ಬೆಂಗಳೂರು:ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣದ ಸಂಬಂಧ ಅಕ್ರಮ ಹಣ ವರ್ಗಾವಣೆ ಕಾಯಿದೆಯಡಿ (ಪಿಎಂಎಲ್ಎ) ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶಾನಾಲಯ(ಇಡಿ) ಅಧಿಕಾರಿಗಳು, ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಿಗಮದ ಮಾಜಿ ಎಂ.ಡಿ. ಪದ್ಮನಾಭ್ ಮತ್ತು ಹೈದರಾಬಾದ್ ಫಸ್ಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ ಅವರನ್ನು ಏಳು ದಿನಗಳ ಕಾಲ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎಂ.ಜಿ.ರಸ್ತೆಯಲ್ಲಿರುವ ಯೂನಿಯನ್ ಬ್ಯಾಂಕ್‌ನಲ್ಲಿ ನಿಗಮದ 94.73 ಕೋಟಿ 18 ಬ್ಯಾಂಕ್ ಖಾತೆಗಳಿಗೆ ವರ್ಗಾವಣೆಯಾಗಿತ್ತು. ಈ ಜಾಡು ಬೆನ್ನತ್ತಿದ್ದಾಗ ಫಸ್ಟ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸತ್ಯನಾರಾಯಣ ವರ್ಮಾ ನಕಲಿ ದಾಖಲೆ ಸೃಷ್ಟಿಸಿ ಬ್ಯಾಂಕ್ ಖಾತೆಗಳನ್ನು ತೆರೆದು ಅಕ್ರಮವಾಗಿ ಹಣ ವರ್ಗಾಯಿಸಿಕೊಂಡಿರುವುದು ತನಿಖೆಯಲ್ಲಿ ಬಹಿರಂಗವಾಗಿತ್ತು.