ಬೆಂಗಳೂರು:ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಾಳೆ ನಡೆಯಲಿದೆ ಈ ನಿಟ್ಟಿನಲ್ಲಿ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ಎಲ್ಲಾ ಕ್ಷೇತ್ರಗಳ ಮತಗಟ್ಟೆಗಳಿಗೂ ಚುನಾವಣಾ ಹಾಗೂ ಭದ್ರತಾ ಸಿಬ್ಬಂದಿ ಗುರುವಾರ ಮಧ್ಯಾಹ್ನ ತೆರಳಿದರು.
ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಬೆಂಗಳೂರಿನ ಡಾ.ಬಿ.ಆರ್.ಅಂಬೇಡ್ಕರ್ ಕಾಲೇಜಿನ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಜಿಲ್ಲಾ ಚುನಾವಣಾಧಿಕಾರಿ ಹಾಗೂ ಮುಖ್ಯ ಆಯುಕ್ತರಿಂದ ಬಿಇಎಲ್ ಪ್ರೈಮರಿ ಸ್ಕೂಲ್ ಮಸ್ಟರಿಂಗ್ ಕೇಂದ್ರದಲ್ಲಿ ಮೆಡಿಕಲ್ ಕಿಟ್ ಹಾಗೂ ಇನ್ನಿತರೆ ಸಾಮಗ್ರಿಗಳ ಪರಿಶೀಲನೆ ನಡೆಸಿದರು.
ಬೆಳಿಗ್ಗೆಯಿಂದಲೇ ಆಯಾ ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮಸ್ಟರಿಂಗ್ ಕೇಂದ್ರಗಳಲ್ಲಿ ಚುನಾವಣಾ ಸಿಬ್ಬಂದಿ ಸೇರಿಕೊಂಡು ನಿಗದಿಪಡಿಸಿದ ಮತಗಟ್ಟೆಗಳಿಗೆ ಮತಯಂತ್ರ ಹಾಗೂ ಇತರ ಸಾಮಗ್ರಿಗಳೊಂದಿಗೆ ತೆರಳಿದರು. ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಉಡುಪಿ-ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ, ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಕ್ಷೇತ್ರಗಳಲ್ಲಿ ಒಟ್ಟು 30,602 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಮತಗಟ್ಟೆಯ 200 ಮೀಟರ್ ದೂರದಲ್ಲಿ ಅಭ್ಯರ್ಥಿಗಳ ತಾತ್ಕಾಲಿಕ ಕಚೇರಿಗಳನ್ನು ಸ್ಥಾಪಿಸಲು ಅಭ್ಯರ್ಥಿಗಳಿಗೆ ಚುನಾವಣಾ ಆಯೋಗ ಅವಕಾಶ ಮಾಡಿಕೊಟ್ಟಿದೆ. ರಾಜ್ಯದ ಮೊದಲ ಹಂತದ 14 ಕ್ಷೇತ್ರಗಳಿಗೆ ನಾಳೆ ಮತದಾನ ನಡೆಯಲಿದ್ದು, 2,88,19,342 ಮತದಾರರು ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. 1,44,17,530 ಪುರುಷ, 1,43,87,585 ಮಹಿಳಾ, 3,067 ಇತರೆ, 11,160 ಸೇವಾ ಮತದಾರರು ಇದ್ದಾರೆ.
ಆ್ಯಪ್ ಸೌಲಭ್ಯ:ಲೋಕಸಭಾ ಚುನಾವಣೆಯಲ್ಲಿ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಹಿಯನ್ನು ಹಾಕಲಾಗುತ್ತದೆ. ಶಾಂತಿಯುತ ಹಾಗೂ ಸುಗಮ ಮತದಾನ ನಡೆಯಲು ಚುನಾವಣಾ ಆಯೋಗ ಎಲ್ಲ ತಯಾರಿ ನಡೆಸಿದ್ದು, ಮತಗಟ್ಟೆ ಕೆಲಸಕ್ಕಾಗಿ ಸುಮಾರು 1.40 ಲಕ್ಷ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಾಳೆ ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೂ ಮತದಾನ ನಡೆಯಲಿದ್ದು, ಮತದಾರರು ತಮ್ಮ ಮತಗಟ್ಟೆಗಳನ್ನು ತಿಳಿದುಕೊಳ್ಳಲು ಚುನಾವಣಾ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್‌ನಲ್ಲಿ ಮತದಾರರಿಗೆ ಅವರ ಮತಗಟ್ಟೆ ಯಾವುದು ಮತ್ತು ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು, ಅವರ ಮತದಾನ ಗುರುತಿನ ಚೀಟಿ ಎಲ್ಲದರ ಮಾಹಿತಿ ಸಿಗಲಿದೆ.