆರೋಪಿಯ ವಿರುದ್ಧದ ಆರೋಪ ಪರಿಗಣಿಸಬೇಕಾಗಿದ್ದು, ಮುಖ್ಯ ಆರೋಪಿ ಮತ್ತು ದೂರುದಾರರು ರಾಜಿ ಸಂಧಾನ ಮಾಡಿಕೊಂಡಿದ್ದರೂ ಇತರೆ ಆರೋಪಿಗಳ ವಿರುದ್ಧದ ಮಾನನಷ್ಟ ಪ್ರಕರಣ ರದ್ದುಗೊಳಿಸಲು ಅವಕಾಶವಿಲ್ಲ ಎಂದು ತಿಳಿಸಿದೆ.

ತಮ್ಮ ವಿರುದ್ಧದ ಮಾನ ಹಾನಿಕರ ಆರೋಪದ ಪ್ರಕರಣವನ್ನು ರದ್ದುಪಡಿಸುವಂತೆ ಕೋರಿ ದೂರದರ್ಶನದ ಉದ್ಯೋಗಿಗಳಾದ ಎಸ್.ನಾಗರಾಜನ್ ಮತ್ತು ಬಿ.ಅಶೋಕ್​ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರಿದ್ದ ಧಾರವಾಡ ಪೀಠ ಈ ಆದೇಶ ನೀಡಿದೆ. ಅಲ್ಲದೆ, ಅರ್ಜಿ ವಜಾಗೊಳಿಸಿ ಆದೇಶಿಸಿತು.

ಮಾನಹಾನಿಕರ ಪ್ರಕರಣಗಳಲ್ಲಿ ಪ್ರತಿಯೊಬ್ಬ ಆರೋಪಿಯ ವಿರುದ್ಧದ ಆರೋಪ ಕುರಿತಂತೆ ಸಾಕ್ಷ್ಯಾಧಾರಗಳಿದ್ದ ಸಂದರ್ಭದಲ್ಲಿ ಅವುಗಳನ್ನು ನ್ಯಾಯಾಲಯ ಪರಿಶೀಲಿಸಬೇಕಾಗುತ್ತದೆ. ಅರ್ಜಿದಾರರ ವಿರುದ್ಧ ಮೇಲ್ನೋಟಕ್ಕೆ ಪುರಾವೆಗಳು ಕಂಡುಬಂದಾಗ ಮತ್ತು ನ್ಯಾಯಾಲಯದಲ್ಲಿ ವಿಚಾರಣೆ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಹೈಕೋರ್ಟ್ ಮಧ್ಯಪ್ರವೇಶ ಮಾಡುವುದಕ್ಕೆ ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.

ಅಲ್ಲದೆ, ಪ್ರಕರಣದಲ್ಲಿ ಮೊದಲನೇ ಆರೋಪಿ ಮತ್ತು ದೂರುದಾರರ ನಡುವೆ ರಾಜಿ ಸಂಧಾನವಾಗಿದೆ. ಈ ಅಂಶ ಗಮನದಲ್ಲಿಟ್ಟುಕೊಂಡು, ಅರ್ಜಿದಾರರ ವಿರುದ್ಧ ಕ್ರಿಮಿನಲ್ ಕಾನೂನು ಕ್ರಮ ಜರುಗಿಸಲು ಅವಕಾಶವಿಲ್ಲ ಎಂಬ ಅರ್ಜಿದಾರರ ವಾದವನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ತಿಳಿಸಿತು.

ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿರುವವರು ದೂರುದಾರರ ವಿರುದ್ಧ (ಮಹೇಶ್​ ಜೋಶಿ) ಪ್ರಧಾನ ಮಂತ್ರಿಗಳು, ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವರಿಗೆ ವಿನಾ ಕಾರಣ ಆರೋಪಗಳನ್ನು ಮಾಡಿ ಇ-ಮೇಲ್​ ಮೂಲಕ ದೂರುಗಳನ್ನು ಸಲ್ಲಿಸಿದ್ದಾರೆ ಎಂಬುದರ ಕುರಿತಂತೆ ಹಲವು ಸಾಕ್ಷ್ಯಾಧಾರಗಳಿವೆ. ಹೀಗಾಗಿ ವಿಚಾರಣಾ ನ್ಯಾಯಾಲಯ ಅರ್ಜಿದಾರರಿಗೆ ಸಮನ್ಸ್​ ನೀಡಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ದುರುಪಯೋಗ ನಡೆದಿರುವುದು ಕಂಡು ಬರುತ್ತಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.

ದೂರುದಾರ (ಮಹೇಶ್​ ಜೋಶಿ)ರು ಬೆಂಗಳೂರಿನ ದೂರದರ್ಶನದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಪ್ರಕರಣದಲ್ಲಿ ಅರ್ಜಿದಾರರಲ್ಲಿ ಒಬ್ಬರಾದ ನಾಲ್ಕನೆ ಆರೋಪಿ ವಿರುದ್ಧ ಕ್ರಮ ಕೈಗೊಂಡಿದ್ದರು. ಈ ಸಂಬಂಧ ಪುರಾವೆಗಳಿವೆ. ಇದಕ್ಕೆ ಸೇಡು ತೀರಿಸಿಕೊಳ್ಳಲು ಅವರ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿ ಉನ್ನತ ಅಧಿಕಾರಿಗಳಿಗೆ ಇ-ಮೇಲ್‌ ಕಳುಹಿಸಿದ್ದಾರೆ. ಆದ್ದರಿಂದ, ದೂರುದಾರರ ವಿರುದ್ಧ ಸುಳ್ಳು ಮತ್ತು ಆಧಾರರಹಿತ ಆರೋಪಗಳನ್ನು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಅರ್ಜಿ ವಜಾಗೊಳಿಸುತ್ತಿರುವುದಾಗಿ ಪೀಠ ಹೇಳಿದೆ.

ಪ್ರಕರಣದ ಹಿನ್ನೆಲೆ:ಅರ್ಜಿದಾರರಾದ ಪ್ರಕರಣದ ಮೂರನೇ ಮತ್ತು ನಾಲ್ಕನೇ ಆರೋಪಿಗಳು ಬೆಂಗಳೂರು ದೂರದರ್ಶನದ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಬೆಂಗಳೂರು ದೂರದರ್ಶನದ ನಿವೃತ್ತ ಪ್ರಧಾನ ನಿರ್ದೇಶಕ ಮಹೇಶ್​ ಜೋಶಿ ಅವರು ತೊಂದರೆ ನೀಡಿದ್ದ ಆರೋಪವಿತ್ತು.

ಇದರಿಂದಾಗಿ ಮಹೇಶ್​ ಜೋಶಿ ಅವರ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಅವರ ವಿರುದ್ಧ ಪ್ರಧಾನ ಮಂತ್ರಿ, ವಾರ್ತಾ ಮತ್ತು ಪ್ರಸಾರ ಸಚಿವರು, ವಾರ್ತಾ ಮತ್ತು ಪ್ರಸಾರ ರಾಜ್ಯ ಸಚಿವರು, ಪ್ರಸಾರ ಭಾರತಿ ಅಧ್ಯಕ್ಷರು, ಪ್ರಸಾರ ಭಾರತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷರು ಮತ್ತು ಆಂತರಿಕ ದೂರು ಸಮಿತಿಯ ಅಧ್ಯಕ್ಷರಿಗೆ ದೂರನ್ನು ಕಳುಹಿಸಲಾಗಿತ್ತು.

ಆದರೆ, ದೂರಿನ ವಿಚಾರಣೆ ನಡೆಸಿದ್ದ ಆಂತರಿಕ ಸಮಿತಿ ವಜಾಗೊಳಿಸಿತ್ತು. ಈ ಪ್ರಕರಣದಿಂದ ತಮಗೆ ಮಾನಹಾನಿ ಮಾಡಲಾಗಿದೆ ಎಂದು ಅರ್ಜಿದಾರರು ಸೇರಿದಂತೆ ಇತರರ ವಿರುದ್ಧ ಮಹೇಶ್​ ಜೋಶಿ ದೂರು ದಾಖಲಿಸಿದ್ದರು. ಈ ನಡುವೆ ಮೊದಲನೇ ಆರೋಪಿಯ ವಿರುದ್ಧದ ಆರೋಪವನ್ನು ದೂರುದಾರರು ರಾಜಿ ಮಾಡಿಕೊಂಡು ಅವರ ವಿರುದ್ಧದ ಪ್ರಕರಣವ ಹಿಂಪಡೆದುಕೊಂಡಿದ್ದರು.

ಈ ನಡುವೆ ವಿಚಾರಣಾ ನ್ಯಾಯಾಲಯ ಅರ್ಜಿದಾರರಿಗೆ ಸಮನ್ಸ್​ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಪ್ರಕರಣದಲ್ಲಿ ಮೊದಲನೇ ಆರೋಪಿ ವಿರುದ್ಧದ ದೂರನ್ನು ಹಿಂತೆಗೆದುಕೊಂಡಾಗ, ಆರೋಪಿ ಸಂಖ್ಯೆ 3 ಮತ್ತು 4 ಅವರುಗಳ ವಿರುದ್ಧ ಕ್ರಮ ಕೈಗೊಳ್ಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ, ಪಿತೂರಿಯ ಪ್ರಶ್ನೆ ಬರುವುದಿಲ್ಲ. ಹೀಗಾಗಿ ವಿಚಾರಣೆಯನ್ನು ಮುಂದುವರಿಸುವುದು ಕಾನೂನಿನ ಪ್ರಕ್ರಿಯೆಯ ದುರುಪಯೋಗವಲ್ಲದೆ ಬೇರೇನೂ ಅಲ್ಲ ಎಂದು ವಾದಿಸಿದ್ದರು.

ಇದನ್ನೂ ಓದಿ:ವಾಲ್ಮೀಕಿ: ಯೂನಿಯನ್ ಬ್ಯಾಂಕ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಸೆ.4ಕ್ಕೆ - Valmiki Corporation Scam

For All Latest Updates

ABOUT THE AUTHOR

...view details