ಬೆಳಗಾವಿ:ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯನ್ನು ರಾಜ್ಯದ ಮಹಿಳೆಯರು ನಾನಾ ರೀತಿ ಸದ್ಬಳಕೆ ಮಾಡಿಕೊಂಡಿದ್ದಾರೆ. ಅದೇ ಯೋಜನೆ ಅವರನ್ನು ಇಂದು ಬೆಳಗಾವಿಯ ಸುವರ್ಣಸೌಧದ ಗ್ಯಾಲರಿಗೂ ಕರೆತಂದಿದೆ. ಕಲಾಪ ಕಣ್ತುಂಬಿಕೊಂಡ ಗೃಹಲಕ್ಷ್ಮಿಯರು ಭರ್ಜರಿ ಹೋಳಿಗೆ ಊಟ ಸವಿದು ಸಂಭ್ರಮಿಸಿದರು.
ಗೃಹಲಕ್ಷ್ಮಿ ಫಲಾನುಭವಿ ಮಹಿಳೆಯರ ಜೊತೆಗೆ ಒಂದೇ ವಾಹನದಲ್ಲಿ ಆಗಮಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸುವರ್ಣ ಸೌಧಕ್ಕೆ ಅವರನ್ನು ಕರೆದೊಯ್ದರು. ಕೆಲ ಹೊತ್ತು ಕಲಾಪವನ್ನು ಮಹಿಳೆಯರು ವೀಕ್ಷಿಸಿದರು. ಬಳಿಕ ಅವರಿಗೆ ಸೌಧದ ನೆಲ ಮಹಡಿಯಲ್ಲಿ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು.
ಗೃಹಲಕ್ಷ್ಮಿ ಯೋಜನೆ ಫಲಾನುಭವಿ ಮಹಿಳೆಯರ ಜೊತೆಗೆ ಈಟಿವಿ ಭಾರತ ಚಿಟ್ಚಾಟ್ (ETV Bharat) ಊರಿಗೆ ಹೋಳಿಗೆ ಊಟ ಹಾಕಿಸಿ ಸುದ್ದಿಯಾಗಿದ್ದ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ಅಕ್ಕಾತಾಯಿ ಲಂಗೋಟಿ ಅವರನ್ನು ಮಾತನಾಡಿಸಿದಾಗ, 'ನನಗೆ ಏನೂ ಮಾತಾಡೋಕೆ ಬರೋದಿಲ್ಲ. ಆದರೆ, ಗೃಹಲಕ್ಷ್ಮಿಯಿಂದ ನಾವು ಒಂದು ತುತ್ತು ಊಟ ಮಾಡುತ್ತಿದ್ದೇವೆ. ಹಾಗಾಗಿ, ಊರಿಗೆ ಹೋಳಿಗೆ ಊಟ ಹಾಕಿಸಿದ್ದೆ. ಈಗ ಸೌಧಕ್ಕೆ ಬಂದಿರೋದು ತುಂಬಾ ಸಂತಸ ತಂದಿದೆ" ಎಂದರು.
ಮಹಿಳೆಯರ ಜೊತೆಗೆ ಒಂದೇ ವಾಹನದಲ್ಲಿ ಆಗಮಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ETV Bharat) "ಹಳ್ಳಿಯವರಾದ ನಾವು ವಿಧಾನಸೌಧಕ್ಕೆ ಬರುವುದು ಎಂದರೆ ಅದು ಕನಸಿನ ಮಾತು. ಗೃಹಲಕ್ಷ್ಮಿ ಯೋಜನೆ ಇಂದು ನಮ್ಮನ್ನು ಇಲ್ಲಿಗೆ ಕರೆತಂದಿದೆ. ಅಧಿವೇಶನ ನೋಡಿ ತುಂಬಾ ಖುಷಿಯಾಯಿತು" ಎನ್ನುತ್ತಾರೆ ಗೃಹಲಕ್ಷ್ಮಿ ಹಣದಿಂದ ಗ್ರಂಥಾಲಯ ನಿರ್ಮಿಸಿದ್ದ ರಾಯಬಾಗ ತಾಲೂಕಿನ ಮಂಟೂರಿನ ಮಲ್ಲವ್ವ ಭೀಮಪ್ಪ ಮೇಟಿ.
ಗೃಹಲಕ್ಷ್ಮಿಯರಿಗೆ ಕಲಾಪ ತೋರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ETV Bharat) ಮಗನಿಗೆ ಬೈಕ್ ಕೊಡಿಸಿದ್ದ ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವ ಈರಪ್ಪ ಸಣ್ಣಕ್ಕಿ ಮಾತನಾಡಿ, "ವಿಧಾನಸೌಧಕ್ಕೆ ಜೀವನದಲ್ಲಿ ಎಂದೂ ಕಾಲು ಇಟ್ಟಿರಲಿಲ್ಲ. ಇಂದು ನಮ್ಮನ್ನು ಕರೆದುಕೊಂಡು ಬಂದಿದ್ದಾರೆ. ಬಹಳ ಖುಷಿಯಾಗುತ್ತಿದೆ. ಗೃಹಲಕ್ಷ್ಮಿ ಯೋಜನೆಯಿಂದ ನಮಗೆ ತುಂಬಾ ಅನುಕೂಲ ಆಗಿದೆ" ಎಂದು ಖುಷಿ ಹಂಚಿಕೊಂಡರು.
ಗೃಹಲಕ್ಷ್ಮಿಯರಿಗೆ ಕಲಾಪ ತೋರಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (ETV Bharat) ಗೋಕಾಕ್ ತಾಲೂಕಿನ ತವಗ ಗ್ರಾಮದ ಬಸವ್ವ ಖುಳಿ ಮಾತನಾಡಿ, "ಗೃಹಲಕ್ಷ್ಮಿ ಯೋಜನೆ ಹಣ ಕೂಡಿಸಿ ಎತ್ತು ಖರೀದಿಸಿದ್ದೇವೆ. ಈಗ ಸುವರ್ಣ ಸೌಧಕ್ಕೆ ಕರೆದುಕೊಂಡು ಬಂದಿದ್ದಾರೆ. ನಮಗೆ ಅವಕಾಶ ಮಾಡಿಕೊಟ್ಟ ಸರ್ಕಾರಕ್ಕೆ ಧನ್ಯವಾದ ಸಲ್ಲಿಸುತ್ತೇನೆ" ಎಂದರು.
ಕಲಾಪ ವೀಕ್ಷಿಸಿ ಅನುಭವ ಹಂಚಿಕೊಂಡ ಮಹಿಳೆಯರು. (ETV Bharat) ಗದಗ ಜಿಲ್ಲೆಯ ಗಜೇಂದ್ರಗಡದಿಂದ ಬಂದಿದ್ದ ಮಾಬುಬಿ, "ಸೊಸೆ ಮತ್ತು ನಾನು ಗೃಹಲಕ್ಷ್ಮಿ ಯೋಜನೆಯ 44 ಸಾವಿರ ರೂ. ಹಣದಿಂದ ಬೋರ್ವೆಲ್ ಕೊರೆಸಿದ್ದೆವು. ಅದರಲ್ಲಿ ನೀರು ಸಿಕ್ಕಿದ್ದು, ಸಿಎಂ ಸಿದ್ದರಾಮಯ್ಯ ಮತ್ತು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅದೆಷ್ಟು ಕೃತಜ್ಞತೆ ಸಲ್ಲಿಸಿದರೂ ಕಡಿಮೆಯೇ. ಈಗ ಕಲಾಪಕ್ಕೆ ಬಂದಿದ್ದೇವೆ. ಮುಖ್ಯಮಂತ್ರಿಗಳನ್ನು ಭೇಟಿ ಆಗುತ್ತೇವೆ" ಎಂದು ಹರ್ಷ ವ್ಯಕ್ತಪಡಿಸಿದರು.
ಇದಾದ ಬಳಿಕ ಗೃಹಲಕ್ಷ್ಮಿಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಅಭಿನಂದಿಸಿದರು.
ಇದನ್ನೂ ಓದಿ:ಗೃಹಲಕ್ಷ್ಮಿ ಫಲಾನುಭವಿಗಳ ಜೊತೆಗೆ ಬೆಳಗಾವಿಯ ಸುವರ್ಣ ಸೌಧಕ್ಕೆ ಬಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್