ಬೆಂಗಳೂರು: "ನಾವು ಜಾರಿಗೆ ತಂದಿರುವ ಜನಪರ ಗ್ಯಾರಂಟಿ ಯೋಜನೆಗಳನ್ನು ವಿರೋಧ ಪಕ್ಷದವರಿಂದ ಮಾಡಲು ಆಗಲಿಲ್ಲ. ಅಕ್ಕ-ತಂಗಿ, ತಂದೆ-ಮಗ, ಅಪ್ಪ-ಮಕ್ಕಳ ನಡುವೆ ಜಗಳ ತಂದಿಟ್ಟು, ಭಾವನೆಗಳ ಮೇಲೆ ಆಟವಾಡುವುದೇ ಅವರ ಕೆಲಸ. ಹೀಗೆ ಮಾಡಿ ಎಷ್ಟೋ ಮನೆಗಳನ್ನು ಒಡೆದು ಹಾಕಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಕಂಠೀರವ ಸ್ಟೇಡಿಯಂ ಬಳಿ ಮಾತನಾಡಿದ ಅವರು, "ಮಲ್ಲಿಕಾರ್ಜುನ ಖರ್ಗೆ ಅವರು ಗ್ಯಾರಂಟಿ ವಿಚಾರವಾಗಿ ಗುರವಾರ ಪ್ರಸ್ತಾಪಿಸಿದ ಮಾತುಗಳ ಬಗ್ಗೆ ಮಾತನಾಡಿ, ವಿರೋಧ ಪಕ್ಷದವರಿಗೆ ರಾಜಕೀಯ ಹೊರತಾಗಿ ಯಾವ ವಿಚಾರಗಳೂ ಸಿಗುತ್ತಿಲ್ಲ. ಗ್ಯಾರಂಟಿ ಯೋಜನೆಗಳು ಸಂಸಾರಗಳನ್ನು ಹಾಳು ಮಾಡುತ್ತವೆ ಎಂದು ಹೇಳಿದ್ದರು. ಆದರೆ ಅವರು ಹೇಳಿದಂತೆ ಆಗಲಿಲ್ಲ. ನಮ್ಮ ಕೆಲಸಗಳನ್ನು ನೋಡಿ, ಹೊಟ್ಟೆಕಿಚ್ಚು ಪಡುತ್ತಿದ್ದಾರೆ" ಎಂದು ಟೀಕಿಸಿದರು.
"ಮಲ್ಲಿಕಾರ್ಜುನ ಖರ್ಗೆಯವರು ಹಿರಿಯರು. ಅವರು ಬುದ್ಧಿಮಾತು ಹೇಳಿದರೆ ನಾವು ಕೇಳಬೇಕು. ನಾನು ಶಕ್ತಿ ಯೋಜನೆ ವಿಚಾರವಾಗಿ ಹೇಳಿರುವ ಮಾತುಗಳನ್ನು ಮತ್ತೊಮ್ಮೆ ಎಲ್ಲರೂ ಕೇಳಿಸಿಕೊಂಡು ನೋಡಿ. ಶಕ್ತಿ ಯೋಜನೆ ಕುರಿತು ಶೇ.5-10 ರಷ್ಟು ಮಹಿಳೆಯರ ಅಭಿಪ್ರಾಯಗಳನ್ನು ನಾನು ಹೇಳಿದ್ದೇನೆ ಹೊರತು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಒಂದಷ್ಟು ಜನ ಮಹಿಳೆಯರು ಟಿಕೆಟ್ ತೆಗೆದುಕೊಳ್ಳುತ್ತೇವೆ ಎಂದು ಹೇಳಿದರೂ ಬಸ್ ನಿರ್ವಾಹಕರು ಹಣ ತೆಗೆದುಕೊಳ್ಳಲು ಹೆದರುತ್ತಿದ್ದಾರೆ. ಇದರ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದ್ದೆ ಅಷ್ಟೇ" ಎಂದು ಸ್ಪಷ್ಟಪಡಿಸಿದರು.
ಮಲ್ಲಿಕಾರ್ಜುನ ಖರ್ಗೆ ಅವರು ಒಗ್ಗಟ್ಟಾಗಿ ಇರಿ ಎನ್ನುವ ಸಂದೇಶ ಕೊಟ್ಟಿದ್ದು ಯಾವ ಕಾರಣಕ್ಕೆ ಎಂಬ ಪ್ರಶ್ನೆಗೆ, "ಅವರು ವಿವಿಧ ಸಂದರ್ಭಗಳನ್ನು ವಿವರಿಸಿ ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ. ನಾನು ಅಧ್ಯಕ್ಷನಾದ ಹಾಗೂ ಡಿಸಿಎಂ ಆದ ನಂತರ ಪಕ್ಷ ಹಾಗೂ ಸರ್ಕಾರದಲ್ಲಿ ಯಾವುದಾದರೂ ಅಹಿತಕರ ಘಟನೆಗಳು ನಡೆದಿವೆಯೇ? ನಾವುಗಳು ಅಚ್ಚುಕಟ್ಟಾಗಿ ಸರ್ಕಾರ ಹಾಗೂ ಪಕ್ಷವನ್ನು ನಡೆಸಿಕೊಂಡು ಹೋಗುತ್ತಿದ್ದೇವೆ" ಎಂದು ಡಿಕೆಶಿ ಉತ್ತರಿಸಿದರು.