ಉಪ್ಪಿನಂಗಡಿ,ದ.ಕ:ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಪಶ್ಚಿಮ ಘಟ್ಟ ತಪ್ಪಲಲ್ಲಿ ಬರುವ ಮೀಸಲು ಅರಣ್ಯ ಪ್ರದೇಶದಲ್ಲಿ ನಿರಂತರವಾಗಿ ಕಾಡು ಪ್ರಾಣಿಗಳ ಬೇಟೆ ನಡೆಯುತ್ತಿದೆ. ಶುಕ್ರವಾರ ಹಗಲಿನಲ್ಲೇ 4 ಮಂದಿ ಬೇಟೆಗಾರರು ಭಾರಿ ಗಾತ್ರದ ಕಾಡುಕೋಣವನ್ನು ಗುಂಡು ಹೊಡೆದು ಕೊಂದು ಹಾಕಿದ್ದಾರೆ ಎಂಬ ಪ್ರಕರಣ ಬೆಳಕಿಗೆ ಬಂದಿದೆ.
"ಬೂಡುಜಾಲು ಅರಣ್ಯದ ಅಂಚಿನಲ್ಲಿ ಇರುವ ತೋಟಕ್ಕೆ ಕಾಡುಕೋಣವೊಂದು ಮೇವು ತಿನ್ನಲು ಬರುತ್ತಿದ್ದ ಮಾಹಿತಿಯನ್ನು ಅರಿತ ತಂಡವು ಗುರುವಾರ ರಾತ್ರಿ ತೋಟದ ಮನೆಯೊಂದರಲ್ಲಿ ಕಾದು ಕುಳಿತ್ತಿತ್ತು. ನಂತರದಲ್ಲಿ ಭೇಟೆಯಾಡಿ ಕೊಂದ ಕಾಡುಕೋಣವನ್ನು ಕತ್ತರಿಸಿ ಶಿಬಾಜೆಯ ಪಿಕ್‌ಅಪ್ ವಾಹನದಲ್ಲಿ ಕೃತ್ಯದ ಪ್ರಮುಖ ಆರೋಪಿ ರಾಜು ಎಂಬುವರ ಮನೆಗೆ ಸಾಗಿಸಿ ಅಲ್ಲಿ ಮಾಂಸ ಮಾಡಿ ಶೇಖರಿಸಿ ಇಟ್ಟಿರುವ ಮಾಹಿತಿಯನ್ನು ಆಧರಿಸಿ ಅರಣ್ಯ ಸಿಬ್ಬಂದಿಗಳು ಶಿಬಾಜೆಯ ರಾಜು ಎಂಬುವರ ಮನೆಗೆ ಸೇರಿದಂತೆ ಮೂರು ಮನೆಗಳಿಗೆ ದಾಳಿ ನಡೆಸಿದ್ದಾರೆ. ಈ ವೇಳೆ ಒಣಗಿಸಿರುವ ಕಾಡುಪ್ರಾಣಿಗಳ ಮಾಂಸ ಪತ್ತೆಯಾಗಿದೆ. ಈ ಪ್ರಕರಣದಲ್ಲಿ ಇನ್ನೂ ಕೆಲವರು ಕೂಡ ಭಾಗಿಯಾಗಿದ್ದು ಈ ಬಗ್ಗೆ ತನಿಖೆ ನಡೆಯುತ್ತಿದೆ" ಎಂದು ಉಪ್ಪಿನಂಗಡಿ ವಲಯ ಆರ್ಎಫ್ಒ ರಾಘವೇಂದ್ರ ಅವರು ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.