ದಾವಣಗೆರೆ:ಅಭಿವೃದ್ಧಿ ಹೆಸರಲ್ಲಿಪರಿಸರವನ್ನು ನಾಶಪಡಿಸುತ್ತಿರುವ ಈ ದಿನಗಳಲ್ಲಿ ದಾವಣಗೆರೆಯ ಪರಿಸರಪ್ರೇಮಿ ಗೋಪಾಲ ಗೌಡ್ರು ಒಂದೂವರೆ ಸಾವಿರ ಗಿಡ-ಮರಗಳನ್ನು ಬೆಳೆಸಿ ರಸ್ತೆ, ಉದ್ಯಾನವನ್ನು ಹಚ್ಚ ಹಸಿರಾಗಿಸಿದ್ದಾರೆ. ದಾವಣಗೆರೆ ನಗರದ ಎಂಸಿಸಿಬಿ ಬ್ಲಾಕ್ ನಿವಾಸಿಯಾಗಿರುವ ಗೌಡ್ರು ಎಸಿ, ಫ್ರಿಡ್ಜ್ ಟೆಕ್ನಿಷಿಯನ್ ಕೆಲಸದೊಂದಿಗೆ ಸದ್ದಿಲ್ಲದೆ ಪರಿಸರ ಸಂರಕ್ಷಣೆಯ ಕೆಲಸ ಮಾಡಿಕೊಂಡು ಬರುತ್ತಿದ್ದಾರೆ.
ಎಂಸಿಸಿಬಿ ಬ್ಲಾಕ್ ವೆಂಕಟೇಶ್ವರ ದೇವಾಲಯದ ರಸ್ತೆಯಲ್ಲಿ ಇವರು ನೆಟ್ಟಿದ್ದ ಗಿಡಗಳು ಇದೀಗ ಬೃಹತ್ ಮರಗಳಾಗಿವೆ. ಇಡೀ ರಸ್ತೆ ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದೆ. ಅಲ್ಲದೆ ತಾಪ ಏರಿಕೆಯಾದಾಗ ಜನಸಾಮಾನ್ಯರಿಗೆ ಈ ಮರಗಳು ನೆರಳಿನ ಆಸರೆ ನೀಡುತ್ತಿವೆ. ಪ್ರಾಣಿ-ಪಕ್ಷಿಗಳಿಗೂ ಆಶ್ರಯತಾಣವಾಗಿವೆ. ಇದಲ್ಲದೆ ಎಂಸಿಸಿಬಿ ಬ್ಲಾಕ್ನಲ್ಲಿರುವ ದಾವಣಗೆರೆ ಮ.ನ.ಪಾ ಈಜುಕೊಳದ ಮುಂಭಾಗದ ಉದ್ಯಾನವನದಲ್ಲೂ ಗಿಡಗಳನ್ನು ನೆಟ್ಟಿದ್ದಾರೆ.
ಪರಿಸರ ಪೂಜೆಗೆ ಹಲವು ಪ್ರಶಸ್ತಿ: ಇಲ್ಲಿಯವರೆಗೆ ಗೋಪಾಲ ಗೌಡ್ರು ಬೇವಿನ ಮರ, ಬಾದಾಮಿ ಮರ, ಹಣ್ಣಿನ ಮರಗಳು, ಹೊಂಗೇ ಮರ, ಸಂಪಿಗೆ ಮರ.. ಹೀಗೆ ನಾನಾ ಜಾತಿಯ ಗಿಡಗಳು ಸೇರಿ ಒಟ್ಟು ಒಂದೂವರೆ ಸಾವಿರಕ್ಕೂ ಹೆಚ್ಚು ಗಿಡ ಮರಗಳನ್ನು ಬೆಳೆಸಿ ಅವುಗಳನ್ನು ಪೋಷಿಸುತ್ತಿದ್ದಾರೆ. ಇವರ ಪರಿಸರ ಉಳಿಸುವ ಕಾಳಜಿಗೆ ಪರಿಸರ ಮಿತ್ರ ನಾಗರೀಕ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮಹಾನಗರ ಪಾಲಿಕೆಯಿಂದ ಪ್ರಶಸ್ತಿಗಳು ಸಂದಿವೆ.