ಬೆಂಗಳೂರು: ಟಿಕೆಟ್ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ನಾಳೆ ಮಹತ್ವದ ಸುದ್ದಿಗೋಷ್ಟಿ ಕರೆದಿದ್ದು, ತಮ್ಮ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ. ಈಗಾಗಲೇ ಮತ್ತೋರ್ವ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿ ಮತ್ತೆ ಬಿಜೆಪಿಗೆ ವಾಪಸ್ಸಾಗಿರುವ ಹಿನ್ನೆಲೆಯಲ್ಲಿ ಸಾಕಷ್ಟು ಚರ್ಚಿಸಿಯೇ ಇದೀಗ ತಮ್ಮ ರಾಜಕೀಯ ನಿರ್ಧಾರವನ್ನು ಪ್ರಕಟಿಸಲಿದ್ದಾರೆ. ವಿಶೇಷವಾಗಿ ಕುಟುಂಬ ಸದಸ್ಯರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ತಿಳಿದುಬಂದಿದೆ.
ಸಂಜಯ್ ನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಡಿ.ವಿ.ಸದಾನಂದ ಗೌಡ, ಕಾಂಗ್ರೆಸ್ ನಾಯಕರ ಸಂಪರ್ಕ ವಿಚಾರವನ್ನು ಒಪ್ಪಿಕೊಂಡರು. ನನ್ನನ್ನು ಬೇರೆಬೇರೆಯವರು ಬಂದು ಸಂಪರ್ಕ ಮಾಡುತ್ತಿರುವುದು ಸತ್ಯ. ನಿನ್ನೆ ನಮ್ಮ ಪಕ್ಷದ ಪ್ರಮುಖ ನಾಯಕರೊಬ್ಬರು ಬಂದು ಸಾಂತ್ವನ ಹೇಳಿದರು. ಬೇರೆ ಬೇರೆ ಸಂಗತಿಗಳು ನಡೆಯುತ್ತಿವೆ. ಇವತ್ತು ನನ್ನ ಜನ್ಮದಿನ, ಇಡೀ ದಿನ ಕುಟುಂಬದ ಸದಸ್ಯರ ಜೊತೆ ಕಳೆದು ನಂತರ ನಿಶ್ಚಯ ಮಾಡುತ್ತೇನೆ. ನನ್ನ ನಿರ್ಧಾರಗಳನ್ನು ನಾನು ನನ್ನ ಕುಟುಂಬದ ಸದಸ್ಯರ ಜೊತೆ ಚರ್ಚಿಸಬೇಕು. ನಂತರವೇ ನಿರ್ಧಾರಕ್ಕೆ ಬರಲಿದ್ದೇನೆ ಎಂದರು.
ಇದನ್ನೂ ಓದಿ: ಶಿವಮೊಗ್ಗ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ: ಕೆ ಎಸ್ ಈಶ್ವರಪ್ಪ ಘೋಷಣೆ
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಶೇ.100ರಷ್ಟು ನನ್ನ ಹೆಸರು ಮಾತ್ರ ಬಂದಿತ್ತು. ಆದರೆ ದೆಹಲಿಯಲ್ಲಿ, ಇಲ್ಲಿ ಒಂದಷ್ಟು ವಿದ್ಯಮಾನ ನಡೆದಿರುವುದು ನನ್ನ ಗಮನಕ್ಕೆ ಬಂದಿದೆ. ನಿಮಗೆ ಟಿಕೆಟ್ ಅಂತ ಹೇಳಿ ಕೊನೆಯ ಕ್ಷಣದಲ್ಲಿ ನನ್ನ ರಕ್ಷಣೆಗೆ ಬರಲಿಲ್ಲ. ಕೆಲವೊಂದು ಮನದಾಳದ ವಿಚಾರಗಳನ್ನು ಹೇಳಿಕೊಳ್ಳಬೇಕಿದೆ. ಅದಕ್ಕಾಗಿ ನಾಳೆ ಸುದ್ದಿಗೋಷ್ಟಿ ಕರೆಯುತ್ತೇನೆ. ನಾಳೆ ಯಾವ ನಿರ್ಣಯ ಅಂತ ಈಗಲೇ ಹೇಳಿಬಿಟ್ಟರೆ ನಾಳೆಗೆ ಏನೂ ಉಳಿಯಲ್ಲ. ರಾಜಕೀಯದಲ್ಲಿ ಏರುಪೇರು, ಮುಜುಗರ ಸಹಜ. ಆದರೆ ತಿಳಿದೂ ತಿಳಿದೂ ಹೀಗೆ ಮಾಡಿರೋದು ಬೇಜಾರು ತಂದಿದೆ ಎಂದು ನಾಳಿನ ಸುದ್ದಿಗೋಷ್ಟಿಯ ಸಸ್ಪೆನ್ಸ್ ಉಳಿಸಿಕೊಂಡಿದ್ದಾರೆ.