ಕರ್ನಾಟಕ

karnataka

ETV Bharat / state

ನಮ್ಮ ನಿರೀಕ್ಷೆಗೂ ಮೀರಿ 14 ಕ್ಷೇತ್ರಗಳ ಚುನಾವಣೆ ನಡೆದಿದೆ: ಬಿ.ವೈ. ವಿಜಯೇಂದ್ರ - Lok Sabha election 2024 - LOK SABHA ELECTION 2024

''ಅತಿ ಹೆಚ್ಚು ಸ್ಥಾನ ಪಡೆಯುವ ಕಾಂಗ್ರೆಸ್ ಕನಸು ನುಚ್ಚು ನೂರಾಗಿದೆ. ರಾಜ್ಯದಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಹೆಚ್ಚು ಸ್ಥಾನ ಪಡೆದು ದಾಖಲೆ ಬರೆಯಲಿದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

BY Vijayendra  Shivamogga  Lok Sabha election 2024
ನಮ್ಮ ನಿರೀಕ್ಷೆಗೂ ಮೀರಿ 14 ಕ್ಷೇತ್ರದ ಚುನಾವಣೆ ನಡೆದಿದೆ: ಬಿ.ವೈ. ವಿಜಯೇಂದ್ರ

By ETV Bharat Karnataka Team

Published : Apr 27, 2024, 1:15 PM IST

ನಮ್ಮ ನಿರೀಕ್ಷೆಗೂ ಮೀರಿ 14 ಕ್ಷೇತ್ರಗಳ ಚುನಾವಣೆ ನಡೆದಿದೆ: ಬಿ.ವೈ. ವಿಜಯೇಂದ್ರ

ಶಿವಮೊಗ್ಗ:''ನಿನ್ನೆ ನಡೆದ 14 ಕ್ಷೇತ್ರದ ಚುನಾವಣೆಯಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಚುನಾವಣೆ ನಡೆದಿದೆ. ಮೈಸೂರು, ಚಾಮರಾನಗರ, ಹಾಸನ ಸೇರಿದಂತೆ ಎಲ್ಲ ಕಡೆಗಳಲ್ಲಿ ಉತ್ತಮ ಮತದಾನ ನಡೆದಿದೆ'' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ನಗರದಲ್ಲಿರುವ ತಮ್ಮ ಮನೆಯಲ್ಲಿ ಇಂದು (ಶನಿವಾರ) ಮಾತನಾಡಿದ ಅವರು, ''ಕಾಂಗ್ರೆಸ್ ಅಲ್ಪಸಂಖ್ಯಾಂತರ ಓಲೈಕೆ ಮಾಡುತ್ತಿದೆ. ಸಿದ್ದರಾಮಯ್ಯ ಅವರು ಸಿಎಂ ಆದ ಮೇಲೆ ಅಲ್ಪಸಂಖ್ಯಾಂತರಿಗೆ ಓಬಿಸಿ ಅವಕಾಶ ಕೊಡುವ ಚಿಂತನೆ ಮಾಡುತ್ತಿದ್ದಾರೆ. ಇದರಿಂದ ಓಬಿಸಿ ಸಮುದಾಯದವರಿಗೆ ಅನ್ಯಾಯ ಮಾಡುತ್ತಾರೆ ಎಂಬ ಭಾವನೆ ಮೂಡಿದೆ'' ಎಂದ ಅವರು, ''ಮೋದಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಾಳೆ ಮೋದಿ ಅವರು, ಬೆಳಗಾವಿ, ಉತ್ತರ ಕನ್ನಡ ಹಾಗೂ ದಾವಣಗೆರೆ ಮತ್ತು ಹೊಸಪೇಟೆಯಲ್ಲಿ ಪ್ರವಾಸ ಮಾಡಲಿದ್ದಾರೆ. ಇದು ಮುಂದಿನ 14 ಲೋಕಸಭ ಕ್ಷೇತ್ರದ ಪ್ರವಾಸದ ಮೇಲೂ ಬಿರುತ್ತದೆ ಎಂದರು.

''ಮೊದಲೇ ಹೇಳುತ್ತಿದ್ದಂತೆ 28ಕ್ಕೆ 28 ಸ್ಥಾನಗಳನ್ನು ಗೆಲ್ಲುತ್ತೇವೆ ಎಂಬ ಹೇಳಿಕೆಗೆ ನಿನ್ನೆ ನಡೆದ 14 ಕ್ಷೇತ್ರದ ಮತದಾನ ಆಗಿರುವುದನ್ನು ಗಮನಿಸಿದರೆ, 14ಕ್ಕೆ 14 ಸ್ಥಾನಗಳನ್ನು ಗೆಲ್ಲುವ ವಾತವರಣವಿದೆೆ. ಇದರಿಂದ ಕಾಂಗ್ರೆಸ್​ನವರು ನನಗೆ ತಲೆ ಕೆಟ್ಟಿದೆ ಎಂದು ಹೇಳಬಹುದು. ದಿನದಿಂದ ದಿನಕ್ಕೆ ನೋಡ್ತಾ ಹೋದರೆ, ನಮ್ಮ ಗುರಿಯನ್ನು ತಲುಪುತ್ತೇವೆ ಎಂಬ ಭಾವನೆ ನಮ್ಮಲ್ಲಿ ಬರುತ್ತಿದೆ. ನಿನ್ನೆ ನಡೆದ ಚುನಾವಣೆಯಲ್ಲಿ ಕೆಲವು ಕಡೆ ಕಡಿಮೆ, ಇನ್ನೂ ಕೆಲವು ಕಡೆ ಜಾಸ್ತಿ ಆಗಿದೆ. ದೇಶದೆಲ್ಲೆಡೆ ಶೇ 65ರಿಂದ 68ರಷ್ಟು ಮತದಾನವಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ತಕ್ಕ ಮಟ್ಟಿಗೆ ಚೆನ್ನಾಗಿ ಮತದಾನವಾಗಿದೆ'' ಎಂದು ಹೇಳಬಹುದು.

ಅಮೇಥಿ ಕ್ಷೇತ್ರದಲ್ಲಿ ವಿಶ್ವಾಸ ಕಳೆದುಕೊಂಡ ರಾಹುಲ್​ ಗಾಂಧಿ- ವಿಜಯೇಂದ್ರ:''ರಾಹುಲ್ ಗಾಂಧಿ ಅವರು ಅಮೇಥಿಯಂತಹ ಕ್ಷೇತ್ರದಲ್ಲಿ ವಿಶ್ವಾಸ ಕಳೆದುಕೊಂಡಿದ್ದಾರೆ. ಕೇರಳದ ವೈಯನಾಡಿನಲ್ಲಿ ಅವಿತು ಕುಳಿತು ಕೊಂಡಿದ್ದಾರೆ. ವೈಯನಾಡಿನಲ್ಲಿ ಶೇ 70 ಕ್ಕೂ ಹೆಚ್ಚು ಅಲ್ಪಸಂಖ್ಯಾತರಿದ್ದಾರೆ. ಅಲ್ಪಸಂಖ್ಯಾತರೇ ಬಹುಸಂಖ್ಯಾತರಾಗಿರುವ ವೈಯನಾಡಿನಲ್ಲಿ ಅಡಗಿ ಕುಳಿತುಕೊಳ್ಳುವ ಪರಿಸ್ಥಿತಿ ಇದೆ. ಕಾಂಗ್ರೆಸ್​ನ ಪ್ರಧಾನಮಂತ್ರಿ ಅಭ್ಯರ್ಥಿಗೆ ಯಾಕೆ ಈ ಪರಿಸ್ಥಿತಿ? ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದ ಅಮೇಥಿ ಕ್ಷೇತ್ರದ ಜನ ಗಾಂಧಿ ಕುಟುಂಬಕ್ಕೆ ಆರ್ಶೀವಾದ ಮಾಡಿದ್ದರು‌. ಇಂತಹ ಕ್ಷೇತ್ರದ ಜನ ಯಾಕೆ ರಾಹುಲ್ ಗಾಂಧಿಯನ್ನು ಧಿಕ್ಕರಿಸಿದ್ದಾರೆ ಎಂದು ಮೊದಲು ಯೋಚಿಸಬೇಕು'' ಎಂದು ಹೇಳಿದರು.

''ನರೇಂದ್ರ ಮೋದಿ ಅವರ ಕೊಡುಗೆ ಏನು ಎಂದು ಜನ ಮನೆ ಮನೆಯಲ್ಲಿ ಮಾತನಾಡುತ್ತಿದ್ದಾರೆ. ರಾಹುಲ್ ಗಾಂಧಿ ಹೇಳಿಕೆಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ರಾಹುಲ್ ಗಾಂಧಿಯನ್ನು ರಾಜ್ಯದಲ್ಲಿ ಹೆಚ್ಚೆಚ್ಚು ಕರೆಯಿಸಿ ಪ್ರಚಾರ ನಡೆಸಬೇಕು ಎಂದು ಸಿಎಂ ಸಿದ್ದರಾಮಯ್ಯಗೆ ನಾನು ಒತ್ತಾಯ ಮಾಡುತ್ತೇನೆ. ರಾಹುಲ್ ಗಾಂಧಿ ಅವರು ಶಿವಮೊಗ್ಗಕ್ಕೆ ಬರುತ್ತಿದ್ದಾರೆ. ನಮ್ಮ ರಾಘಣ್ಣ 2.50 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಬಹುದು ಎಂದು ಕೊಂಡಿದ್ದೇವೆ. ರಾಹುಲ್ ಗಾಂಧಿ ಪ್ರಚಾರಕ್ಕೆ ಬರುವುದರಿಂದ ಇನ್ನೂ 50 ಸಾವಿರ ಹೆಚ್ಚು ಮತಗಳನ್ನು ರಾಘಣ್ಣ ಪಡೆಯುತ್ತಾರೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

''ಮೊದಲ ಹಂತದ ಚುನಾವಣೆಯಲ್ಲಿ ಸಹ ಗ್ಯಾರಂಟಿ ಕಾರ್ಡ್ ಹಂಚಲಾಗಿದೆ. ಆದರೂ ಸಹ ಅದು ಮತದಾರರ ಮೇಲೆ ಪರಿಣಾಮ ಬೀರಿಲ್ಲ. ಇದರಿಂದ ಕಾಂಗ್ರೆಸ್​ನವರು ಬೂಟಾಟಿಕೆ ಮಾಡಿದರೂ ಅದು ಯಶಸ್ವಿ ಆಗಲ್ಲ. ಅಧಿಕಾರದ ಅಮಲಿನಲ್ಲಿ ಇರುವ ಕಾಂಗ್ರೆಸ್ ಪಕ್ಷದವರು ತೆಗೆದುಕೊಳ್ಳುತ್ತಿರುವ ತೀರ್ಮಾನ, ಚಿಂತನೆಗಳು, ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರದ ಧೋರಣೆ, ಅಲ್ಪಸಂಖ್ಯಾತ ತುಷ್ಟೀಕರಣ ರಾಜಕಾರಣ ಇವೆಲ್ಲವುಗಳಿಗೆ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರ ಬೆಲೆ ತೆರಬೇಕಾಗುತ್ತದೆ'' ಎಂದು ಕಿಡಿಕಾರಿದರು.

''ಅಲ್ಪಸಂಖ್ಯಾತರಿಗೆ ಒಬಿಸಿ ಮೀಸಲಾತಿ ನೀಡುವುದಕ್ಕೆ ಹೊರಟಿರುವುದು ಓಬಿಸಿ ಅವರಿಗೆ ಮಾಡಿರುವಂತಹ ಅನ್ಯಾಯ'' ಎಂದರು. ಈಶ್ವರಪ್ಪನವರು ಶಿವಮೊಗ್ಗದಲ್ಲಿ ಬಿಜೆಪಿಗೆ ಸೋಲಿನ ಭಯ ಕಾಡುತ್ತಿದೆ ಎಂಬ ಹೇಳಿಕೆಗೆ ನಗುತ್ತಾ ಪ್ರತಿಕ್ರಿಯಿಸಿದ ಅವರು, ''ದೇವರು ಅವರಿಗೆ ಒಳ್ಳೆಯದನ್ನು ಮಾಡಲಿ'' ಎಂದು ಹೇಳಿದರು. ಮೊದಲ ಹಂತದ ಮತದಾನದ ವಾತಾವರಣವು ಎರಡನೇ ಹಂತದ ಚುನಾವಣೆಯಲ್ಲೂ ಇರುತ್ತದೆ. ಅತಿ ಹೆಚ್ಚು ಸ್ಥಾನ ಪಡೆಯುವ ಕಾಂಗ್ರೆಸ್ ಕನಸು ನುಚ್ಚು ನೂರಾಗಿದೆ. ರಾಜ್ಯದಲ್ಲಿ ಬಿಜೆಪಿ- ಜೆಡಿಎಸ್ ಮೈತ್ರಿ ಹೆಚ್ಚು ಸ್ಥಾನ ಪಡೆದು ದಾಖಲೆ ಬರೆಯಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ಮಂಗಳೂರು: ಮತದಾನ ಮಾಡುವ ಫೋಟೋ ವೈರಲ್, ಪ್ರಕರಣ ದಾಖಲು - Voting photo viral

ABOUT THE AUTHOR

...view details