ಬೆಂಗಳೂರು:ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲೂ ಜಮೀನು, ನಿವೇಶನ ನೋಂದಣಿಗೆ ಇ - ಖಾತೆ ಕಡ್ಡಾಯವಾಗಿರಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಮುಂದಿನ ತಿಂಗಳಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿವೇಶನ ನೋಂದಣಿ ಮಾಡಬೇಕಾದರೆ ಖಾತೆ ಡಿಜಿಟಲೀಕರಣ ಆಗಿರಬೇಕು. ಇ-ಖಾತೆಯಾಗಿದ್ದರೆ ಮಾತ್ರ ನೋಂದಣಿ ಮಾಡಲಾಗುವುದು. ಬಿಬಿಎಂಪಿ ವ್ಯಾಪ್ತಿಯಲ್ಲೂ ಇ - ಖಾತೆ ಮಾಡುವಂತೆ ಸೂಚನೆ ನೀಡಲಾಗಿದೆ. ಇ-ಖಾತೆ ಇದ್ದರೆ ಮಾತ್ರ ನೋಂದಣಿ ಮಾಡಲಾಗುತ್ತದೆ. ಅಕ್ರಮಗಳಿಗೆ ಕಡಿವಾಣ ಹಾಕಲು ಈ ಕ್ರಮ ತಂದಿದ್ದೇವೆ. ಮುಂದಿನ ತಿಂಗಳು ನೋಂದಣಿ ಮಾಡಬೇಕಾದರೆ ಬಿಬಿಎಂಪಿಗೆ ಅರ್ಜಿ ಹಾಕಿ ಇ - ಖಾತೆ ಮಾಡಿಸಿಕೊಳ್ಳಬೇಕು ಎಂದರು.
ಸಚಿವ ಕೃಷ್ಣ ಬೈರೇಗೌಡ ಪತ್ರಿಕಾಗೋಷ್ಠಿ (ETV Bharat) ಪೇಪರ್ ಖಾತೆಯಿಂದ ನಕಲಿ ಸಾಧ್ಯತೆ:ಸದ್ಯ ಜಮೀನಿಗೆ ಖಾತೆ ಇಲ್ಲದಿದ್ದರೂ, ಪೇಪರ್ನಲ್ಲಿ ಖಾತೆ ಮುದ್ರಿಸಿ ಅದನ್ನು ಕೊಟ್ಟು ನೋಂದಣಿ ಮಾಡಿಸುತ್ತಿರುವ ಪ್ರಕರಣ ವ್ಯಾಪಕವಾಗಿ ನಡೆಯುತ್ತಿವೆ. ಈ ರೀತಿ ಬೋಗಸ್ ಖಾತೆ ಸೃಷ್ಟಿಸಿ ಅದರ ಮೇಲೆ ನೋಂದಣಿ ಮಾಡುತ್ತಿದ್ದಾರೆ. ಇದರಿಂದ ಅಕ್ರಮಗಳು ಹೆಚ್ಚಾಗುತ್ತಿವೆ. ಪೇಪರ್ ಖಾತೆ ಹೊಂದಿದವರು ನೋಂದಣಿ ಮಾಡುವಾಗ ಇತರ ಎಂಬ ಕೆಟಗರಿ ಇರುತ್ತೆ. ಆ ಕೆಟಗರಿಯನ್ನು ಆಯ್ಕೆ ಮಾಡಿ ನೋಂದಣಿ ಮಾಡುತ್ತಿದ್ದಾರೆ. ಇತರ ಕೆಟಗರಿಯಲ್ಲಿ ಆಶ್ರಯ ಯೋಜನೆ ಸೇರಿ ಇತರ ಯೋಜನೆಗಳಡಿ ನೋಂದಣಿ ಮಾಡಲಾಗುತ್ತದೆ. ಇದಕ್ಕೆ ಮುದ್ರಾಂಕ ಶುಲ್ಕ ಕಡಿಮೆ ಇದೆ. ಬೆಂಗಳೂರಲ್ಲಿ ಶೇಕಡಾ 91ರಷ್ಟು ಇತರೆ ಕೆಟಗರಿಯಲ್ಲಿ ಜಮೀನುಗಳನ್ನು ನೋಂದಣಿ ಮಾಡಲಾಗುತ್ತಿದೆ. ಇದು ಅನುಮಾನಕ್ಕೆ ಕಾರಣವಾಗಿದೆ. ಪೇಪರ್ ಖಾತೆ ಹೊಂದಿರುವ ಅನೇಕರು ಇತರ ಕೆಟಗರಿಯಲ್ಲಿ ತಮ್ಮ ಆಸ್ತಿ ನೋಂದಣಿ ಮಾಡಿಸುತ್ತಿದ್ದಾರೆ ಎಂದು ವಿವರಿಸಿದರು.
ತೆರಿಗೆ ನಷ್ಟವಾಗಿರುವುದು ಪತ್ತೆ:ಆ ಮೂಲಕ ತೆರಿಗೆ ವಂಚನೆ ಮಾಡಲಾಗುತ್ತಿದೆ. 2018-2019 ರ ನಡುವೆ 250 ಕೋಟಿ ರೂಪಾಯಿ ಬೆಂಗಳೂರಿನ ನಾಲ್ಕು ಉಪ ನೋಂದಣಿ ಕಚೇರಿ ವ್ಯಾಪ್ತಿಯಲ್ಲಿ ತೆರಿಗೆ ನಷ್ಟ ಆಗಿರುವುದು ಪತ್ತೆಯಾಗಿದೆ. ನೋಂದಣಿ ಮಾಡಬೇಕಾದರೆ ಸ್ಕೆಚ್ ಕಡ್ಡಾಯ. ಆದರೆ, ಕೆಲವರು ಸ್ಕೆಚ್ ಇಲ್ಲದೆ ನೋಂದಣಿ ಮಾಡಿಸುತ್ತಿದ್ದಾರೆ. ಇತ್ತೀಚೆಗೆ ಪರಿಶೀಲಿಸಿದಾಗ 200 ಆಸ್ತಿಗಳು ನೋಂದಣಿ ಸ್ಕೆಚ್ ಇಲ್ಲದೇ ಆಗಿವೆ. ಅವುಗಳನ್ನು ಟಿಡಿಆರ್ ಆಸ್ತಿ ಎಂದು ತೋರಿಸಿ ನೋಂದಣಿ ಮಾಡಲಾಗಿದೆ. ಟಿಡಿಆರ್ಗೆ ಸ್ಕೆಚ್ ಬೇಕಾಗಿಲ್ಲ. ಈ ರೀತಿ ವಂಚನೆ ಮಾಡಿ, ತೆರಿಗೆ ನಷ್ಟ ಮಾಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯಿತಿ, ಪುರಸಭೆ, ಬಿಬಿಎಂಪಿ, ಬಿಡಿಎ ಆಗಿರಲಿ ಎಲ್ಲ ಕಡೆ ಖಾತೆ ಡಿಜಿಟಲೀಕರಣ ಮಾಡಬೇಕು. ಈಗಾಗಲೇ ಪ್ರಾಯೋಗಿಕವಾಗಿ ನಾಲ್ಕು ಜಿಲ್ಲೆಗಳಲ್ಲಿ ಜಾರಿ ಮಾಡಿದ್ದೇವೆ. ಈಗ ಮತ್ತೆ ಎಂಟು ಜಿಲ್ಲೆಗಳಲ್ಲಿ ಮಾಡಲು ನಿರ್ಧರಿಸಿದ್ದೇವೆ. ಒಟ್ಟು 12 ಜಿಲ್ಲೆಗಳಲ್ಲಿ ಡಿಜಿಟಲ್ ಖಾತೆ ಇದ್ದರೆ ಮಾತ್ರ ನೋಂದಣಿ ಮಾಡಲಾಗುತ್ತದೆ. ಫೆಬ್ರವರಿಯಿಂದ ಖಾತೆಯನ್ನು ಡಿಜಿಟಲೀಕರಣ ಮಾಡಲು ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಶನಿವಾರ, ಭಾನುವಾರವೂ ಉಪನೋಂದಣಿ ಕಚೇರಿ ಓಪನ್:ಅಕ್ಟೋಬರ್ 21ರಿಂದ ಪ್ರತಿ ನೋಂದಣಿ ಜಿಲ್ಲೆಯಲ್ಲಿ ಯಾವುದಾದರೂ ಒಂದು ನೋಂದಣಿ ಕಚೇರಿಯನ್ನು ಶನಿವಾರ ಹಾಗೂ ಭಾನುವಾರವೂ ತೆರೆಯಲು ನಿರ್ಧರಿಸಲಾಗಿದೆ. ನಗರ ಪ್ರದೇಶಗಳಲ್ಲಿ ಮೊದಲ ಹಾಗೂ ಮೂರನೇ ಶನಿವಾರ ಮತ್ತು ಭಾನುವಾರವೂ ನೋಂದಣಿ ಕಚೇರಿ ತೆರೆಯುವ ಬೇಡಿಕೆ ಇದೆ. ದುಡಿಯುವ ವರ್ಗದ ಜನರಿಗೆ ಇದರಿಂದ ಅನುಕೂಲವಾಗಲಿದೆ ಎಂದರು.
ಇದನ್ನೂ ಓದಿ:ಜಾಗತಿಕ ತುರ್ತು ಪರಿಸ್ಥಿತಿಗೆ ಕಾರಣವಾದ 'ಡೇಂಜರಸ್' ಮಂಕಿಪಾಕ್ಸ್ ವೈರಸ್ ಕೇರಳ ವ್ಯಕ್ತಿಯಲ್ಲಿ ಪತ್ತೆ - INDIA REPORTS MPOX STRAIN CASE