ಕರ್ನಾಟಕ

karnataka

ETV Bharat / state

ರಾಹುಲ್ ಗಾಂಧಿಗೆ ಹಣ ಕಳಿಸಿದ ವಿಚಾರ ಹೊರಕ್ಕೆ ಬರಬಹುದೆಂಬ ಕಾರಣಕ್ಕೆ ಸಿಬಿಐ ತನಿಖೆಗೆ ವಹಿಸುತ್ತಿಲ್ಲ: ಸದಾನಂದಗೌಡ - officer suicide case - OFFICER SUICIDE CASE

ಚಂದ್ರಶೇಖರನ್​​ ಆತ್ಮಹತ್ಯೆ ಪ್ರಕರಣ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಒಂದು ಜ್ವಲಂತ ಸಾಕ್ಷಿ. ಸಚಿವರ ಸೂಚನೆ ಅಡಿಯಲ್ಲೇ ಇದು ನಡೆದಿದೆ ಎಂದು ಹೇಳುತ್ತಿದ್ದರೂ ಸಿದ್ದರಾಮಯ್ಯ ಜಾಣ ಕುರುಡರಾಗಿ ನಾಗೇಂದ್ರರ ರಾಜೀನಾಮೆ ಪಡೆದಿಲ್ಲ ಎಂದು ಮಾಜಿ ಸಿಎಂ ಸದಾನಂದಗೌಡ ಟೀಕಿಸಿದರು.

Sadananda Gowda slam state govt
ಪತ್ರಿಕಾಗೋಷ್ಠಿ ಬಿಜೆಪಿ ನಾಯಕರು (ETV Bharat)

By ETV Bharat Karnataka Team

Published : Jun 1, 2024, 4:07 PM IST

ಮಾಜಿ ಸಿಎಂ ಸದಾನಂದಗೌಡ (ETV Bharat)

ಬೆಂಗಳೂರು:ರಾಹುಲ್ ಗಾಂಧಿಗೆ ಹಣ ಕಳುಹಿಸಿದ ವಿಚಾರ ಹೊರಕ್ಕೆ ಬರಬಹುದು ಎಂಬ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಸಿಬಿಐ ತನಿಖೆಗೆ ಹಿಂದೇಟು ಹಾಕುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಆರೋಪಿಸಿದರು. ಶನಿವಾರ ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್‍ಐಟಿಗಳು ರಾಜ್ಯ ಸರ್ಕಾರ ನೀಡುವ ಆದೇಶ ಪಾಲಿಸುವ ಏಜೆನ್ಸಿಗಳಾಗಿವೆ. ಸತ್ಯಾಂಶ ಹೊರಕ್ಕೆ ಬರಲು ಸಿಬಿಐ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ಇಷ್ಟು ದೀರ್ಘ ಕಾಲ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ, ಸಚಿವ ನಾಗೇಂದ್ರರನ್ನು ವಜಾ ಮಾಡುವ ಧೈರ್ಯ ತೋರದೇ ಭ್ರಷ್ಟಾಚಾರಕ್ಕೆ ಪುಷ್ಟಿ ಕೊಡುವ ದಾರಿಯಲ್ಲಿ ಮುಂದೆ ಹೋಗುತ್ತಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದರೆ ಇಂಥ ಸಚಿವನನ್ನು ಮರುದಿನವೇ ವಜಾ ಮಾಡುತ್ತಿದ್ದೆ. ಚಂದ್ರಶೇಖರನ್​​ ಅವರ ಆತ್ಮಹತ್ಯೆ ಪ್ರಕರಣ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಒಂದು ಜ್ವಲಂತ ಸಾಕ್ಷಿ ಎಂದು ಟೀಕಿಸಿದರು.

ಹಲವು ಖಾಸಗಿ ವ್ಯಕ್ತಿಗಳಿಗೆ ಹಣ ವರ್ಗಾವಣೆ ಆಗಿದ್ದು, ಸರ್ಕಾರ ಮಾಹಿತಿ ಕೊಡುತ್ತಿಲ್ಲ. ನಿಗಮದ ಅಧ್ಯಕ್ಷರು ಸತ್ಯ ಸಂಗತಿ ಬಿಡುಗಡೆ ಮಾಡಿಲ್ಲ. ಆದ್ದರಿಂದ ಆದಷ್ಟು ಬೇಗ ನಾಗೇಂದ್ರರ ರಾಜೀನಾಮೆ ಪಡೆದು ಸಿಬಿಐ ತನಿಖೆ ಮಾಡಿಸಬೇಕು. ಇದಲ್ಲದೇ ಸಚಿವರು ಎರಡು ದಿನಗಳಿಂದ ಕಾಣೆಯಾಗಿದ್ದಾರೆ. ಇದರ ಕುರಿತು ಸಿಎಂ ಮಾಹಿತಿ ಕೊಡಲಿ ಎಂದು ಸವಾಲು ಹಾಕಿದರು.

ಪೂರ್ಣ ಪ್ರಮಾಣದ ಸಾಕ್ಷ್ಯಗಳಿದ್ದರೂ ಸಿದ್ದರಾಮಯ್ಯ ಮೌನಿ ಆಗಿರುವುದೇಕೋ ಗೊತ್ತಾಗುತ್ತಿಲ್ಲ. ಮಾತೆತ್ತಿದರೆ ನಾವು ಭ್ರಷ್ಟಾಚಾರ ವಿರೋಧಿಗಳು, 40 ಪರ್ಸೆಂಟ್‌ ಕಮಿಷನ್ ಹೊಡೆದವರನ್ನು ಇಳಿಸಿದ್ದೀವಿ, ಭ್ರಷ್ಟಾಚಾರದ ತನಿಖೆ ಮಾಡಲು ಆಯೋಗ ರಚಿಸಿದ್ದಾಗಿ ಹೇಳುವ ಸಿಎಂ, ಭ್ರಷ್ಟಾಚಾರ ಕಡಿಮೆ ಮಾಡುವ ಪ್ರಯತ್ನ ಮಾಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಗುತ್ತಿಗೆದಾರರಿಗೆ ಬಿಲ್ ಪಾವತಿಯಾಗದೇ ಒದ್ದಾಡುವಂತಾಗಿದೆ. ಕಮಿಷನ್‍ಗಾಗಿ ಬೇಡಿಕೆ ಕುರಿತು ದೊಡ್ಡದಾಗಿ ಹೇಳುವಂತಾಗಿದೆ. ರಟ್ಟಿನ ಪೆಟ್ಟಿಗೆಗಳಲ್ಲಿ ಹಣವೂ ಸಿಕ್ಕಿದೆ. ಇದೇ 6ರ ಬಳಿಕ ಈ ಕುರಿತು ದೊಡ್ಡ ಪ್ರಮಾಣದ ಹೋರಾಟವನ್ನು ಬಿಜೆಪಿ ನಡೆಸಲಿದೆ. 15 ಖಾಸಗಿ ಕಂಪನಿಗಳಿಗೆ ಹಣ ವರ್ಗಾವಣೆ ಆಗಿದೆ. ಇದು ನೇರವಾಗಿ ಕಾಂಗ್ರೆಸ್ಸಿನ ಎಟಿಎಂಗೆ ಹೋಗುವ ಹಣವೆಂದು ಸಾಬೀತುಪಡಿಸಿದೆ. ಸಚಿವರ ಸೂಚನೆ ಅಡಿಯಲ್ಲೇ ಇದು ನಡೆದಿದೆ ಎಂದು ಹೇಳುತ್ತಿದ್ದರೂ ಸಿದ್ದರಾಮಯ್ಯ ಜಾಣಕುರುಡರಾಗಿ ನಾಗೇಂದ್ರರ ರಾಜೀನಾಮೆ ಪಡೆದಿಲ್ಲ. 3 ಖಾತೆಗಳು ಹೈದರಾಬಾದ್ ಮೂಲದವಾಗಿವೆ. ಇದರ ಮೂಲಕ ತೆಲಂಗಾಣಕ್ಕೆ ಹಣದ ವ್ಯವಸ್ಥೆ ಮಾಡಲಾಗಿದೆ ಎಂದು ಆರೋಪಿಸಿದರು.

ಮಾಜಿ ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ತಮ್ಮೇಶ್ ಗೌಡ, ಎಸ್.ಟಿ ಮೋರ್ಚಾ ರಾಜ್ಯ ಅಧ್ಯಕ್ಷ ಬಂಗಾರು ಹನುಮಂತು, ಮುಖಂಡ ಜಗದೀಶ ಹಿರೇಮನಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ವಾಲ್ಮೀಕಿ ನಿಗಮ ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಸ್ಪಷ್ಟನೆ - Valmiki Corporation

ABOUT THE AUTHOR

...view details