ಬೆಂಗಳೂರು:ಲೋಕಸಭೆ ಅಭ್ಯರ್ಥಿ ಆಯ್ಕೆ ಸಂಬಂಧ ಸ್ಥಳೀಯ ಮಟ್ಟದಲ್ಲಿ ವಿಚಾರ, ಅಭಿಪ್ರಾಯಗಳನ್ನು ಸಂಗ್ರಹಿಸಿ ಹೈಕಮಾಂಡ್ ನಾಯಕರಿಗೆ ಕಳುಹಿಸುವುದು ನಮ್ಮ ಕರ್ತವ್ಯ. ನಾವು ಅದನ್ನು ಮಾಡಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಮಾತನಾಡಿದ ಅವರು, ಸಿಇಸಿ ಸಭೆ ಸೋಮವಾರಕ್ಕೆ ಮುಂದೂಡಿಕೆಯಾಗಿರುವ ಬಗ್ಗೆ ಕೇಳಿದಾಗ, “ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಬೆಂಗಳೂರಿನಲ್ಲಿದ್ದಾರೆ. ಅವರು ವೈದ್ಯರಿಂದ ಸಮಯ ಪಡೆದಿದ್ದ ಕಾರಣ ಇಲ್ಲಿಗೆ ಆಗಮಿಸಿದ್ದಾರೆ" ಎಂದರು. ಬಿಜೆಪಿಯಲ್ಲಿನ ಟಿಕೆಟ್ ಗೊಂದಲದ ಬಗ್ಗೆ ಕೇಳಿದಾಗ, “ಬಿಜೆಪಿ ಟಿಕೆಟ್ ವಿಚಾರವನ್ನು ಅವರ ಪಕ್ಷದವರು ನೋಡಿಕೊಳ್ಳುತ್ತಾರೆ” ಎಂದರು.
ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿರುವ ಬಗ್ಗೆ ಕೇಳಿದಾಗ "ತಡವಾಗಿ ಸುದ್ದಿ ತಿಳಿಯಿತು. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಹೀಗಾಗಿ ನಾನು ಪ್ರತ್ರಿಕ್ರಿಯೆ ನೀಡುವುದಿಲ್ಲ. ನಮ್ಮ ಸರ್ಕಾರದಲ್ಲಿ ಸಮರ್ಥ ಗೃಹಮಂತ್ರಿಯಾಗಿ ಪರಮೇಶ್ವರ್ ಇದ್ದಾರೆ. ಅವರು ಅಧಿಕಾರಿಗಳಿಂದ ಸಂಪೂರ್ಣ ಮಾಹಿತಿ ಪಡೆದು ಈ ವಿಚಾರವಾಗಿ ಹೆಚ್ಚಿನ ಮಾಹಿತಿ ನೀಡಲಿದ್ದಾರೆ. ಈ ವಿಚಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು ತಿಳಿಸಿದರು.
ಬೆ.ಗ್ರಾಮಾಂತರ ಶಾಸಕರ ಸಭೆ:ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಡಾ.ಸಿ.ಎನ್.ಮಂಜುನಾಥ್ ಸ್ಪರ್ಧೆ ಹಿನ್ನೆಲೆ ಡಿಸಿಎಂ ಡಿ ಕೆ ಶಿವಕುಮಾರ್, ಸಂಸದ ಡಿ.ಕೆ. ಸುರೇಶ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಶಾಸಕರು ಹಾಗೂ ಕಾಂಗ್ರೆಸ್ ಮುಖಂಡರ ಜೊತೆ ಸದಾಶಿವನಗರ ನಿವಾಸದಲ್ಲಿ ಶುಕ್ರವಾರ ಉಪಾಹಾರ ಸಭೆ ನಡೆಸಿದರು. ಶಾಸಕರಾದ ಮಾಗಡಿ ಬಾಲಕೃಷ್ಣ, ಆನೇಕಲ್ ಶಿವಣ್ಣ, ಕುಣಿಗಲ್ ರಂಗನಾಥ್, ಎಂಎಲ್ಸಿಗಳಾದ ಪುಟ್ಟಣ್ಣ, ಎಸ್.ರವಿ, ಮುಖಂಡರಾದ ರಘುನಂದನ್ ರಾಮಣ್ಣ, ಮನೋಹರ್, ಹನುಮಂತರಾಯಪ್ಪ, ಕುಸುಮ ಎಚ್, ಗಂಗಾಧರ್ ಮತ್ತಿತರರು ಭಾಗವಹಿಸಿದ್ದರು.