ಕರ್ನಾಟಕ

karnataka

ETV Bharat / state

'ಲೋಕ' ಸಮರ: ಇವಿಎಂಗಳೊಂದಿಗೆ ಮತಗಟ್ಟೆಗಳತ್ತ ತೆರಳಿದ ಚುನಾವಣಾ ಸಿಬ್ಬಂದಿ - Lok Sabha Election - LOK SABHA ELECTION

ಮಂಗಳವಾರ ರಾಜ್ಯದಲ್ಲಿ ನಡೆಯುವ ಎರಡನೇ ಹಂತದ ಲೋಕಸಭೆ ಚುನಾವಣೆಯಲ್ಲಿ ಮತದಾರರು 227 ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಈಗಾಗಲೇ ಮತದಾನಕ್ಕೆ ಎಲ್ಲ ಸಿದ್ಧತೆ ಕೈಗೊಳ್ಳಲಾಗಿದೆ.

lok sabha election
ಮತಗಟ್ಟೆಗಳತ್ತ ಸಿಬ್ಬಂದಿ (ETV Bharat)

By ETV Bharat Karnataka Team

Published : May 6, 2024, 4:09 PM IST

ಪೊಲೀಸ್ ಕಮೀಷನರ್​ (ETV Bharat)

ಬೆಳಗಾವಿ/ದಾವಣಗೆರೆ/ಧಾರವಾಡ:ರಾಜ್ಯದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆಯ 14 ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದ್ದು, ಸಕಲ ಸಿದ್ಧತೆ ಕೈಗೊಳ್ಳಲಾಗಿದೆ. ಮಸ್ಟರಿಂಗ್ ಕಾರ್ಯ ಕೂಡ ಪೂರ್ಣಗೊಂಡಿದ್ದು, ಇವಿಎಂ, ವಿವಿ ಪ್ಯಾಟ್ ಸೇರಿ ಚುನಾವಣಾ ಸಾಮಗ್ರಿಗಳ ಜೊತೆಗೆ ಸಿಬ್ಬಂದಿ ಮತಗಟ್ಟೆಗಳತ್ತ ಪ್ರಯಾಣ ಬೆಳೆಸಿದ್ದಾರೆ.

ಮತಗಟ್ಟೆಗಳತ್ತ ಸಿಬ್ಬಂದಿ (ETV Bharat)

ದಾವಣಗೆರೆ, ಶಿವಮೊಗ್ಗ, ಹಾವೇರಿ, ಧಾರವಾಡ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರಗಿ, ಬೆಳಗಾವಿ, ಚಿಕ್ಕೋಡಿ ಹಾಗೂ ಉತ್ತರಕನ್ನಡ ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಮಂಗಳವಾರ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆವರೆಗೆ ಮತದಾನಕ್ಕೆ ಅವಕಾಶವಿದೆ.

ಮತಗಟ್ಟೆಗಳತ್ತ ಸಿಬ್ಬಂದಿ (ETV Bharat)

ಕಣದಲ್ಲಿ 227 ಅಭ್ಯರ್ಥಿಗಳು:ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಎಲ್ಲ 14 ಕ್ಷೇತ್ರಗಳಲ್ಲೂ ಸ್ಪರ್ಧೆ ಮಾಡಿವೆ. ಒಟ್ಟು 227 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 206 ಪುರುಷ, 21 ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಇನ್ನುಳಿದಂತೆ ಬಿಎಸ್‌ಪಿ 9, ನೋಂದಾಯಿತ ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಂದ 73 ಹಾಗೂ 117 ಸ್ವತಂತ್ರ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ದಾವಣಗೆರೆಯಲ್ಲಿ ಗರಿಷ್ಠ 30 ಅಭ್ಯರ್ಥಿಗಳು ಹಾಗೂ ಶಿವಮೊಗ್ಗದಲ್ಲಿ 23 ಮತ್ತು ರಾಯಚೂರಿನಲ್ಲಿ ಕನಿಷ್ಠ 8 ಅಭ್ಯರ್ಥಿಗಳಿದ್ದಾರೆ.

ಪೊಲೀಸ್ ಸಿಬ್ಬಂದಿ (ETV Bharat)

28,269 ಮತಗಟ್ಟೆಗಳು:14 ಕ್ಷೇತ್ರಗಳಲ್ಲಿ ಒಟ್ಟು 2,59,52,958 ಮತದಾರರು ಇದ್ದಾರೆ. ಒಟ್ಟು 28,269ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 14 ಕ್ಷೇತ್ರಗಳಲ್ಲಿ ಸುಮಾರು 1.45 ಲಕ್ಷ ಚುನಾವಣಾಧಿಕಾರಿಗಳನ್ನು ನಿಯೋಜಿಸಲಾಗಿದೆ. 35,000 ಸಿವಿಲ್ ಪೊಲೀಸ್ ಸಿಬ್ಬಂದಿ, ಕೇಂದ್ರ ಅರೆಸೇನಾ ಪಡೆಗಳು ಮತ್ತು ಇತರ ರಾಜ್ಯಗಳ ಸಶಸ್ತ್ರ ಪೊಲೀಸರು ಇರಲಿದ್ದಾರೆ. ಜೊತೆಗೆ 4,000 ಮೈಕ್ರೋ ಅಬ್ಸರ್ವರ್‌ಗಳು ಸಹ ಕರ್ತವ್ಯದಲ್ಲಿರಲಿದ್ದಾರೆ. 17,000 ಮತಗಟ್ಟೆಗಳನ್ನು ವೆಬ್‌ಕಾಸ್ಟಿಂಗ್ ಮೂಲಕ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ಎಲ್ಲ ಸಿದ್ಧತೆ:ನಗರದ ವನಿತಾ ವಿದ್ಯಾಲಯದಲ್ಲಿ ಮಸ್ಟರಿಂಗ್ ಕಾರ್ಯ ನಡೆಯಿತು. ಬೆಳಗಾವಿ, ಚಿಕ್ಕೋಡಿ ಹಾಗೂ ಕೆನರಾ ಲೋಕಸಭಾ ಕ್ಷೇತ್ರಗಳು ಜಿಲ್ಲೆಯಲ್ಲಿವೆ. ಒಟ್ಟೂ 41,05,225 ಮತದಾರರು ಅಭ್ಯರ್ಥಿಗಳ ಭವಿಷ್ಯ ಬರೆಯಲಿದ್ದಾರೆ. ಜಿಲ್ಲಾದ್ಯಂತ 4,524 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಮತದಾನ ಪ್ರಕ್ರಿಯೆಗೆ 26,500 ಜನ ಸಿಬ್ಬಂದಿ ನೇಮಿಸಲಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 5 ಸಖಿ ಬೂತ್​ಗಳಂತೆ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಒಟ್ಟು 40 ಸಖಿ ಬೂತ್​​ಗಳನ್ನು ಸ್ಥಾಪಿಸಲಾಗಿದೆ. ಅದೇ ರೀತಿ ವಿಶೇಷಚೇತನರು, ಯುವ ಮತದಾರರು ಸೇರಿ 56 ವಿಶೇಷ ಬೂತ್​ಗಳಿವೆ.

ದಾವಣಗೆರೆಯಲ್ಲಿ 1,946 ಮತಗಟ್ಟೆಗಳು:ದಾವಣಗೆರೆ ಕ್ಷೇತ್ರದಲ್ಲಿ 17,09,244 ಮತದಾರರಿದ್ದಾರೆ, 8,51,990 ಪುರುಷರು ಹಾಗೂ 8,57,117 ಮಹಿಳಾ ಮತದಾರರಿದ್ದಾರೆ. ಒಟ್ಟಾರೆ ಮಹಿಳಾ ಮತದಾರರೇ ಹೆಚ್ಚಿದ್ದಾರೆ. ಕ್ಷೇತ್ರದಲ್ಲಿ ಒಟ್ಟು 1,946 ಮತಗಟ್ಟೆಗಳಿವೆ. ಅದರಲ್ಲಿ 390 ಕ್ರಿಟಿಕಲ್ ಮತಗಟ್ಟೆ, 35 ಸಖಿ ಮತಗಟ್ಟೆ, 7 ದಿವ್ಯಾಂಗ ಮತಗಟ್ಟೆಗಳು ಸೇರಿವೆ. ಭದ್ರತೆಗಾಗಿ 3,500 ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗಿದೆ. ಚುನಾವಣಾ ಕರ್ತವ್ಯಕ್ಕಾಗಿ 8,996 ಸಿಬ್ಬಂದಿ ನಿಯೋಜಿಸಲಾಗಿದೆ.

ಧಾರವಾಡ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ 1901 ಮತಗಟ್ಟೆಗಳ ಮಸ್ಟರಿಂಗ್ ಕಾರ್ಯ ಸೋಮವಾರ ನಡೆಯಿತು. ನಿಯೋಜಿತ ಸಿಬ್ಬಂದಿಗೆ 4,602 ಬ್ಯಾಲೆಟ್, 2,429 ಕಂಟ್ರೋಲ್ ಯುನಿಟ್, 2,559 ವಿವಿಪ್ಯಾಟ್ ವಿತರಣೆ ಮಾಡಲಾಗಿದೆ. ಒಟ್ಟು 8,086 ಸಿಬ್ಬಂದಿ ಚುನಾವಣೆ ಕರ್ತವ್ಯ ನಿರ್ವಹಿಸಲಿದ್ದಾರೆ. ಸೂಕ್ಷ್ಮ ಹಾಗೂ ಅತೀ ಸೂಕ್ಷ್ಮ ಮತಗಟ್ಟೆಗಳಿಗೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು‌ ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.

ಲೋಕಸಭಾ ಸಾರ್ವತ್ರಿಕ ಚುನಾವಣೆಗೆ 1,524 ಬಸ್‌‌ಗಳ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೇ 6 ಮತ್ತು 7 ರಂದು ಸಾರಿಗೆ ಬಸ್ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಲಿದ್ದು, ಪ್ರಯಾಣಿಕರು ಸಹಕರಿಸಬೇಕು ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಪೊಲೀಸ್ ಇಲಾಖೆಯಿಂದ ಸಿದ್ಧತೆ: ''ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗೆ ಪೋಲಿಸ್ ಇಲಾಖೆಯಿಂದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಭದ್ರತೆಗೆ 4,000 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ'' ಎಂದು ಹು -ಧಾ ಪೋಲಿಸ್ ಆಯುಕ್ತೆ ರೇಣುಕಾ ಸುಕುಮಾರ್​ ತಿಳಿಸಿದ್ದಾರೆ. ''ಚುನಾವಣಾ ಭದ್ರತೆ ಕುರಿತು ಮಾತನಾಡಿದ ಅವರು, ಈಗಾಗಲೇ ತಮಿಳುನಾಡಿಯಿಂದ ಹೆಚ್ಚಿನ ಸಿಬ್ಬಂದಿ ಕರೆಸಿಕೊಳ್ಳಲಾಗಿದೆ. ಅದರಂತೆ ಸಿಆರ್​​ಪಿಎಫ್, ಕೆಎಸ್ಆರ್​​ಪಿ ತುಕಡಿ ಸೇರಿದಂತೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬಂದಿದ್ದಾರೆ'' ಎಂದರು‌.

''ಈಗಾಗಲೇ ಸೂಕ್ಷ್ಮ ಮತ್ತು ಸಾಮಾನ್ಯ ಬೂತ್​​ಗಳನ್ನು ಗುರುತಿಸಲಾಗಿದೆ. ಸೂಕ್ಷ್ಮ ಬೂತ್​​ಗಳಲ್ಲಿ ಇಬ್ಬರು, ಸಾಮಾನ್ಯ ಬೂತ್​​ಗಳಲ್ಲಿ ಒಬ್ಬರನ್ನು ನೇಮಕ ಮಾಡಲಾಗಿದೆ. ಈ ಎಲ್ಲ ಪ್ರಕ್ರಿಯೆ ನೋಡಿಕೊಳ್ಳಲು 42 ಸೆಕ್ಟರ್ ಮೊಬೈಲ್ ವಾಹನಗಳನ್ನು ಇರಿಸಲಾಗಿದೆ. ಪಿಎಸ್ಐ, ಎಎಸ್ಐ ನೇತೃತ್ವದಲ್ಲಿ ಪೆಟ್ರೋಲಿಂಗ್ ಕಾರ್ಯ ನಡೆಯಲಿದೆ. ಇವರ‌ ಮೇಲೆ 11 ಸೂಪರವೈಸರ್ ಮೊಬೈಲ್ ವಾಹನಗಳು ಇನ್ಸ್​ಪೆಕ್ಟರ್ ನೇತೃತ್ವದಲ್ಲಿ ಕೆಲಸ ಮಾಡಲಿವೆ'' ಎಂದು ಹೇಳಿದರು.

ಇದನ್ನೂ ಓದಿ: ನಾಳೆ ರಾಜ್ಯದ 14 ಕ್ಷೇತ್ರಗಳಲ್ಲಿ 2ನೇ ಹಂತದ ಲೋಕಸಭೆ ಚುನಾವಣೆ: ತಪ್ಪದೇ ವೋಟ್‌ ಮಾಡಿ

ABOUT THE AUTHOR

...view details