ಕರ್ನಾಟಕ

karnataka

ETV Bharat / state

ಮೈಸೂರು: ಚಿರತೆ ಸಂರಕ್ಷಣೆ, ಪುನರ್ವಸತಿ ಕೇಂದ್ರಕ್ಕೆ ಡಿಪಿಆರ್, ಶೀಘ್ರ ಅನುಮೋದನೆ ದೊರೆಯುವ ನಿರೀಕ್ಷೆ - LEOPARD REHABILITATION CENTER

ಚಿರತೆ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ನಿರ್ಮಾಣ ಮಾಡಲು ಡಿಪಿಆರ್ ತಯಾರಿಸಿ, ಸರ್ಕಾರಕ್ಕೆ ಕಳಿಸಿಕೊಡಲಾಗಿದೆ.

leopard
ಚಿರತೆ (ETV Bharat)

By ETV Bharat Karnataka Team

Published : Dec 9, 2024, 12:51 PM IST

ಮೈಸೂರು:ಜಿಲ್ಲೆಯ ಕಾಡಂಚಿನ ಹಾಗೂ ನಗರ ಪ್ರದೇಶ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಚಿರತೆಗಳ ದಾಳಿ ಹೆಚ್ಚಾಗುತ್ತಿದೆ. ಚಿರತೆಗಳ ಬಿಕ್ಕಟ್ಟು ತಡೆಯಲು ಹಾಗೂ ಗಾಯಗೊಂಡ ಚಿರತೆಗಳಿಗೆ ಚಿಕಿತ್ಸೆ ನೀಡಿ ಆರೈಕೆ ಮಾಡುವ ಉದ್ದೇಶದಿಂದ ಇಲವಾಲದಲ್ಲಿ ಚಿರತೆ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ನಿರ್ಮಾಣ ಮಾಡಲು ಡಿಪಿಆರ್ ತಯಾರಾಗಿದೆ. ಶೀಘ್ರದಲ್ಲೇ ಅನುಮೋದನೆ ದೊರೆಯುವ ನಿರೀಕ್ಷೆ ಇದೆ.

ಗುಜರಾತ್ ಮಾದರಿಯಲ್ಲಿ ಮೈಸೂರು-ಹುಣಸೂರು ರಸ್ತೆಯಲ್ಲಿರುವ ಇಲವಾಲದ ಅರಣ್ಯ ಪ್ರದೇಶದಲ್ಲಿ ಅತ್ಯಾಧುನಿಕ ಶೈಲಿಯಲ್ಲಿ ಪುನರ್ವಸತಿ ಕೇಂದ್ರ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ ಸಿದ್ಧಗೊಂಡಿದ್ದು, ಸರ್ಕಾರ ಒಪ್ಪಿಗೆಗೆ ಕಾಯಲಾಗುತ್ತಿದೆ. ಈ ಯೋಜನೆಗೆ ರಾಜ್ಯ ಸರ್ಕಾರದಿಂದ ಅನುಮೋದನೆ ದೊರೆತರೆ, ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ಚಿರತೆ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಆರಂಭವಾಗಲಿದೆ.

ಕಳೆದ ನಾಲ್ಕು ವರ್ಷಗಳಿಂದ ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಚಿರತೆ ಹಾವಳಿ ಮಿತಿಮೀರಿದೆ. ತಿ.ನರಸೀಪುರ ತಾಲೂಕಿನ ಗ್ರಾಮದಲ್ಲಿ ಚಿರತೆ ದಾಳಿಗೆ ಸಿಲುಕಿ ಶಾಲಾ ಬಾಲಕನೊಬ್ಬ ಮೃತಪಟ್ಟ ವಿಚಾರ ರಾಜ್ಯಾದ್ಯಂತ ಸದ್ದು ಮಾಡಿತ್ತು. ಮಾನವ ಪ್ರಾಬಲ್ಯದ ಭೂ ಪ್ರದೇಶದಲ್ಲಿ ಹೊಂದಿಕೊಳ್ಳುವುದು, ಸುಗ್ಗಿಯ ಕಾಲದಲ್ಲಿ ಗ್ರಾಮಗಳತ್ತ ಬರುತ್ತಿರುವುದರಿಂದ ಒಂದಲ್ಲಾ ಒಂದು ಪ್ರದೇಶಗಳಲ್ಲಿ ಚಿರತೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಮೂಡಿಸುತ್ತಿವೆ.

ಚಿರತೆಗಳ ಆರೈಕೆ ಮಾಹಿತಿ (ETV Bharat)

ಗ್ರಾಮಸ್ಥರು ನೀಡುವ ಮಾಹಿತಿ ಆಧರಿಸಿ ಅರಣ್ಯ ಇಲಾಖೆಯವರು ಬೋನು ಇರಿಸಿ, ಚಿರತೆ ಬಲೆಗೆ ಬಿದ್ದ ಬಳಿಕ ತಂದು ಮೃಗಾಲಯ ಅಥವಾ ಕಾಡಿಗೆ ಮರಳಿ ಬಿಡಲಾಗುತ್ತದೆ. ಅಲ್ಲದೆ, ವಾಹನಕ್ಕೆ ಸಿಲುಕಿ, ಹೊಲಗದ್ದೆಗಳಲ್ಲಿ ತಂತಿ ಬೇಲಿಗೆ ಸಿಲುಕುವುದು ಸೇರಿದಂತೆ ಮತ್ತಿತರ ಕಾರಣಗಳಿಂದ ಗಾಯಗೊಂಡ ಚಿರತೆಗಳನ್ನು ಬನ್ನೇರುಘಟ್ಟ ಅಥವಾ ಕೂರ್ಗಳ್ಳಿ ಚಾಮುಂಡೇಶ್ವರಿ ಸಂರಕ್ಷಣಾ ಮತ್ತು ಪುನರ್ವಸತಿ ಕೇಂದ್ರದಲ್ಲಿ ಇರಿಸಿ ಆರೈಕೆ ಮಾಡಲಾಗುತ್ತಿತ್ತು. ಕೆಲ ತುರ್ತು ಸಂದರ್ಭಗಳಲ್ಲಿ ಚಿರತೆಗಳನ್ನು ಬನ್ನೇರುಘಟ್ಟಕ್ಕೆ ಸಾಗಿಸಲು 150 ಕಿ.ಮೀ ದೂರ ಕೊಂಡೊಯ್ಯಬೇಕಾಗಿದೆ. ಹೀಗಾಗಿ, ಮೈಸೂರಿನ ವಲಯದಲ್ಲಿ ಚಿರತೆ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಆರಂಭಕ್ಕೆ ಡಿಪಿಆರ್‌ (ವಿಸ್ತೃತ ಯೋಜನಾ ವರದಿ) ತಯಾರಿಸಿ, ಅರಣ್ಯ ಇಲಾಖೆ ಸಚಿವರಿಗೆ ಸಲ್ಲಿಸಲಾಗಿದೆ.

₹70 ಕೋಟಿ ವೆಚ್ಚದ ಡಿಪಿಆರ್: ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಿಗೆ ಹತ್ತಿರವಾಗುವ ಮತ್ತು ಚಿರತೆ ರಕ್ಷಣಾ ಪಡೆ ವಾಹನಗಳು ಓಡಾಡಲು ಅನುಕೂಲವಿರುವ ಇಲವಾಲದಲ್ಲಿ ನಿರ್ಮಿಸಲು 70 ಕೋಟಿ ರೂ. ವೆಚ್ಚದ ಡಿಪಿಆರ್ ತಯಾರಾಗಿದೆ. ಇಲವಾಲದ ಬಳಿ ಇರುವ ಅರಣ್ಯದಲ್ಲಿ 97 ಎಕರೆ ಜಾಗವನ್ನು ಇದಕ್ಕಾಗಿ ಗುರುತಿಸಲಾಗಿದೆ. ಗುಜರಾತ್‌ನಲ್ಲಿ ನಿರ್ಮಿಸಿರುವ ಮಾದರಿಯಲ್ಲೇ ಪ್ಲಾನ್ ಮಾಡಲಾಗಿದೆ. ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಸೆರೆಸಿಗುವ ಚಿರತೆಗಳು ಮತ್ತು ಗಾಯಗೊಂಡ ಚಿರತೆಗಳನ್ನು ಇಲ್ಲಿಗೆ ತಂದು ಆರೈಕೆ ಮಾಡಲು ಬೇಕಾದ ಎಲ್ಲ ರೀತಿಯ ಮೂಲಸೌಲಭ್ಯ ಒದಗಿಸಲು ಯೋಜಿಸಲಾಗಿದೆ.

ಏನೇನು ಸೌಲಭ್ಯ ಇರಲಿವೆ?:ಕೇಂದ್ರದ ಸುತ್ತಲೂ ತಂತಿ ಬೇಲಿ, ಕಣ್ಗಾವಲು ಹಾದಿ
ಸಂರಕ್ಷಣಾ ವಾಹನ ಮತ್ತು ಆಂಬ್ಯುಲೆನ್ಸ್, ಪ್ರಾಥಮಿಕ ಹಂತದ ಫೋರೆನ್ಸಿಕ್ ಫೆಸಿಲಿಟಿ, ಪ್ರಾಥಮಿಕ ಹಂತದ ಡಯಾಗ್ನೋಸಿಸ್ ಫೆಸಿಲಿಟಿ, ನಿಗಾ ನಿಯಂತ್ರಣ ಕೊಠಡಿ, ಟ್ರೀಟ್‌ಮೆಂಟ್ ಅಂಡ್ ಟ್ರಾನ್ಸಿಟ್ ಸೆಂಟರ್, ಕ್ವಾರಂಟೈನ್ ಸೆಂಟರ್, ಮುಕ್ತ ಗಂಡು-ಹೆಣ್ಣು ವಿಹಾರದ ಕೊಠಡಿ ಹಾಗೂ ಮರಣೋತ್ತರ ಪರೀಕ್ಷಾ ಕೊಠಡಿಗಳು ಇರಲಿವೆ.

ಆರೈಕೆ ಮಾಡಿರುವ ಚಿರತೆಗಳು:

ವರ್ಷ ಮೈಸೂರು ಮಂಡ್ಯ
2018-19 14 9
2019-20 18 5
2020-21 21 17
2022-23 42 21
2023-24 74 8
2024-25 28 11

ಡಿಸಿಎಫ್ ಪ್ರಭುಗೌಡ ಮಾಹಿತಿ:ಈ ಬಗ್ಗೆ 'ಈಟಿವಿ ಭಾರತ'ದೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಐ.ಬಿ. ಪ್ರಭುಗೌಡ, ಮೈಸೂರಿನ ಇಲವಾಲದಲ್ಲಿ ಚಿರತೆ ಸಂರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸಚಿವ ಸಂಪುಟದಲ್ಲಿ ಅನುಮೋದನೆ ಕೊಡಿಸಲು ಮನವಿ ಮಾಡಲಾಗಿದೆ. ಈಗಾಗಲೇ ಅರಣ್ಯ ಸಚಿವರು ಯೋಜನೆ ಜಾರಿಗೆ ಉತ್ಸುಕತೆ ತೋರಿ ಒಪ್ಪಿಗೆ ನೀಡಿದ್ದಾರೆ. ಅನುದಾನ ಮಂಜೂರಾದರೆ ಚಿರತೆಗಾಗಿ ಪ್ರತ್ಯೇಕ ಕೇಂದ್ರ ಆರಂಭವಾಗಲಿದೆ. ಇದರಿಂದ ಚಿರತೆಗಳ ಸುರಕ್ಷಿತ ಹಾಗೂ ಅವುಗಳ ಅಪಾಯವನ್ನು ತಪ್ಪಿಸಬಹುದು ಎಂದು ತಿಳಿಸಿದರು.

ಇದನ್ನೂ ಓದಿ:ಸಂಸೆ ಟೀ ಎಸ್ಟೇಟಲ್ಲಿ ಕಾಣಿಸಿಕೊಂಡ 13 ಅಡಿ ಉದ್ದದ ಹೆಬ್ಬಾವು: ವಿಡಿಯೋ

ABOUT THE AUTHOR

...view details