ಬೆಂಗಳೂರು:ಇಲ್ಲಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿಕೆವಿಕೆ)ದ ಆವರಣದಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ರೈತಸ್ನೇಹಿ ಡ್ರೋನ್‌ಗಳು ಜನರನ್ನು ಆಕರ್ಷಿಸುತ್ತಿವೆ. ಬೆಳೆಗಳಿಗೆ ಔಷಧ ಸಿಂಪಡಿಸುವುದು, ರೋಗ ತಗುಲಿರುವ ಕುರಿತು ಮಾಹಿತಿ ನೀಡುವ, ಹವಾಮಾನ ಬದಲಾವಣೆ ಹಾಗೂ ಭೂಮಿ ಸರ್ವೇ ಮಾಡುವುದೂ ಸೇರಿದಂತೆ ಕೃಷಿ ಸಂಬಂಧಿತ ವಿವಿಧ ಕೆಲಸಗಳಿಗೆ ನೆರವಾಗುವ ಡ್ರೋನ್‌ಗಳು ಗಮನ ಸೆಳೆಯುತ್ತಿವೆ.
ಔಷಧಿ ಸಿಂಪಡಿಸುವ ಡ್ರೋನ್:ಔಷಧಿ ಸಿಂಪಡಿಸುವ ಡ್ರೋನ್ ಈ ಮೊದಲೇ ಲಭ್ಯ ಇದೆ. ಬೆಳೆಗಳಿಗೆ ಔಷಧಿ ಸಿಂಪಡಿಸುವಾಗ ಹೆಚ್ಚು ಗಾಳಿಯಿದ್ದರೆ ಪಕ್ಕದ ಬೆಳೆಗಳಿಗೆ ದೊಡ್ಡ ಮಟ್ಟದ ಹಾನಿ ಉಂಟಾಗುತ್ತದೆ. ಇದನ್ನು ತಡೆಯಲು ಈ ಡ್ರೋನ್ಗಳಲ್ಲಿ ವಿಶೇಷ ತಂತ್ರಾಂಶ ಅಳವಡಿಸಲಾಗಿದೆ. ಜೊತೆಗೆ, ಯಾವ ಬೆಳೆಗೆ ಎಷ್ಟು ಔಷಧ ಸಿಂಪಡಿಸಬೇಕು ಎಂಬ ಮುನ್ಸೂಚನೆಯನ್ನೂ ಇವು ನೀಡುತ್ತವೆ. ಇದಕ್ಕೂ ಸೂಕ್ತ ಪ್ರೋಗ್ರಾಮಿಂಗ್ ಮಾಡಲಾಗಿದೆ. ಇವು 20 ನಿಮಿಷಗಳ ಕಾಲ ಹಾರುವ ಸಾಮರ್ಥ್ಯ ಹೊಂದಿವೆ. ಸುಮಾರು 1500 ಛಾಯಾಚಿತ್ರಗಳನ್ನು ಸೆರೆ ಹಿಡಿದು, ಜಮೀನಿನ ಯಾವ ಭಾಗ ರೋಗಕ್ಕೆ ತುತ್ತಾಗಿದೆ ಎಂಬ ಮಾಹಿತಿಯನ್ನು ರೈತರಿಗೆ ನೀಡುತ್ತದೆ. ಪ್ರಕೃತಿಗೆ ಯಾವುದೇ ರೀತಿ ತೊಂದರೆ ಮಾಡದಂತೆ ಕಾರ್ಯನಿರ್ವಹಿಸಲು ಈ ಡ್ರೋನ್‌ಗಳನ್ನು ತಯಾರಿಸಲಾಗಿದೆ.
ಹವಾಮಾನ ನಿರ್ವಹಣೆ ಡ್ರೋನ್‌ಗಳು ಸುಮಾರು ಮೂರರಿಂದ ನಾಲ್ಕು ನಿಮಿಷಗಳವರೆಗೆ ಹಾರುವ ಸಾಮರ್ಥ್ಯ ಹೊಂದಿವೆ. ಇವು ರೈತರಿಗೆ ವಾತಾವರಣದ ತಾಪಮಾನ, ಗಾಳಿಯ ವೇಗ, ಹವಾಗುಣಗಳಂತಹ ಮಾಹಿತಿ ನೀಡುವ ಮೂಲಕ ರೈತರು ಯಾವ ಕಾಲದಲ್ಲಿ ಯಾವ ರೀತಿಯ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂಬ ಸೂಚನೆ ನೀಡುತ್ತವೆ.