ಚಿಕ್ಕಮಗಳೂರು:ಮುಂದಿನ ಸಿಎಂ ಡಿ.ಕೆ. ಶಿವಕುಮಾರ್.. ಎಂದು ಕಾರ್ಯಕರ್ತರು ಕೂಗಿದ ಘಟನೆ ಶೃಂಗೇರಿಯಲ್ಲಿ ಇಂದು ನಡೆಯಿತು. ಶೃಂಗೇರಿ ಶಾರದಾ ಮಠದ ಕಾರ್ಯಕ್ರಮದಲ್ಲಿ ಭಾಗಿಯಾಗಲು ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಆಗಮಿಸಿದ್ದ ವೇಳೆ ಕಾರ್ಯಕರ್ತರು ಈ ಘೋಷಣೆ ಕೂಗಿದರು.
ಹೆಲಿಕಾಪ್ಟರ್ನಲ್ಲಿ ಶೃಂಗೇರಿಗೆ ಆಗಮಿಸಿದ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಸ್ಥಳೀಯ ಶಾಸಕ ಟಿ. ಡಿ. ರಾಜೇಗೌಡ ಹಾಗೂ ಕಾಂಗ್ರೆಸ್ ಮುಖಂಡರು ಸ್ವಾಗತಿಸಿದರು. ಈ ವೇಳೆ ಮುಂದಿನ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಎಂದು ಕಾರ್ಯಕರ್ತರಿಂದ ಘೋಷಣೆ ಕೂಗು ಕೇಳಿಬಂತು.
ಕಾರ್ಯಕರ್ತರು, ಡಿ. ಕೆ. ಶಿವಕುಮಾರ್ ಪರ ಘೋಷಣೆ ಕೂಗಿದರು. ಜೊತೆಗೆ ಡಿಸಿಎಂ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು.
ಇದೇ ವೇಳೆ ಮಾತನಾಡಿದ ಡಿ.ಕೆ. ಶಿವಕುಮಾರ್, ನನಗೆ ಯಾರ ಬೆಂಬಲವೂ ಬೇಡ. ನನಗಾಗಿ ಯಾರೂ ಕೂಗೋದು ಬೇಡ. ಯಾವ ನಾಯಕರು, ಶಾಸಕರು, ಬೆಂಬಲಿಗರು ಕೂಗೋದು ಬೇಡ ಎಂದರು.
ಸಿ.ಟಿ. ರವಿ ದೊಡ್ಡ ಡ್ರಾಮಾ ಮಾಸ್ಟರ್ ಆಗಿದ್ದಾರೆ. ಅವರನ್ನು ರಾಷ್ಟ್ರೀಯ ನಾಯಕರು, ಬಿಜೆಪಿ ರಾಷ್ಟ್ರೀಯ ಪದಾಧಿಕಾರಿ ಎಂದು ಭಾವಿಸಿದ್ದೆ. ಅವರ ಮಾತು, ವಿಚಾರ ನೋಡಿದ ನಂತರ ಇಷ್ಟು ಕೀಳು ಮಟ್ಟಕ್ಕೆ ಇಳಿಯುತ್ತಾರೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಈ ಪ್ರಕರಣದಲ್ಲಿ ಅವರು ಬೇರೆ ಯಾರ ಮಾತು ಕೇಳಬೇಕಿಲ್ಲ. ಅವರ ಆತ್ಮಸಾಕ್ಷಿ ಮಾತನ್ನು ಕೇಳಲಿ. ಆ ರೀತಿ ಮಾತನಾಡಬಾರದಿತ್ತು ಎಂದು ಅವರ ಪಕ್ಷದ ನೂರು ನಾಯಕರು ನನ್ನ ಬಳಿ ಹೇಳಿದ್ದಾರೆ. ಅಚಾತುರ್ಯವಾಗಿ ಆ ರೀತಿ ಮಾತಾಡಿದ್ದು, ಕ್ಷಮೆ ಕೇಳುತ್ತೇನೆ ಎಂದಿದ್ದರೆ ಪ್ರಕರಣ ಮುಗಿಯುತ್ತಿತ್ತು. ಅದನ್ನು ಬಿಟ್ಟು ಸುಳ್ಳಿಗೆ ಸುಳ್ಳು ಸೇರಿಸಿಕೊಂಡು ಹೋದರೆ ಪ್ರಯೋಜನವಿಲ್ಲ. ಅವರ ಆರೋಪ ಸುಳ್ಳು. ಅವರದ್ದೇ ಅನೇಕ ತನಿಖಾ ತಂಡಗಳಿವೆಯಲ್ಲ ತನಿಖೆ ಮಾಡಿಸಲಿ ಎಂದು ಸಿ.ಟಿ.ರವಿ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದರು.